ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ(Corona Virus) ತೀವ್ರತೆ ಮತ್ತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇದೀಗ ಸುಮಾರು 4 ಮಿಲಿಯನ್ ಜನಸಂಖ್ಯೆ ಇರುವ ಲಾಂಝೌ ನಗರವನ್ನು ಲಾಕ್ಡೌನ್ ಮಾಡಲಾಗಿದೆ. ಚೀನಾದಲ್ಲಿ ಕೊರೊನಾದಿಂದ ಮತ್ತೆ 29 ಮಂದಿ ಸತ್ತಿದ್ದಾಗಿ ವರದಿಯಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಾಂಝೌ ಚೀನಾದ ವಾಯುವ್ಯ ನಗರವಾಗಿದ್ದು, ಇಂದಿನಿಂದ ಕಠಿಣ ಲಾಕ್ಡೌನ್ ವಿಧಿಸಿ ಸ್ಥಳೀಯ ಸರ್ಕಾರ ಆದೇಶ ಹೊರಡಿಸಿದೆ. ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿ ಇನ್ಯಾವುದೇ ಕಾರಣಕ್ಕೆ ಜನರು ಮನೆಯಿಂದ ಹೊರಗೆ ಬೀಳುವಂತಿಲ್ಲ ಎಂದು ಹೇಳಿದೆ.
ಚೀನಾದಲ್ಲಿ ಕಳೆದ ಒಂದೇ ವಾರದಲ್ಲಿ 11ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಲಾಕ್ಡೌನ್ ಜಾರಿಯಾಗುತ್ತಿದೆ. ಅಕ್ಟೋಬರ್ 17ರಿಂದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲ ತುಂಬ ವೇಗವಾಗಿ ಪ್ರಸರಣ ಆಗುತ್ತಿವೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ತಿಳಿಸಿದ್ದಾರೆ. ಇದಿಷ್ಟಕ್ಕೇ ಮುಗಿಯುವುದಿಲ್ಲ. ಮತ್ತೊಮ್ಮೆ ಚೀನಾದಲ್ಲಿ ಸೋಂಕಿನ ಅಟ್ಟಹಾಸ ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇದೆ ಎಂದೂ ತಿಳಿಸಿದ್ದಾರೆ. ಇದರೊಂದಿಗೆ ಆರೋಗ್ಯ ಸಿಬ್ಬಂದಿಯೂ ಕೂಡ ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಚೀನಾದಲ್ಲಿ ಪ್ರವಾಸಿ ತಾಣಗಳು, ಶಾಲೆಗಳು ಮತ್ತು ಮನರಂಜನಾ ಸ್ಥಳಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚೀನಾದಿಂದ ಬೇರೆ ದೇಶಗಳಿಗೆ ಹೋಗುವ ಕೆಲವು ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದೆ. ಕ್ಸಿಯಾನ್ ಮತ್ತು ಲಾನ್ಸೂದಲ್ಲಿನ ಎರಡು ಮುಖ್ಯ ವಿಮಾನ ನಿಲ್ದಾಣಗಳಿಗೆ ಸುಮಾರು ಶೇ. 60ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬದಂದು ದೇಗುಲಗಳಲ್ಲಿ ಗೋಪೂಜೆ ಮಾಡುವಂತೆ ಕರ್ನಾಟಕ ಸರ್ಕಾರದ ಆದೇಶ
ಪೊಲೀಸ್ ಠಾಣೆಗಳಲ್ಲಿ ರಾಜಿ ಸಂಧಾನ ಮಾಡಬಾರದು: ಸ್ನೇಹಿತ್ ಪುಂಡಾಟ ಕೇಸ್ ಬಗ್ಗೆ ಕಮಲ್ ಪಂತ್ ಪ್ರತಿಕ್ರಿಯೆ