ಬೀಚಿಂಗ್: ಚೀನಾದಲ್ಲಿ ಕೊರೊನಾ 4ನೇ ಅಲೆ ವ್ಯಾಪಕವಾಗಿ ಹರಡಿದೆ. ರಾಜಧಾನಿ ಬೀಚಿಂಗ್ ಮತ್ತು ಪ್ರಮುಖ ವಾಣಿಜ್ಯ ನಗರಿ ಶಾಂಘೈನಗರಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಆದೇಶಗಳನ್ನು ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಬೀಚಿಂಗ್ನಲ್ಲಿ ಮೆಟ್ರೊ ಮತ್ತು ಬಸ್ ಸಂಚಾರಗಳನ್ನೂ ಸ್ಥಿಗಿತಗೊಳಿಸಲಾಗಿದೆ. ಹಲವು ಪ್ರಾಂತ್ಯಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗಳಿಸಲಾಗಿದೆ. ಕೊವಿಡ್ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸುತ್ತಿರುವ ಚೀನಾದ ಹಲವು ನಗರಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೂ ಪ್ರಕರಣಗಳು ಸತತವಾಗಿ ಹೆಚ್ಚಾಗುತ್ತಲೇ ಇವೆ. ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಇದೇ ಮೊದಲ ಬಾರಿಗೆ ಕಾರ್ಮಿಕ ದಿನಾಚರಣೆ (ಮೇ ಡೇ) ಸಮಾರಂಭಗಳನ್ನು ರದ್ದುಪಡಿಸಿದೆ. ಚೀನಾದಲ್ಲಿ ಪ್ರತಿ ವರ್ಷ ಮೇ ಡೇ ಸಂದರ್ಭದಲ್ಲಿ ಸರಣಿ ರಜೆಗಳನ್ನು ನೀಡುವುದು ವಾಡಿಕೆ.
ಕೊರೊನಾ ಸೋಂಕಿನ 4ನೇ ಅಲೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ
ಮೇ 1ರಂದು ವಿಶ್ವದ ಹಲವು ದೇಶಗಳು ಕಾರ್ಮಿಕ ಶಕ್ತಿಯನ್ನು ಅಭಿನಂದಿಸುವುದು ವಾಡಿಕೆ. ಕಮ್ಯುನಿಸ್ಟ್ ಸಿದ್ಧಾಂತದ ಅನ್ವಯ ಆಡಳಿತ ನಡೆಸುವ ಚೀನಾದಲ್ಲಿ ಮೇ ಡೇ ಸಂಭ್ರಮ ಇನ್ನೂ ಹೆಚ್ಚು. ಕೊರೊನಾ ಸೋಂಕಿನ 4ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದ 26 ನಗರಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಚೀನಾ ದೇಶದ ಇತರ ನಗರಗಳಿಗೆ ಹೋಲಿಸಿದರೆ ಶಾಂಘೈ ಮತ್ತು ಬೀಚಿಂಗ್ಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಾಗಿವೆ. ಚೀನಾದಲಲ್ಲಿ ಪ್ರತಿದಿನ ಸರಾಸರಿ 7,000 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಅಲ್ಲಿನ ಸರ್ಕಾರ ಸೂಚಿಸಿದೆ.
ಲಾಕ್ಡೌನ್ ಜೊತೆಗೆ ಕೊವಿಡ್-19 ಹತ್ತಿಕ್ಕಲು ಚೀನಾ ಬಳಸುತ್ತಿರುವ ಕಠಿಣ ನಿಯಮಗಳನ್ನು ಅಲ್ಲಿನ ಜನರು ವಿರೋಧಿಸುತ್ತಿದ್ದಾರೆ. ಕೊವಿಡ್ ಹಾಟ್ಸ್ಪಾಟ್ಗಳೆಂದು ಗುರುತಿಸಿದ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಚೀನಾ ಜಾರಿಗಳಿಸಿದೆ. ಶಾಂಘೈನ ನಿವಾಸಿಗಳು ಸರ್ಕಾರದ ವಿರುದ್ಧದ ತಮ್ಮ ಆಕ್ರೋಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹಾಕಿದ್ದಾರೆ. ಕೊವಿಡ್ ನೆಪದಲ್ಲಿ ಜನರನ್ನು ಹಿಂಸಿಸುವ ಅಮಾನವೀಯ ಕ್ರಮಗಳನ್ನು ಹಿಂಪಡೆಯಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಸಮರ್ಪಕ ಆಹಾರ, ಔಷಧಿ ಮತ್ತು ದಿನಬಳಕೆ ವಸ್ತುಗಳ ಸರಬರಾಜು ಇಲ್ಲದ ಪರಿಸ್ಥಿತಿ 10ರಿಂದ 14 ದಿನಗಳ ಕಾಲ ಮನೆಗಳಲ್ಲಿಯೇ ಇರಬೇಕಾಯಿತು. ಆಹಾರ ಕೊರತೆಯ ಕಾರಣದ ಇದ್ದ ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಒಬ್ಬರಿಗೆ ಒಂದು ದಿನಕ್ಕೆ ಒಪ್ಪತ್ತಿನ ಊಟ ಮಾತ್ರ ಸಿಗುವ ಪರಿಸ್ಥಿತಿಯಿತ್ತು ಎಂದು ಅಲ್ಲಿನ ನಿವಾಸಿಗಳು ತಮ್ಮ ಪರಿಸ್ಥಿತಿ ವಿವರಿಸಿದ್ದರು.
ಶಾಂಘೈ ನಿವಾಸಿಗಳು ತಮ್ಮ ಅಪಾರ್ಟ್ಮೆಂಟ್ಗಳಿಂದ ಕಿರುಚಿಕೊಳ್ಳುವ ಹಲವು ವಿಡಿಯೊಗಳು ವೈರಲ್ ಆಗಿವೆ. ಕೊವಿಡ್ ನೆಗೆಟಿವ್ ವರದಿ ಇಲ್ಲದೆ ಯಾರನ್ನೂ ಆಸ್ಪತ್ರೆಗಳು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಇದೂ ಸಹ ಜನರಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ.
ಇದನ್ನೂ ಓದಿ: ಹೊಸ ಒಮಿಕ್ರಾನ್ ರೂಪಾಂತರಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಿ, ಕೊರೊನಾ ಅಲೆಯನ್ನು ಪ್ರಚೋದಿಸಬಹುದು
Published On - 10:39 am, Wed, 4 May 22