ಲಾಕ್ಡೌನ್ ಸಮಯದಲ್ಲಿ ಸಂವಹನಕ್ಕೆ ಅತ್ಯಂತ ಹೆಚ್ಚು ಬಳಕೆಯಾಗಿದ್ದು ಜೂಮ್ ವಿಡಿಯೋ ಕಾಲ್ ಆ್ಯಪ್. ಕಂಪನಿಗಳ ಮೀಟಿಂಗ್, ವೈಯಕ್ತಿಕ ಮಾತುಕತೆ ಏನೇ ಇರಲಿ ಜನರ ಮೊದಲ ಆದ್ಯತೆ ಜೂಮ್ಗೆ ಆಗಿತ್ತು. ಕೊರೊನಾ ಸಾಂಕ್ರಾಮಿಕದಿಂದ ಜನರಿಗೆ ಹೊರಗೆಲ್ಲೂ ಹೋಗಲಾಗದೆ, ಆಪ್ತರು, ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗದೆ ಇರುವಾಗ ಜೂಮ್ ವಿಡಿಯೋ ಕಾಲ್ ಕೈ ಹಿಡಿದಿದೆ. ಅಷ್ಟೇ ಅಲ್ಲ, ವರ್ಕ್ ಫ್ರಾಂ ಹೋಂನಲ್ಲಿದ್ದ ಉದ್ಯೋಗಿಗಳು ಮೀಟಿಂಗ್ಗೆ ಕೂಡ ಇದನ್ನೇ ಹೆಚ್ಚಾಗಿ ಬಳಸಿದ್ದಾರೆ. ಆದರೆ ಜೆಕ್ ಗಣರಾಜ್ಯದಲ್ಲಿ ಚಿಂಪಾಂಜಿಗಳೂ ಜೂಮ್ ವಿಡಿಯೋ ಕಾಲ್ ಮೂಲಕವೇ ತಮ್ಮ ಸ್ನೇಹಿತರ ಜತೆ ಸಂವಹನ ನಡೆಸಿವೆ.. ಇದು ವಿಚಿತ್ರ ಅನ್ನಿಸಿದರೂ ಸತ್ಯ.
ಬರೀ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಏಕತಾನತೆ ಕಾಡುತ್ತದೆ. ಅದರಲ್ಲೂ ಮೃಗಾಲಯದಲ್ಲಿರುವ ಪ್ರಾಣಿಗಳು ಇನ್ನಷ್ಟು ಪರಿತಪಿಸುತ್ತವೆ. ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟರೆ ಅವರೊಂದಿಗೆ ಆಟವಾಡಿಯಾದರೂ ಸಮಯ ಹೋಗುತ್ತದೆ. ಆದರೆ ಕೊರೊನಾ ಕಾರಣದಿಂದ ಜೂಗಳಿಗೆ ಬರುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಅದರಲ್ಲೂ ಜೆಕ್ ಗಣರಾಜ್ಯದ ದ್ವರ್ ಕ್ರಾಲೋವ್ನ ಸಫಾರಿ ಪಾರ್ಕ್ ವ್ಯಾಪ್ತಿಯಲ್ಲಿರುವ ಝೂನಲ್ಲಿದ್ದ ಚಿಂಪಾಂಜಿಗಳಂತೂ ತುಂಬ ಮಂಕಾಗಿದ್ದವು. ಕೊರೊನಾ ಭಯದಿಂದ ಇಲ್ಲಿಗೆ ಪ್ರವಾಸಿಗರೂ ಬರುತ್ತಿರಲಿಲ್ಲ. ಹೀಗಾಗಿ ಝೂ ಆಡಳಿತವೇ ಒಂದು ವಿನೂತನ ಹೆಜ್ಜೆಯನ್ನಿಟ್ಟಿತು. ಈ ಮೃಗಾಲಯದಿಂದ 150 ಕಿಮೀ ದೂರದಲ್ಲಿರುವ ಬ್ರನೋ ಮೃಗಾಲಯದಲ್ಲಿರುವ ಚಿಂಪಾಂಜಿಗಳು ಹಾಗೂ ದ್ವರ್ ಕ್ರಾಲೋವ್ನ ಸಫಾರಿ ಪಾರ್ಕ್ ವ್ಯಾಪ್ತಿಯಲ್ಲಿರುವ ಝೂನಲ್ಲಿದ್ದ ಚಿಂಪಾಂಜಿಗಳ ನಡುವೆ ಜೂಮ್ ವಿಡಿಯೋ ಕಾಲ್ ಏರ್ಪಡಿಸಿದರು. ದೊಡ್ಡ ಸ್ಕ್ರೀನ್ ಮೇಲೆ ತಮ್ಮಂತೆ ಇರುವ ಚಿಂಪಾಂಜಿಗಳನ್ನು ನೋಡಿ ಎರಡೂ ಮೃಗಾಲಯದಲ್ಲಿರುವ ಸಸ್ತನಿಗಳೂ ಫುಲ್ ಖುಷಿಯಾಗಿವೆ.
ಪ್ರಯೋಗಾತ್ಮಕವಾಗಿ ಕಳೆದ ಗುರುವಾರ ಮೊದಲ ಜೂಮ್ ವಿಡಿಯೋ ಕಾಲ್ ಏರ್ಪಡಿಸಲಾಗಿತ್ತು. ಚಿಂಪಾಂಜಿಗಳ ಮುಖದಲ್ಲಿ ತುಂಬ ಎಕ್ಸೈಟ್ಮೆಂಟ್ ಇತ್ತು. ಪರಸ್ಪರ ಮುಖ ನೋಡಿಕೊಂಡು ಖುಷಿಯಾದವು. ಅವು ಒಂದು ವಿಚಿತ್ರ ಶಬ್ದವನ್ನೂ ಹೊರಡಿಸುತ್ತಿದ್ದವು. ಕೈ, ತಲೆ ಅಲ್ಲಾಡಿಸುತ್ತಿದ್ದವು ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದ್ದಾರೆ. ಈಗೀಗ ಚಿಂಪಾಂಜಿಗಳು ಸ್ಕ್ರೀನ್ ನೋಡುತ್ತಿರುವಾಗ ಏನಾದರೂ ತಿನ್ನುತ್ತ ಕುಳಿತುಕೊಳ್ಳುತ್ತವೆ. ಟಿವಿ ನೋಡುವಾಗ ಮನುಷ್ಯರು ಹೇಗೆಲ್ಲ ಮಾಡುತ್ತಾರೋ, ಅದೇ ವಿಧದಲ್ಲಿ ತಮ್ಮ ವರ್ತನೆ ತೋರುತ್ತವೆ ಎಂದೂ ಅವರು ತಿಳಿಸಿದ್ದಾರೆ. ಚಿಂಪಾಂಜಿಗಳ ಖುಷಿಯನ್ನು ನೋಡಿದ ಮೃಗಾಲಯದ ಸಿಬ್ಬಂದಿ, ಪ್ರತಿದಿನ ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೂ ಜೂಮ್ ವಿಡಿಯೋ ಕಾಲ್ ಆನ್ ಮಾಡಿ ಇಡುತ್ತಾಎ. ಮಾರ್ಚ್ ಕೊನೆವರೆಗೂ ಈ ಪ್ರಯೋಗ ಮಾಡಲಾಗುವುದು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?