ಚೀನಾಕ್ಕೆ ಮುಜುಗರ ತಂದ ಅಮೆರಿಕ; ಶೃಂಗಸಭೆಗೆ ತೈವಾನ್​​ಗೆ ಆಮಂತ್ರಣ ನೀಡಿ, ಚೀನಾವನ್ನು ನಿರ್ಲಕ್ಷಿಸಿದ ಬೈಡನ್​

| Updated By: Lakshmi Hegde

Updated on: Nov 24, 2021 | 8:13 AM

ಚೀನಾ -ಅಮೆರಿಕ ವೈರತ್ವ ಜಗಜ್ಜಾಹೀರು. ಯುಎಸ್​ಗೆ ಚೀನಾ ಯಾವತ್ತಿದ್ದರೂ ಸೈದ್ಧಾಂತಿಕ ಶತ್ರು. ಹಾಗೇ ತೈವಾನ್​ ಮೇಲೆ ಕೂಡ ಚೀನಾದ ಕೆಂಗಣ್ಣಿದೆ.

ಚೀನಾಕ್ಕೆ ಮುಜುಗರ ತಂದ ಅಮೆರಿಕ; ಶೃಂಗಸಭೆಗೆ ತೈವಾನ್​​ಗೆ ಆಮಂತ್ರಣ ನೀಡಿ, ಚೀನಾವನ್ನು ನಿರ್ಲಕ್ಷಿಸಿದ ಬೈಡನ್​
ಅಮೆರಿಕ ಅಧ್ಯಕ್ಷ ಜೋ ಬೈಡನ್ (ಸಂಗ್ರಹ ಚಿತ್ರ)
Follow us on

ಡಿಸೆಂಬರ್​​ನಲ್ಲಿ ವರ್ಚ್ಯುವಲ್​ ಆಗಿ ನಡೆಯಲಿರುವ ಪ್ರಜಾಪ್ರಭುತ್ವ ರಾಷ್ಟ್ರಗಳ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ 110 ದೇಶಗಳನ್ನು ಆಹ್ವಾನಿಸಿದ್ದಾರೆ. ಅವರು ಆಮಂತ್ರಣ ನೀಡಿದ ದೇಶಗಳ ಹೆಸರನ್ನು ಅಮೆರಿಕದ ವಿದೇಶಾಂಗ ಇಲಾಖೆಯ ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ. ಬೈಡನ್​ ತಮ್ಮ ಪಾಶ್ಚಿಮಾತ್ರ ಮಿತ್ರರಾಷ್ಟ್ರಗಳಿಗೆ ಆಹ್ವಾನ ನೀಡುವ ಜತೆ, ಇರಾಕ್​, ಭಾರತ, ಪಾಕಿಸ್ತಾನಕ್ಕೂ ಆಹ್ವಾನವಿತ್ತಿದ್ದಾರೆ. ಆದರೆ ಇಲ್ಲಿ ಚೀನಾ ಹೆಸರಿಲ್ಲ. ಅಂದರೆ ಬೈಡನ್​ ಚೀನಾಕ್ಕೆ ಆಹ್ವಾನ ಕೊಟ್ಟಿಲ್ಲ. ಅದರಲ್ಲಿ ವಿಶೇಷವೆಂದರೆ ಚೀನಾದ ವೈರಿ ರಾಷ್ಟ್ರ ತೈವಾನ್​ಗೆ ಆಹ್ವಾನ ಹೋಗಿದೆ. ಹಾಗೇ ಟರ್ಕಿ ಕೂಡ ಈ ಪಟ್ಟಿಯಲ್ಲಿ ಇಲ್ಲ. 

ಚೀನಾ -ಅಮೆರಿಕ ವೈರತ್ವ ಜಗಜ್ಜಾಹೀರು. ಯುಎಸ್​ಗೆ ಚೀನಾ ಯಾವತ್ತಿದ್ದರೂ ಸೈದ್ಧಾಂತಿಕ ಶತ್ರು. ಹಾಗೇ ತೈವಾನ್​ ಮೇಲೆ ಕೂಡ ಚೀನಾದ ಕೆಂಗಣ್ಣಿದೆ. ತೈವಾನ್​ ಆಡಳಿತ ತನ್ನನ್ನು ತಾನು ಸ್ವತಂತ್ರ ಎಂದು ಹೇಳಿಕೊಂಡಿದ್ದರೂ ಚೀನಾ ಅದನ್ನು ಒಪ್ಪುತ್ತಿಲ್ಲ. ಅದು ತಮ್ಮದೇ ಒಂದು ಭಾಗ ಎಂದೇ ಹೇಳಿಕೊಂಡುಬರುತ್ತಿದೆ. ಈಗ ಅಮೆರಿಕ ತೈವಾನ್​​ಗೆ ಆಮಂತ್ರಣಕೊಟ್ಟಿದ್ದು ಚೀನಾದ ಸಿಟ್ಟಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಡಿಸೆಂಬರ್​ 9-10ರಂದು ನಡೆಯಲಿರುವ ವರ್ಚ್ಯುವಲ್​ ಶೃಂಗಸಭೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್​ ಮತ್ತು ಇರಾಕ್​ ಮಾತ್ರ ಪಾಲ್ಗೊಳ್ಳಲಿವೆ. ಇಲ್ಲಿ ಈಜಿಪ್ಟ್​, ಸೌದಿ ಅರೇಬಿಯಾ, ಜೋರ್ಡನ್​, ಕತಾರ್​, ಯುನೈಟೆಡ್​ ಅರಬ್​ ಎಮಿರೇಟ್ಸ್​ಗಳಿಗೆ ಯುಎಸ್ ಆಹ್ವಾನ ನೀಡಿಲ್ಲ.  ಬ್ರೆಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೋ ಅವರು ಸರ್ವಾಧಿಕಾರಿ, ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್​ ಬೆಂಬಲಿಗರು ಎಂಬಂಥ ಟೀಕೆಗಳಿದ್ದರೂ ಅವರಿಗೂ ಶೃಂಗಸಭೆಗೆ ಆಹ್ವಾನ ನೀಡಲಾಗಿದೆ.  ಯುರೋಪ್​​ನಲ್ಲಿ ಪೋಲ್ಯಾಂಡ್​, ಆಫ್ರಿಕಾದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ನೈಜರ್ ದೇಶಗಳು ಪಟ್ಟಿಯಲ್ಲಿ ಸೇರಿವೆ.

ಡಿಸೆಂಬರ್​ನಲ್ಲಿ ಈ ಪ್ರಜಾಪ್ರಭುತ್ವ ಶೃಂಗಸಭೆ ನಡೆಯಲಿದೆ ಎಂದು ಆಗಸ್ಟ್​​ನಲ್ಲಿಯೇ ಘೋಷಿಸಲಾಗಿತ್ತು. ಈ ಶೃಂಗಸಭೆಯಲ್ಲಿ, ಸರ್ವಾಧಿಕಾರದ ವಿರುದ್ಧ ಪ್ರಜೆಗಳ ರಕ್ಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಮಾನವ ಹಕ್ಕುಗಳ ಗೌರವ ಉತ್ತೇಜಿಸುವ ವಿಚಾರಗಳಿಗೆ ಆದ್ಯತೆ ಇರಲಿದೆ ಎಂದು ಆಗಸ್ಟ್​ನಲ್ಲಿಯೇ ಘೋಷಿಸಲಾಗಿದೆ.

ಇದನ್ನೂ ಓದಿ: Gold Price Today: ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುದ್ದಿ​; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ