AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟರ್ಕಿಯ ಉಕ್ಕು ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 17 ಕಾರ್ಮಿಕರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ

ಪಶ್ಚಿಮ ಟರ್ಕಿಯ ಇಜ್ಮಿರ್ ಪ್ರಾಂತ್ಯದಲ್ಲಿರುವ ಪ್ರಮುಖ ಉಕ್ಕು ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಜ್ಮಿರ್ ನಗರದ ಉತ್ತರಕ್ಕಿರುವ ಪ್ರಮುಖ ಬಂದರು ಹಾಗೂ ಶೇರ್ಡ್ ಇಂಡಸ್ಟ್ರಿಯಲ್ ಹಬ್ ಆಗಿರುವ ಅಲಿಯಾಗಾ ಜಿಲ್ಲೆಯ 'ಹಬಾಸ್' ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕದಲ್ಲಿ ಸೋಮವಾರ ಮಧ್ಯಾಹ್ನ ಈ ಭೀಕರ ದುರಂತ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಸ್ಥಳದಲ್ಲೇ ಹಲವು ಕಾರ್ಮಿಕರು ಅಸುನೀಡಿದ್ದು, ಒಟ್ಟು ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಗಾಯಗೊಂಡಿರುವ 12ಕ್ಕೂ ಹೆಚ್ಚು ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ.

ಟರ್ಕಿಯ ಉಕ್ಕು ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 17 ಕಾರ್ಮಿಕರು ಸಾವು, 12ಕ್ಕೂ ಹೆಚ್ಚು ಜನರಿಗೆ ಗಾಯ
ಟರ್ಕಿಯ ಉಕ್ಕು ಕಾರ್ಖಾನೆಯಲ್ಲಿ ಸ್ಫೋಟImage Credit source: AP
ಸುಷ್ಮಾ ಚಕ್ರೆ
|

Updated on: Nov 10, 2026 | 9:28 AM

Share

ಅಂಕಾರ, ನವೆಂಬರ್ 10: ಪಶ್ಚಿಮ ಟರ್ಕಿಯ ಇಜ್ಮಿರ್ ಪ್ರಾಂತ್ಯದ ‘ಹಬಾಶ್’ (HABAS) ಉಕ್ಕು ಕಾರ್ಖಾನೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಜ್ಮಿರ್ ಬಂದರು ನಗರದ ಉತ್ತರಕ್ಕೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಅಲಿಯಾಗಾ ಜಿಲ್ಲೆಯ ಹಬಾಶ್ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕದಲ್ಲಿ ಈ ಭೀಕರ ಅವಘಡ ನಡೆದಿದೆ. ಆರಂಭದಲ್ಲಿ 16 ಮಂದಿ ಮೃತಪಟ್ಟಿರುವುದಾಗಿ ಪ್ರಕಟಿಸಲಾಗಿತ್ತಾದರೂ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರಿಂದ ಮೃತರ ಸಂಖ್ಯೆ 17ಕ್ಕೇರಿದೆ.

ಬಾಯ್ಲರ್ ಬದಲಾಯಿಸುವ ವೇಳೆ ದುರಂತ:

ದ್ರವ ಉಕ್ಕು ಎರಕಹೊಯ್ಯುವ ಪ್ರಕ್ರಿಯೆಯ ವೇಳೆ ಬಾಯ್ಲರ್ ಬದಲಾಯಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಬೃಹತ್ ಕ್ರೇನ್ ಕುಸಿದು ಪ್ರಮುಖ ಕೈಗಾರಿಕಾ ಕುಲುಮೆಗೆ ಬಿದ್ದಿದೆ. ಪ್ರತ್ಯಕ್ಷದರ್ಶಿ ಕಾರ್ಮಿಕ ಯಾಸಿನ್ ಸೆಟಿನರ್ ಪ್ರಕಾರ, ಕ್ರೇನ್‌ನ ಹಗ್ಗ ತುಂಡಾದ ಪರಿಣಾಮ ಸುಮಾರು 120 ಟನ್‌ಗಳಷ್ಟು ಕುದಿಯುವ ದ್ರವ ಉಕ್ಕು ಕುಲುಮೆಯ ಮೇಲೆ ಬಿದ್ದಿದೆ. ಕುಲುಮೆಯೊಳಗಿದ್ದ ವಾಟರ್-ಕೂಲ್ಡ್ ಪ್ಯಾನೆಲ್‌ಗಳ ನೀರು ಮತ್ತು ಕಾದ ದ್ರವ ಉಕ್ಕು ಒಂದಕ್ಕೊಂದು ಸ್ಪರ್ಶಿಸಿ ಭಾರಿ ಪ್ರಮಾಣದ ‘ಹೈಡ್ರೋಜನ್ ಸ್ಫೋಟ’ ಉಂಟಾಗಿದೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಅಬುಧಾಬಿಯಲ್ಲಿ ಉಕ್ರೇನ್-ರಷ್ಯಾ ಮಧ್ಯೆ ಇಂದು ಮತ್ತೆ ಶಾಂತಿ ಮಾತುಕತೆ; ಅಮೆರಿಕದ ಮಧ್ಯಸ್ಥಿಕೆ

“ಇಡೀ ಪ್ರದೇಶದಲ್ಲಿ ಭೂಕಂಪನದ ಅನುಭವವಾಯಿತು. ಕಾರ್ಖಾನೆಯ ಮೇಲ್ಛಾವಣಿಯು ಕರಗಿ ನೀರು ಹರಿದಂತೆ ಉರಿಯುತ್ತಿತ್ತು. ಅಕ್ಷರಶಃ ಪ್ರಳಯದಂತೆ ಕಾಣಿಸುತ್ತಿತ್ತು” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಡೆನಿಜ್ ಉಲ್ಕರ್ ಬಣ್ಣಿಸಿದ್ದಾರೆ.

ಕಾರ್ಖಾನೆಯ ಭದ್ರತಾ ಲೋಪದ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ದುರಂತದಲ್ಲಿ ಸಹೋದರನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಕಾರ್ಖಾನೆಯ ಹೊರಗೆ ಸಾರ್ವಜನಿಕವಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಸಾಕ್ಷಿ ಪ್ರತಿಭಟನೆ ನಡೆಸಿದ್ದು, ತಕ್ಷಣ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ಮಾತುಕತೆ; ಯುದ್ಧದ ಶಾಂತಿಯುತ ಅಂತ್ಯಕ್ಕೆ ಬೆಂಬಲದ ಪುನರುಚ್ಚಾರ

ಕಾರ್ಮಿಕರ ಭದ್ರತಾ ಲೋಪವನ್ನು ಖಂಡಿಸಿ ಹೇಳಿಕೆ ನೀಡಲು ಯತ್ನಿಸಿದ ಇಜಿಯನ್ ವರ್ಕರ್ಸ್ ಕಲೆಕ್ಟಿವ್‌ನ ಇಬ್ಬರು ಪ್ರತಿನಿಧಿಗಳನ್ನು ಪೊಲೀಸರು ಆಸ್ಪತ್ರೆ ಮುಂದೆ ಬಂಧಿಸಿದ್ದಾರೆ. “ಹಬಾಶ್ ಆಡಳಿತ ಮಂಡಳಿಯ ಲಾಭದ ದುರಾಶೆಯೇ ಈ ಮಹಾದುರಂತಕ್ಕೆ ಕಾರಣ” ಎಂದು ಸಂಘಟನೆಯ ವಕ್ತಾರ ಒಕ್ಟಾಯ್ ಟರ್ಕ್ ಆರೋಪಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಈ ಒಂದೇ ಕಾರ್ಖಾನೆಯಲ್ಲಿ 11 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 3 ವಾರಗಳಲ್ಲಿ ಇದು 3ನೇ ಭೀಕರ ಅಪಘಾತ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More