ನಮ್ಮಿಂದ ಆತಂಕ ಇದೆ ಎಂದುಕೊಳ್ಳುವುದು ಐತಿಹಾಸಿಕ ಪ್ರಮಾದ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 12, 2022 | 1:19 PM

‘ಚೀನಾ-ಅಮೆರಿಕದ ಸಂಬಂಧದಲ್ಲಿ ಸ್ಥಿರತೆ ಇದ್ದರೆ ಮಾತ್ರ ಎರಡೂ ದೇಶಗಳು ಮತ್ತು ವಿಶ್ವದ ಶಾಂತಿ, ಹಿತಾಸಕ್ತಿ ಕಾಪಾಡಲು ಸಾಧ್ಯ’ ಎಂದು ತಿಳಿಸಿದರು.

ನಮ್ಮಿಂದ ಆತಂಕ ಇದೆ ಎಂದುಕೊಳ್ಳುವುದು ಐತಿಹಾಸಿಕ ಪ್ರಮಾದ: ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಚೀನಾದ ರಕ್ಷಣಾ ಸಚಿವ ಜನರಲ್ ವೇ ಫೆಂಘೆ
Follow us on

ಸಿಂಗಪುರ: ಚೀನಾದಿಂದ ಅಪಾಯವಿದೆ ಎಂದುಕೊಳ್ಳುವುದು ಐತಿಹಾಸಿಕ ಪ್ರಮಾದವಾಗಬಲ್ಲದು. ಚೀನಾವನ್ನು (China) ಶತ್ರುದೇಶ, ತನ್ನ ಏಳ್ಗೆಗೆ ಇರುವ ಅತಂಕ ಎಂದು ಭಾವಿಸುವುದರಿಂದ ಅಪಾಯವೇ ಹೆಚ್ಚು ಎಂದು ಚೀನಾದ ರಕ್ಷಣಾ ಸಚಿವ ಜನರಲ್ ವೇ ಫೆಂಘೆ ಹೇಳಿದರು. ಚೀನಾ-ಅಮೆರಿಕದ (China Ameria) ಸಂಬಂಧಗಳು ಈಗ ಅತಿಮುಖ್ಯ ಮತ್ತು ಸಂಕೀರ್ಣ ಸ್ಥಿತಿಗೆ ತಲುಪಿದೆ ಎಂದು ಹೇಳಿದರು. ಶಾಂಗ್ರಿ-ಲಾ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ‘ಚೀನಾ-ಅಮೆರಿಕದ ಸಂಬಂಧದಲ್ಲಿ ಸ್ಥಿರತೆ ಇದ್ದರೆ ಮಾತ್ರ ಎರಡೂ ದೇಶಗಳು ಮತ್ತು ವಿಶ್ವದ ಶಾಂತಿ, ಹಿತಾಸಕ್ತಿ ಕಾಪಾಡಲು ಸಾಧ್ಯ’ ಎಂದು ತಿಳಿಸಿದರು.

ವಿಶ್ವದ ಶಾಂತಿ ಮತ್ತು ಅಭಿವೃದ್ಧಿಗಾಗಿ ಚೀನಾ ಮತ್ತು ಅಮೆರಿಕ ಸಹಕಾರ ಅತ್ಯಗತ್ಯ. ಚೀನಾ-ಅಮೆರಿಕ ಸಂಘರ್ಷದಿಂದ ನಮ್ಮಿಬ್ಬರಿಗೆ ಮಾತ್ರವಲ್ಲ, ಇತರ ದೇಶಗಳಿಗೂ ಸಮಸ್ಯೆಯಾಗುತ್ತದೆ. ಕೇವಲ ಸ್ಪರ್ಧೆಗಳಿಂದ ದ್ವಿಪಕ್ಷೀಯ ಸಂಬಂಧಗಳು ರೂಪುಗೊಳ್ಳುವುದನ್ನು ಚೀನಾ ವಿರೋಧಿಸುತ್ತದೆ ಎಂದು ಅವರು ಹೇಳಿದರು.

‘ಚೀನಾದಿಂದ ಆತಂಕವಿದೆ, ಅದು ಪ್ರತಿಕೂಲ ದೇಶ ಎಂದೆಲ್ಲಾ ಯೋಚಿಸುವುದು ಐತಿಹಾಸಿಕ ಪ್ರಮಾದವಾಗುತ್ತದೆ. ಚೀನಾವನ್ನು ಶತ್ರುದೇಶ ಎಂದು ಯೋಚಿಸುವುದು ತಪ್ಪು’ ಎಂದು ಅವರು ವಿಶ್ಲೇಷಿಸಿದರು. ಚೀನಾದ ಆಂತರಿಕ ವಿದ್ಯಮಾನಗಳಲ್ಲಿ ಅಮೆರಿಕ ತಲೆಹಾಕಬಾರದು. ಚೀನಾದ ಹಿತಾಸಕ್ತಿಗಳಿಗೆ ಧಕ್ಕೆ ತರಬಾರದು. ಅಮೆರಿಕ ಇಂಥ ಪ್ರವೃತ್ತಿ ನಿಲ್ಲಿಸುವವರೆಗೆ ಎರಡೂ ದೇಶಗಳ ನಡುವಣ ಸಂಬಂಧ ಸುಧಾರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಮೆರಿಕದ ರಕ್ಷಣಾ ವಿಭಾಗದ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಶನಿವಾರವಷ್ಟೇ ತೈವಾನ್​ ವಿಚಾರದಲ್ಲಿ ಚೀನಾದ ನಡೆಯನ್ನು ಖಂಡಿಸಿದ್ದರು. ಈ ವಲಯದಲ್ಲಿ ಸಂಘರ್ಷ ರೂಪಿಸಲು ಚೀನಾ ಯತ್ನಿಸುತ್ತಿದೆ ಎಂದು ದೂರಿದ್ದರು. 1949ರ ಅಂತರ್ಯುದ್ಧದ ನಂತರ ಬೇರ್ಪಟ್ಟಿರುವ ಚೀನಾ ಮತ್ತು ತೈವಾನ್ ನಡುವೆ ಇದೀಗ ಸಂಘರ್ಷ ಪರಿಸ್ಥಿತಿ ಉದ್ಭವಿಸಿದೆ. ತೈವಾನ್ ದ್ವೀಪವನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಹಲವು ಬಾರಿ ಎಚ್ಚರಿಸಿದೆ. ಈ ವಲಯದಲ್ಲಿ ಯುದ್ಧ ಸಿದ್ಧತೆಯನ್ನೂ ಆರಂಭಿಸಿದೆ.

ತೈವಾನ್​ಗೆ ಒತ್ತಾಸೆಯಾಗಿ ನಿಲ್ಲುವ ಅಮೆರಿಕದ ನಿಲುವನ್ನು ಚೀನಾ ವಿರೋಧಿಸುತ್ತಿದೆ. ತೈವಾನ್​ಗೆ ಯುದ್ಧೋಪಕರಣಗಳನ್ನು ಮಾರಾಟಬಾರದು ಎಂದು ಆಗ್ರಹಿಸುತ್ತಿದೆ. ‘ಚೀನಾ ಮಾತೃಭೂಮಿಯ ಏಕೀಕರಣ ಪ್ರಯತ್ನವನ್ನು ನಾವು ಅಂತಿಮ ಘಟ್ಟಕ್ಕೆ ಮುಟ್ಟಿಸುತ್ತೇವೆ. ತೈವಾನ್​ನ ಸ್ವಾತಂತ್ರ್ಯ ಪ್ರಯತ್ನಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದು ಹೇಳಿದದರು. ದಕ್ಷಿಣ ಚೀನಾ ಸಮುದ್ರದಲ್ಲಿ ತೈವಾನ್​ನೊಂದಿಗೆ ಫಿಲಿಪ್ಪೀನ್ಸ್, ಬ್ರುನೈ, ಮಲೇಷಿಯಾ ಮತ್ತು ವಿಯೆಟ್ನಾಂ ದೇಶಗಳೊಂದಿಗೂ ಚೀನಾಕ್ಕೆ ಸಂಘರ್ಷವಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Sun, 12 June 22