Sudan Crisis: ಸುಡಾನ್‌ನಲ್ಲಿ ಮಿಲಿಟರಿಯಿಂದ ಕ್ಯಾಬಿನೆಟ್ ವಿಸರ್ಜನೆ; ಪ್ರಧಾನಿ ಬಂಧನ, ತುರ್ತು ಪರಿಸ್ಥಿತಿ ಘೋಷಣೆ
Sudan Coup: ಸುಡಾನ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುಡಾನ್ ಅನ್ನು ಮಿಲಿಟರಿ ಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ರಸ್ತೆಗಿಳಿದ ಜನರ ಮೇಲೆ ಗುಂಡಿನ ದಾಳಿ ನಡೆಸಲಾಯಿತು.
ಸುಡಾನ್: ಸುಡಾನ್‌ನಲ್ಲಿ ಪ್ರಧಾನಮಂತ್ರಿ ಸೇರಿದಂತೆ ಎಲ್ಲ ನಾಯಕರನ್ನೂ ಬಂಧಿಸಲಾಗಿದ್ದು, ಇಡೀ ರಾಷ್ಟ್ರವನ್ನು ಮಿಲಿಟರಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸುಡಾನ್‌ನಲ್ಲಿ ಮಿಲಿಟರಿ ಮುಖ್ಯಸ್ಥ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಸುಡಾನ್‌ನಲ್ಲಿ ಕ್ಷಿಪ್ರಧಂಗೆಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಸುಡಾನ್ ಪ್ರಧಾನಮಂತ್ರಿ ಅಬ್ದುಲ್ಲಾ ಹಮ್ಡೊಕ್ ಅವರನ್ನು ಬಂಧಿಸಲಾಗಿದೆ. ಸುಡಾನ್‌ನ ಮಿಲಿಟರಿ ಧಂಗೆಯೆಬ್ಬಿಸಿ ಇಂದು ಅಧಿಕಾರವನ್ನು ವಶಪಡಿಸಿಕೊಂಡಿತು.
ಸುಡಾನ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುಡಾನ್ ಅನ್ನು ಮಿಲಿಟರಿ ಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ರಸ್ತೆಗಿಳಿದ ಜನರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಈ ಘರ್ಷಣೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಮಿಲಿಟರಿ ಮತ್ತು ನಾಗರಿಕರ ನಡುವೆ ಅಧಿಕಾರವನ್ನು ಹಂಚಿಕೊಂಡಿದ್ದ ಸಾರ್ವಭೌಮ ಮಂಡಳಿಯ ನೇತೃತ್ವ ವಹಿಸಿದ್ದ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್, ಕೌನ್ಸಿಲ್ ಅನ್ನು ವಿಸರ್ಜಿಸಲಾಗಿದೆ.
ಅಬ್ದುಲ್-ಫತ್ತಾಹ್ ಅಲ್-ಬುರ್ಹಾನ್ ಇಂದು ದೂರದರ್ಶನದ ಪ್ರಕಟಣೆಯನ್ನು ಮಾಡಿದ್ದು, ಪ್ರಜಾಪ್ರಭುತ್ವದ ಪರ ಸಾವಿರಾರು ಪ್ರತಿಭಟನಾಕಾರರು ಖಾರ್ಟೂಮ್ ಮತ್ತು ಅದರ ಅವಳಿ ನಗರವಾದ ಓಮ್‌ದುರ್‌ಮನ್‌ನ ಬೀದಿಗಳಲ್ಲಿ ಗಲಾಟೆ ಮಾಡಿದರು. ಸೈನಿಕರು ಹಲವಾರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ ನಂತರ ಅಲ್ಲಿನ ಬಿಕ್ಕಟ್ಟು ಇನ್ನೂ ಹೆಚ್ಚಾಯಿತು.
ಸೋಮವಾರ ಬಂಧನಕ್ಕೊಳಗಾದವರಲ್ಲಿ ಪ್ರಧಾನಿ ಅಬ್ದಲ್ಲಾ ಹಮ್ಡೊಕ್ ಕೂಡ ಸೇರಿದ್ದಾರೆ. ಕ್ಷಿಪ್ರಕ್ರಾಂತಿ ಅಥವಾ ಧಂಗೆಯನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಲು ನಿರಾಕರಿಸಿದ ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಸೇನೆಯು ಟೆಲಿವಿಷನ್ ಮತ್ತು ರೇಡಿಯೋ ಪ್ರಧಾನ ಕಛೇರಿಗಳ ಮೇಲೆ ದಾಳಿ ಮಾಡಿದೆ. ಹಾಗೇ, ಸುಡಾನ್‌ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ. ನಗರದ ಕೆಲವು ರಸ್ತೆಗಳು ಮತ್ತು ಸೇತುವೆಗಳೊಂದಿಗೆ ರಾಜಧಾನಿಯ ವಿಮಾನ ನಿಲ್ದಾಣವನ್ನು ಸಹ ಮುಚ್ಚಲಾಗಿದೆ.
ಒಮರ್ ಅಲ್-ಬಶೀರ್ ಅವರ 30 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿದ ಧಂಗೆಯಿಂದ ಹುಟ್ಟಿದ ಪ್ರಜಾಪ್ರಭುತ್ವ ಪರ ಒಕ್ಕೂಟವು ಕರೆ ಮಾಡಿದ ಪ್ರತಿಭಟನೆಗಳಲ್ಲಿ ಇದುವರೆಗೆ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ. ನಾವು ಸ್ವಾತಂತ್ರ್ಯ ಮತ್ತು ಶಾಂತಿಯ ಕಡೆಗೆ ನಮ್ಮ ಹಾದಿಯನ್ನು ಆರಂಭಿಸಿದ್ದೇವೆ. ಆದರೆ ಕೆಲವು ರಾಜಕೀಯ ಶಕ್ತಿಗಳು ಇನ್ನೂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬೆದರಿಕೆಗಳಿಗೆ ಗಮನ ಕೊಡದೆ ಎಲ್ಲವನ್ನೂ ತಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.
ಜುಲೈ 2023 ಕ್ಕೆ ನಿಗದಿಪಡಿಸಲಾದ ಚುನಾವಣೆಗೆ ದೇಶವನ್ನು ಮುನ್ನಡೆಸಲು ಮಿಲಿಟರಿ ತಾಂತ್ರಿಕ ಸರ್ಕಾರವನ್ನು ನೇಮಿಸುತ್ತದೆ ಎಂದು ಅಲ್-ಬುರ್ಹಾನ್ ಹೇಳಿದ್ದಾರೆ. ವಿಶ್ವ ಬ್ಯಾಂಕ್‌ನ ಅಂಕಿ–ಅಂಶಗಳ ಪ್ರಕಾರ, ಸುಡಾನ್‌ನಲ್ಲಿ ಬಹುತೇಕರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, 4.38 ಕೋಟಿ ಜನಸಂಖ್ಯೆ ಇದೆ.
ಇದನ್ನೂ ಓದಿ: Drone Attack: ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ತುಂಬಿದ ಡ್ರೋನ್ ದಾಳಿ; ಪಾಕಿಸ್ತಾನ ಖಂಡನೆ
ಸೂಡಾನ್ನಲ್ಲಿ ಮಿಲಿಟರಿ ಕ್ಷಿಪ್ರ ಕ್ರಾಂತಿ: ಸೆರೆಮನೆಗೆ ಪ್ರಧಾನಿ, ಸಚಿವರು
Published On - 7:47 pm, Mon, 25 October 21