ಕೊವ್ಯಾಕ್ಸಿನ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ 24 ಗಂಟೆಯೊಳಗೆ ಅನುಮೋದನೆ ಸಾಧ್ಯತೆ: ನಿರೀಕ್ಷೆ ಹುಟ್ಟಿಸಿದ ವಕ್ತಾರರ ಹೇಳಿಕೆ
ಮುಂದಿನ 24 ಗಂಟೆಯಲ್ಲೇ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಶಿಫಾರಸ್ಸು ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇದರಿಂದ ಭಾರತದಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ನ್ಯೂಯಾರ್ಕ್: ಭಾರತದ ಸ್ವದೇಶಿ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಪರಿಶೀಲಿಸಲು ಮಂಗಳವಾರ (ಅ.26) ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯುತ್ತಿದೆ. ಈ ಸಭೆಯಲ್ಲೇ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೇ, ಮುಂದಿನ 24 ಗಂಟೆಯಲ್ಲೇ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಶಿಫಾರಸ್ಸು ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇದರಿಂದ ಭಾರತದಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ಸಮಿತಿಯು ಇಂದು ಭಾರತದ ಭಾರತ್ ಬಯೋಟೆಕ್ ಕಂಪನಿಯ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ಬಗ್ಗೆ ಪರಿಶೀಲಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಕೋವಾಕ್ಸಿನ್ ಬಳಕೆಯ ಕುರಿತು WHO ಶಿಫಾರಸು ನಿರೀಕ್ಷಿಸುವುದಾಗಿ ವಕ್ತಾರರು ಹೇಳಿದ್ದಾರೆ.
‘ಎಲ್ಲವೂ ಸರಿ ಇದ್ದರೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ, ತಾಂತ್ರಿಕ ಸಲಹಾ ಸಮಿತಿಗೆ ತೃಪ್ತಿಯಾದರೆ ಮುಂದಿನ 24 ಗಂಟೆಗಳ ಒಳಗೆ ನಾವು ಶಿಫಾರಸುಗಳನ್ನು ನಿರೀಕ್ಷಿಸುತ್ತೇವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಮಾರ್ಗರೆಟ್ ಹ್ಯಾರಿಸ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ‘ಲಸಿಕೆಯನ್ನು ಸುರಕ್ಷಿತ ಮತ್ತು ಪರಿಣಾಮಕಾರಿ’ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಬೇಕು ಎಂದು WHO ಈ ಹಿಂದೆ ಒತ್ತಿಹೇಳಿತ್ತು. ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಲಸಿಕೆಯ ತುರ್ತು ಬಳಕೆಯ ಅನುಮೋದನೆಗಾಗಿ ಏಪ್ರಿಲ್ 19 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಆಸಕ್ತಿಯ ಪತ್ರ (Expression of Interest – EOI) ಸಲ್ಲಿಸಿದೆ.
ತುರ್ತು ಬಳಕೆಗಾಗಿ ಲಸಿಕೆ ಶಿಫಾರಸು ಮಾಡುವ ಮೊದಲು ನಿಯಮಗಳನ್ನು, ಪ್ರಕ್ರಿಯೆಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಇದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಅದನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಬೇಕು. ಲಸಿಕೆಯ ಗುಣಮಟ್ಟ, ಸುರಕ್ಷತೆ, ದಕ್ಷತೆ ಮತ್ತು ಕಾರ್ಯಕ್ಷಮತೆಯ ದತ್ತಾಂಶ ಪರಿಶೀಲನೆಯ ನಂತರ ನಿರ್ದಿಷ್ಟ ಲಸಿಕೆಗಳನ್ನು ಬಳಸುವ ಸ್ವೀಕಾರಾರ್ಹತೆಯನ್ನು ನಿರ್ಧರಿಸಲು ತುರ್ತು ಬಳಕೆಗೆ ಅನುಮೋದನೆ ನೀಡುವ ಪ್ರಕ್ರಿಯೆ ಅಗತ್ಯ. ಇದು ಲಸಿಕೆಯ ಖರೀದಿ, ಬಳಕೆಗೆ ಆಸಕ್ತಿ ಹೊಂದಿರುವ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.
ಭಾರತ್ ಬಯೋಟೆಕ್ ತನ್ನ ಕೋವಾಕ್ಸಿನ್ ಡೇಟಾವನ್ನು ರೋಲಿಂಗ್ ಆಧಾರದ ಮೇಲೆ ಸಲ್ಲಿಸುತ್ತಿದೆ. WHO ತಜ್ಞರು ಈ ಡೇಟಾವನ್ನು ಅದರಂತೆಯೇ ಪರಿಶೀಲಿಸಿದ್ದಾರೆ. ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಕ್ಕರೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದ ಭಾರತದ ಮೊದಲ ಸ್ವದೇಶಿ ಲಸಿಕೆಯಾಗಲಿದೆ, ಇದರಿಂದ ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದವರು, ವಿದೇಶಗಳಿಗೆ ಪ್ರವಾಸ ಮಾಡಲು ಅನುಕೂಲವಾಗುತ್ತದೆ.
ವ್ಯಾಕ್ಸಿನೇಷನ್ ಪ್ರಮಾಣಪತ್ರವು ಕಡ್ಡಾಯವಾಗಿರುವ ದೇಶಗಳಿಗೆ ಪ್ರಯಾಣಿಸಲು ಬಯಸುವ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಸದ್ಯ ತೊಂದರೆ ಎದುರಾಗಿದೆ. ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಅರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಕ್ಕರೇ, ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
ಇದನ್ನೂ ಓದಿ: ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಪರಿಣಾಮಕಾರಿ; ಐಸಿಎಂಆರ್ ಅಧ್ಯಯನ ಇದನ್ನೂ ಓದಿ: ಕೊವಿಶೀಲ್ಡ್-ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕ್ಲಿನಿಕಲ್ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..
Published On - 6:01 pm, Tue, 26 October 21