
ಬೀಜಿಂಗ್: ಚೀನಾದಲ್ಲಿ ಕಳೆದ 24ಗಂಟೆಯಲ್ಲಿ 5280 ಕೊರೊನಾದ ಹೊಸ ಪ್ರಕರಣಗಳು ಪತ್ತೆಯಾಗಿವೆ. ಎರಡು ವರ್ಷಗಳಲ್ಲಿಯೇ ಇದು ಅತ್ಯಂತ ಹೆಚ್ಚು ಕೇಸ್ಗಳು ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ (NHC) ತಿಳಿಸಿದೆ. ಚೀನಾದ ಹಲವು ಕಡೆಗಳಲ್ಲಿ ಒಮಿಕ್ರಾನ್ ವೈರಾಣು ಏರಿಕೆಯಾಗುತ್ತಿದೆ. ಚೀನಾದ ಈಶಾನ್ಯ ಪ್ರಾಂತ್ಯವಾದ ಜಿಲಿನ್ನಲ್ಲಿ ದೇಶೀಯವಾಗಿ ಪ್ರಸರಣ ಶುರುವಾಗಿದೆ. ಇಲ್ಲಿ ಹೊರಗಿಂದ ಬಂದವರಲ್ಲಿ ಅಷ್ಟೇ ಅಲ್ಲ, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಸುಮಾರು 3000 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದೆ.
ಚೀನಾದಾದ್ಯಂತ ಕಳೆದ ಹಲವು ದಿನಗಳಿಂದ ಒಂದೊಂದೇ ಪ್ರ್ಯಾಂತ್ಯಗಳು ಲಾಕ್ ಆಗುತ್ತಿವೆ. ಸುಮಾರು 24 ಮಿಲಿಯನ್ ಜನರು ಇರುವ ಜಿಲಿನ್ ಪ್ರಾಂತ್ಯವನ್ನು ಸೋಲವಾರ ಸೀಲ್ಡೌನ್ ಮಾಡಲಾಗಿದೆ. 2019ರಲ್ಲಿ ಮೊಟ್ಟಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗ 2020ರಲ್ಲಿ ಹುಬೈ ಮತ್ತು ವುಹಾನ್ಗಳನ್ನು ಲಾಕ್ಡೌನ್ ಮಾಡಲಾಗಿತ್ತು. ಅದಾದ ಮೇಲೆ ಕ್ರಮೇಣ ಚೀನಾದಲ್ಲಿ ಕೊರೊನಾ ಕೇಸ್ಗಳಲ್ಲಿ ಇಳಿಕೆಯಾಗುತ್ತ ಬಂದಿತ್ತು. ಆದರೆ ಈಗ ಮತ್ತೆ ವೈರಾಣು ಹರಡುವಿಕೆ ಹೆಚ್ಚಾಗಿದೆ. ಜಿಲಿನ್ನಲ್ಲಿ ಒಮಿಕ್ರಾನ್ ಪ್ರಸರಣವೂ ವೇಗವಾಗಿದೆ.
ಜಿಲಿನ್ ಸೀಲ್ಡೌನ್ ಆಗುವುದಕ್ಕೂ ಮೊದಲು ಚೀನಾದ ದಕ್ಷಿಣ ನಗರವಾದ ಶೆನ್ಝೆನ್ನ್ನು ಲಾಕ್ಡೌನ್ ಮಾಡಲಾಗಿದೆ. ಈ ನಗರ ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿದ್ದು, ಸುಮಾರು 17.5 ಮಿಲಿಯನ್ ಜನರಿದ್ದಾರೆ. ಇಲ್ಲೀಗ ಸದ್ಯ ಒಂದುವಾರದ ಲಾಕ್ಡೌನ್ ಹೇರಲಾಗಿದ್ದು, ಅದಾದ ಬಳಿಕ ಕೊರೊನಾ ಕೇಸ್ಗಳ ಸಂಖ್ಯೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ. ಪೂರ್ವದಲ್ಲಿರುವ ಶಾಂಘೈ ಸಿಟಿಯಿಂದ ದಕ್ಷಿಣದಲ್ಲಿರುವ ಶೆನ್ಝೆನ್ವರೆಗೆ, ಬೀಜಿಂಗ್ನ ಹಲವು ನಗರಗಳು ಸೇರಿ ಅನೇಕ ಕಡೆ ಕೊರೊನಾ ಉತ್ತುಂಗಕ್ಕೇರುತ್ತಿದೆ. ಇನ್ನು ಚೀನಾ ಸರ್ಕಾರ, ಸ್ಥಳೀಯ ಅಧಿಕಾರಿಗಳು ಹಲವು ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೆ. ಸಾಮೂಹಿಕ ತಪಾಸಣೆ, ಲಾಕ್ಡೌನ್ಗಳು, ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಜಿಲಿಯನ್ ಪ್ರಾಂತ್ಯವೆಂದರೆ ರಷ್ಯಾ ಮತ್ತು ಉತ್ತರ ಕೊರಿಯಾ ಗಡಿ ಭಾಗವಾಗಿದ್ದು, ಇಲ್ಲಿನ ಜನರಿಗೆ ತುಸು ಜಾಸ್ತಿ ಎನ್ನಿಸುವಷ್ಟೇ ನಿರ್ಬಂಧ ವಿಧಿಸಲಾಗಿದೆ. ಮನೆ ಬಿಟ್ಟು ಎಲ್ಲಿಗೂ ಹೋಗದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಇಸ್ರೇಲ್ ಮಾದರಿಯಲ್ಲಿ ಗುಲಾಬಿ ಬೆಳೆಯುತ್ತಿರುವ ಎಂಟೆಕ್ ಪದವೀಧರ; ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಕೆ
Published On - 7:56 am, Tue, 15 March 22