ಇತ್ತೀಚಿನ ದಾಖಲೆಯನ್ನು ನೋಡುವುದಾದರೆ, ಏಷ್ಯಾ ಖಂಡದಲ್ಲಿ ಅತಿ ದೀರ್ಘ ಕಾಲ ಸರ್ಕಾರವನ್ನು ಮುನ್ನಡೆಸಿದವರಲ್ಲಿ ಬಾಂಗ್ಲಾದೇಶ್ನ ಶೇಖ್ ಹಸೀನಾ ಕೂಡ ಕಂಡುಬರುತ್ತಾರೆ. ಮಂಗಳವಾರದಂದು ಅವರಿಗೆ 74 ವರ್ಷ ಪೂರ್ತಿ ಆಯಿತು. ತಮ್ಮ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಶೇಖ್ ಹಸೀನಾ ಅವರ ಮೇಲೆ 19 ಹತ್ಯಾ ಪ್ರಯತ್ನಗಳು ಇಲ್ಲಿಯ ತನಕ ಆಗಿದೆ ಎಂದರೆ ನಂಬುತ್ತೀರಾ? ಹೌದು, ಖಂಡಿತಾ ಇದು ಕೂಡ ದಾಖಲೆಯೇ. ಮುಹಮ್ಮದ್ ಎರ್ಷಾದ್ ಅವಧಿಯಲ್ಲಿ ಎರಡು ಸಲ, 1991ರಿಂದ 1996ರ ಮಧ್ಯೆ ಬಿಎನ್ಪಿ ಅಧಿಕಾರಾವಧಿಯಲ್ಲಿ ನಾಲ್ಕು ಬಾರಿ, 1996-2001ರ ಮಧ್ಯೆ ಅವಾಮಿ ಲೀಗ್ ಅಧಿಕಾರದಲ್ಲಿ ಇದ್ದಾಗ ನಾಲ್ಕು ಬಾರಿ, 2001-2006ರ ಮಧ್ಯೆ ಬಿಎನ್ಪಿ- ಜಮಾತ್ ಸರ್ಕಾರ ಇದ್ದಾಗ ನಾಲ್ಕು ಸಲ, ಸೇನೆಯ ಬೆಂಬಲದಲ್ಲಿ ತಾತ್ಕಾಲಿಕ ಸರ್ಕಾರ ಇದ್ದಾಗ ಒಮ್ಮೆ, ಇನ್ನು ಈ ಬಾರಿ ಅವಾಮಿ ಲೀಗ್‌ನ ಅವಧಿಯಲ್ಲಿ ನಾಲ್ಕು ಬಾರಿ ಶೇಖ್ ಹಸೀನಾ ಅವರ ಹತ್ಯೆಗೆ ಯತ್ನ ನಡೆದಿದೆ.
ಬಾಂಗ್ಲಾದೇಶ್ನ ಚಿತ್ತಗಾಂಗ್ನಲ್ಲಿ ಇರುವ ಲಾಲ್ದಿಘಿ ಮೈದಾನದಲ್ಲಿ ಜನವರಿ 24, 1988ರಲ್ಲಿ ಸಾರ್ವಜನಿಕ ಸಭೆ ಆಯೋಜನೆ ಆಗಿತ್ತು. ಆಗ ಅಧಿಕಾರದಲ್ಲಿ ಇದ್ದದ್ದು ಮುಹಮ್ಮದ್ ಎರ್ಷಾದ್. ಎಂಟು ಪಕ್ಷಗಳ ಮೈತ್ರಿಕೂಟದಿಂದ ನಿಗದಿ ಆಗಿದ್ದ ಸಭೆ ಅದು. ಛತ್ತೋಗ್ರಾಮ್ ವಿಮಾನ ನಿಲ್ದಾಣದಿಂದ ತೆರಳುವಾಗ ಶಸ್ತ್ರಧಾರಿಗಳು ಆಕೆಯ ವಾಹನದ ಮೇಲೆ ದಾಳಿ ನಡೆಸಿದರು.
10 ಆಗಸ್ಟ್ 1989ರಂದು ಇಬ್ಬರು ಫ್ರೀಡಂ ಪಾರ್ಟಿ ಸಶಸ್ತ್ರಧಾರಿಗಳು ಢಾಕಾದ ಧನ್ಮೊಂಡಿಯಲ್ಲಿರುವ ಹಸೀನಾ ನಿವಾಸದ ಮೇಲೆ ದಾಳಿ ನಡೆಸಿದರು.
20 ಫೆಬ್ರವರಿ 1997ರಂದು ಕೊಲೆ ಯತ್ನದ ಏಳೂವರೆ ವರ್ಷಗಳ ನಂತರ 16 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ವಿಚಾರಣೆಯು 5 ಜುಲೈ 2009ರಂದು ಆರೋಪಿಯ ವಿರುದ್ಧ ಆರೋಪ ಹೊರಿಸುವ ಮೂಲಕ ಆರಂಭವಾಯಿತು.
11 ಸೆಪ್ಟೆಂಬರ್ 1991ರಂದು ನಾಲ್ಕನೇ ಸಂಸತ್ತಿನ ಉಪಚುನಾವಣೆಯ ಸಮಯದಲ್ಲಿ ಢಾಕಾದ ಧನ್ಮೊಂಡಿಯ ಗ್ರೀನ್ ರೋಡ್ಲ್ಲಿರುವ ಮತದಾನ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾಗ ಹಸೀನಾ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಗುಂಡಿನ ದಾಳಿ ಕಾರಿಗೆ ತಗುಲಿದರೂ ಆಕೆ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು.
23 ಸೆಪ್ಟೆಂಬರ್ 1994ರಂದು ರೈಲು ಬೋಗಿಯಲ್ಲಿ ಶೇಖ್ ಹಸೀನಾ ಪ್ರಯಾಣಿಸುತ್ತಿದ್ದಾಗ ಅದನ್ನೇ ಗುರಿಯಾಗಿಸಿಕೊಂಡು ಅನೇಕ ಗುಂಡು ಹಾರಿಸಲಾಯಿತು. ಆದರೆ ಗುಂಡುಗಳು ಗುರಿ ತಪ್ಪಿದ್ದರಿಂದ ಶೇಖ್ ಹಸೀನಾ ಅವರಿಗೆ ಯಾವುದೇ ಹಾನಿಯಾಗಲಿಲ್ಲ.
1995ರ ಮಾರ್ಚ್ 7ರಂದು ಢಾಕಾದ ಶೇಖ್ ರಸೆಲ್ ಸ್ಕ್ವೇರ್‌ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಸೀನಾ ಮೇಲೆ ಮತ್ತೆ ದಾಳಿ ನಡೆಸಲಾಯಿತು.
7 ಮಾರ್ಚ್ 1996ರಂದು ಹಸೀನಾ ಅವರು ಬಂಗಬಂಧು ಅವೆನ್ಯೂದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಂಡು ಹಾರಿಸಲಾಯಿತು ಮತ್ತು ಮೈಕ್ರೋಬಸ್‌ನಿಂದ ಬಾಂಬ್‌ಗಳನ್ನು ಸಹ ಅವರ ಮೇಲೆ ಎಸೆಯಲಾಯಿತು.
ಪ್ರಧಾನಿ ಹಸೀನಾ ಅವರು 22 ಜುಲೈ 2000ದಂದು ಗೋಪಾಲಗಂಜ್‌ನ ಕೋಟಲೀಪರಾದ ಸ್ಥಳೀಯ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದರು. 20 ಜುಲೈ 2000ದಂದು, ಸೈನ್ಯದ ಸ್ಫೋಟಕ ತಜ್ಞರು 76 ಕೇಜಿ ಮತ್ತು 40 ಕೇಜಿ ತೂಕದ ಬಾಂಬ್‌ಗಳನ್ನು ಮೈದಾನ ಸಮೀಪದಲ್ಲಿ ಪತ್ತೆ ಮಾಡಿದ್ದರು.
ಹಸೀನಾ ಅವರು 30 ಮೇ 2001ರಂದು ಬಾಂಗ್ಲಾದೇಶದ ಖುಲ್ನಾದಲ್ಲಿ ರೂಪಾ ಸೇತುವೆಯನ್ನು ಉದ್ಘಾಟಿಸಲು ದಿನ ನಿಗದಿ ಆಗಿತ್ತು. ಉಗ್ರರು ಉದ್ಘಾಟನಾ ಸ್ಥಳದಲ್ಲಿ ಬಾಂಬ್ ಇಟ್ಟಿದ್ದರು. ಆದರೆ ಅದನ್ನು ಪತ್ತೆ ಹಚ್ಚಿ, ಕೊಲೆ ಸಂಚನ್ನು ವಿಫಲಗೊಳಿಸಲಾಯಿತು ಮತ್ತು ಸ್ಫೋಟಕವನ್ನು ವಶಪಡಿಸಿಕೊಳ್ಳಲಾಯಿತು.
25 ಸೆಪ್ಟೆಂಬರ್ 2001ರಂದು ಹಂಗಾಮಿ ಸರ್ಕಾರದ ಅವಧಿಯಲ್ಲಿ ಶೇಖ್ ಹಸೀನಾ ರಾಜಕೀಯ ಸಮಾವೇಶ ನಡೆಸಲು ಸಿಲ್ಹೆಟ್‌ಗೆ ಹೋಗಿದ್ದರು. ಅಲ್ಲಿ ಬಾಂಬ್ ಇರಿಸುವ ಮೂಲಕ ಭಯೋತ್ಪಾದಕ ಗುಂಪು ಹುಜಿ-ಬಿ ಹಸೀನಾರನ್ನು ಹತ್ಯೆ ಮಾಡಲು ಯೋಜಿಸಿತ್ತು.
4 ಮಾರ್ಚ್ 2002ರಂದು ಆಗಿನ ಪ್ರತಿಪಕ್ಷದ ನಾಯಕಿ ಮತ್ತು ಅವಾಮಿ ಲೀಗ್ ಅಧ್ಯಕ್ಷೆ ಹಸೀನಾ ಅವರ ಮೆರವಣಿಗೆಯು ಬಾಂಗ್ಲಾದೇಶದ ನವೋಗಾಂವ್ ಮೇಲೆ ದಾಳಿ ಆಗಿತ್ತು.
ಬಿಎನ್ಪಿ-ಜಮಾತ್ ಸರ್ಕಾರದ ಅವಧಿಯಲ್ಲಿ 2002ರ ಏಪ್ರಿಲ್ 2ರಂದು ದುಷ್ಕರ್ಮಿಗಳು ಬರಿಸಲ್‌ನ ಗೌರ್ನಾಡಿಯಲ್ಲಿ ಹಸೀನಾ ಅವರ ಬೆಂಗಾವಲಿನ ಮೇಲೆ ಗುಂಡು ಹಾರಿಸಿದ್ದರು.
2004 ರ ಗ್ರೆನೇಡ್ ದಾಳಿಯು ಢಾಕಾದ ಬಂಗಬಂಧು ಅವೆನ್ಯೂದಲ್ಲಿರುವ ಅವಾಮಿ ಲೀಗ್‌ನ ಕೇಂದ್ರ ಕಚೇರಿಯ ಮುಂದೆ ನಡೆದ ಸಮಾವೇಶದಲ್ಲಿ ನಡೆಯಿತು. ಈ ದಾಳಿಯಲ್ಲಿ 24 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಹಸೀನಾ ಅವರು ಹತ್ಯೆ ಪ್ರಯತ್ನದಿಂದ ಸ್ವಲ್ಪದರಲ್ಲೇ ಬದುಕುಳಿದರು.
2006ರಲ್ಲಿ ಅವಾಮಿ ಲೀಗ್ ಮುಖ್ಯಸ್ಥೆ ಹಸೀನಾ ಜೈಲಿನಲ್ಲಿದ್ದಾಗ ಊಟಕ್ಕೆ ವಿಷ ಹಾಕಿ ಕೊಲೆ ಯತ್ನ ನಡೆಸಲಾಯಿತು.
2011ರಲ್ಲಿ ಅಂತರಾಷ್ಟ್ರೀಯ ಗುಂಪು ಮತ್ತು ಕೆಲವು ಪಾಕಿಸ್ತಾನಿ ನಾಗರಿಕರು ಶ್ರೀಲಂಕಾದ ಭಯೋತ್ಪಾದಕ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡು, ಹಸೀನಾರನ್ನು ಹತ್ಯೆ ಮಾಡಲು ಆತ್ಮಹತ್ಯಾ ತಂಡವನ್ನು ರಚಿಸಿತ್ತು.
ತರಬೇತಿ ಪಡೆದ ಮಹಿಳಾ ಉಗ್ರಗಾಮಿಗಳು 2014ರ ಕೊನೆಯಲ್ಲಿ ಹಸೀನಾರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.
(ಮಾಹಿತಿ: ಎಕನಾಮಿಕ್ ಟೈಮ್ಸ್)
ಇದನ್ನೂ ಓದಿ: ಜೆಎಂಬಿ ಭಯೋತ್ಪಾದಕರ ವಿರುದ್ಧ ಬೆಂಗಳೂರಲ್ಲಿ ಎನ್ಐಎ ಚಾರ್ಜ್ಶೀಟ್!