ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ
Bangladesh violence, Hindu man killed: ಬಾಂಗ್ಲಾದೇಶದಲ್ಲಿ ಒಂದೇ ವಾರದ ಅಂತರದಲ್ಲಿ ಎರಡನೇ ಹಿಂದೂ ವ್ಯಕ್ತಿಯ ಕಗ್ಗೊಲೆಯಾಗಿದೆ. ದೀಪು ಚಂದ್ರದಾಸ್ ಹತ್ಯೆಯಾದ ಕೆಲ ದಿನಗಳಲ್ಲಿ ಅಮೃತ್ ಮಂಡಲ್ ಎನ್ನುವ ಹಿಂದೂ ಧರ್ಮೀಯನನ್ನು ದುರುಳರ ಗುಂಪು ಬಲಿಪಡೆದಿದೆ. ರಾಜಬರಿ ಜಿಲ್ಲೆಯಲ್ಲಿ ಡಿ. 24 ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ.

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangladesh violence) ಘಟನೆಗಳು ನಿಲ್ಲುತ್ತಲೇ ಇಲ್ಲ. ರಕ್ತಪಿಪಾಸುಗಳಂತೆ ವರ್ತಿಸುತ್ತಿರುವ ಕೆಲ ಜನರು ಅಲ್ಪಸಂಖ್ಯಾತರನ್ನು ಗುರಿ ಮಾಡಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ದೀಪು ಚಂದ್ರದಾಸ್ ಎನ್ನುವ ಹಿಂದೂ ವ್ಯಕ್ತಿಯನ್ನು ಬಲಿಪಡೆದಿದ್ದ ದುರುಳರು ಇದೀಗ ಮತ್ತೊಬ್ಬ ಹಿಂದೂ ಧರ್ಮೀಯನನ್ನು ಕೊಂದಿದ್ದಾರೆ. ರಾಜ್ಬಾರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ.
ಈ ಘಟನೆ ನಿನ್ನೆ ಬುಧವಾರ ರಾತ್ರಿ 11 ಗಂಟೆಗೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ರಾಜಬರಿ ಜಿಲ್ಲೆಯ ಹೊಸಾಯಿದಂಗ ಓಲ್ಡ್ ಮಾರ್ಕೆಟ್ ಬಳಿ ಜನರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ನ ಮೇಲೆ ಹಲ್ಲೆ ಎಸಗಿದೆ. ಪಂಗಶಾ ಠಾಣೆ ಪೊಲೀಸರ ಪ್ರಕಾರ ಅಮೃತ್ ಮಂಡಲ್ ಹೊಸಾಯಿದಂಗ ಗ್ರಾಮದನಾಗಿದ್ದಾನೆ. ಆತ ಒಬ್ಬ ಸುಲಿಗೆಕೋರನಾಗಿದ್ದನೆಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ ಎಂಬುದು ಪೊಲೀಸರು ನೀಡುತ್ತಿರುವ ಮಾಹಿತಿ.
ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್ಪಿ ನಾಯಕ ತಾರಿಖ್ ರಹಮಾನ್
ಹಿಂದೆ ಇದೇ ರೀತಿ ಹಲ್ಲೆ ಮಾಡಿ ಸಾಯಿಸಿ ಸುಟ್ಟುಹಾಕಲಾಗಿದ್ದ ದೀಪು ಚಂದ್ರದಾಸ್ ವಿರುದ್ಧವೂ ಹೀಗೇ ಆರೋಪಗಳಿದ್ದುವು. ಆತ ಇಸ್ಲಾಮ್ ಧರ್ಮ ನಿಂದನೆ ಮಾಡಿದ್ದಾನೆಂದು ಸಾಯಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಆ ಆರೋಪ ಸುಳ್ಳೆಂಬುದು ಸಾಬೀತಾಗಿತ್ತು. ಈಗ ಸಾಮ್ರಾಟ್ ಮೇಲೂ ಕೂಡ ಸುಲಿಗೆಯ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸುತ್ತಿರಬಹುದು.
ಬಾಂಗ್ಲಾದಲ್ಲಿ ದಟ್ಟವಾಗುತ್ತಿದೆ ಭಾರತ ವಿರೋಧಿ ಮನೋಭಾವ
2024ರ ಬಾಂಗ್ಲಾ ದಂಗೆಯ ರೂವಾರಿಯಾಗಿದ್ದ ಮತ್ತು ಭಾರತ ವಿರೋಧಿ ಧೋರಣೆ ಹೊಂದಿದ್ದ ಉಸ್ಮಾನ್ ಹದಿ ಎಂಬಾತನ ಮೇಲೆ ಡಿಸೆಂಬರ್ 12ರಂದು ಗುಂಡಿನ ದಾಳಿ ಮಾಡಲಾಯಿತು. ಕೆಲ ದಿನಗಳ ನಂತರ ಆತ ಸಾವನ್ನಪ್ಪಿದ್ದ. ಅದಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿವೆ. ಭಾರತ ವಿರೋಧಿ ಮನೋಭಾವ ಹೆಚ್ಚುತ್ತಿದೆ. ಭಾರತದ ರಾಜತಾಂತ್ರಿಕ ಕಚೇರಿಗಳನ್ನು ಗುರಿ ಮಾಡಲಾಗುತ್ತಿದೆ. ಹಿಂದೂ ಧರ್ಮೀಯರನ್ನೂ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




