Bangladesh Election: ಬಾಂಗ್ಲಾದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಶೇಖ್ ಹಸೀನಾ

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆಯಾದ ಶೇಖ್ ಹಸೀನಾ ಗೆಲುವಿನ ನಗೆ ಬೀರಿದ್ದಾರೆ. 76 ವರ್ಷದ ಶೇಖ್ ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ.

Bangladesh Election: ಬಾಂಗ್ಲಾದೇಶ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಶೇಖ್ ಹಸೀನಾ
ಶೇಖ್ ಹಸೀನಾ
Image Credit source: India Today

Updated on: Jan 08, 2024 | 9:16 AM

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆಯಾದ ಶೇಖ್ ಹಸೀನಾ(Sheikh Hasina) ಗೆಲುವಿನ ನಗೆ ಬೀರಿದ್ದಾರೆ. 76 ವರ್ಷದ ಶೇಖ್ ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ.

ಗೋಪಾಲಗಂಜ್ ಡೆಪ್ಯುಟಿ ಕಮಿಷನರ್ ಮತ್ತು ಚುನಾವಣಾ ಅಧಿಕಾರಿ ಖಾಜಿ ಮಹಬೂಬೂಲ್ ಆಲಂ ಈ ಫಲಿತಾಂಶವನ್ನು ಪ್ರಕಟಿಸಿದರು. ಶೇಖ್ ಹಸೀನಾ ಅವರು 1986 ರಿಂದ ಎಂಟು ಬಾರಿ ಗೋಪಾಲಗಂಜ್-3 ಸ್ಥಾನವನ್ನು ಗೆದ್ದಿದ್ದಾರೆ. ಪ್ರಧಾನಿ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯಲಿದ್ದಾರೆ.

ಮತದಾನ ಆರಂಭವಾದ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾ ಸಿಟಿ ಕಾಲೇಜ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಈ ವೇಳೆ ಅವರ ಪುತ್ರಿ ಸೈಮಾ ವಾಜಿದ್ ಕೂಡ ಜೊತೆಗಿದ್ದರು.

ಮತ್ತಷ್ಟು ಓದಿ: ಬಾಂಗ್ಲಾದೇಶ ಚುನಾವಣೆ: ನಾಲ್ಕನೇ ಬಾರಿಗೆ ಪ್ರಧಾನಿಯಾಗ್ತಾರಾ ಶೇಖ್​ ಹಸೀನಾ

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಹಸೀನಾ, ಭಾರತ ಬಾಂಗ್ಲಾದೇಶದ ವಿಶ್ವಾಸಾರ್ಹ ಸ್ನೇಹಿತ ಎಂದು ಪತ್ರಕರ್ತರಿಗೆ ತಿಳಿಸಿದರು.
ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಅದರ ಮಿತ್ರಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿತ್ತು. ಭಾನುವಾರವೇ ಮತದಾನ ಮುಗಿದ ಬಳಿಕ ಮತ ಎಣಿಕೆ ಆರಂಭವಾಯಿತು.

ಹಿಂಸಾಚಾರದ ಕೆಲವು ಪ್ರತ್ಯೇಕ ಘಟನೆಗಳನ್ನು ಹೊರತುಪಡಿಸಿ, 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಲ್ಲಿ ಮತದಾನವು ಶಾಂತಿಯುತವಾಗಿತ್ತು.

ದೇಶದ ಚುನಾವಣಾ ಆಯೋಗದ ಪ್ರಕಾರ, 42,000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 27 ರಾಜಕೀಯ ಪಕ್ಷಗಳಿಂದ 1,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಅವರನ್ನು ಹೊರತುಪಡಿಸಿ 436 ಸ್ವತಂತ್ರ ಅಭ್ಯರ್ಥಿಗಳೂ ಇದ್ದರು. ಭಾರತದ ಮೂವರು ವೀಕ್ಷಕರು ಸೇರಿದಂತೆ 100ಕ್ಕೂ ಹೆಚ್ಚು ವಿದೇಶಿ ವೀಕ್ಷಕರು 12ನೇ ಸಾರ್ವತ್ರಿಕ ಚುನಾವಣೆಯ ಮೇಲೆ ನಿಗಾ ಇರಿಸಲಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ