ವಾಷಿಂಗ್ಟನ್: ತೊಂಬತ್ತರ ದಶಕದ ಹಿಂದಿನವರೆಗೂ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆದ ರೀತಿಯಲ್ಲಿ ಈಗ ಅಮೆರಿಕ ಮತ್ತು ಚೀನಾ ಮಧ್ಯೆ ಕೋಲ್ಡ್ ವಾರ್ (US China Cold War) ನಡೆಯುತ್ತಿರುವ ರೀತಿಯ ಬೆಳವಣಿಗೆಗಳಾಗುತ್ತಿವೆ. ಇದಕ್ಕೆ ಒಂದು ನಿದರ್ಶನ ಎಂಬಂತೆ, ಚೀನಾದ ಬೇಹುಗಾರಿಕೆ ಬಲೂನುಗಳು (China Spy Balloons) ಅಮೆರಿಕ ದೇಶದ ಮೇಲೆ ಹಾರಾಡುತ್ತಿವೆಯಂತೆ. ಹಾಗಂತ ಅಮೆರಿಕ ಹೇಳಿಕೊಂಡಿದೆ. ಗಮನಾರ್ಹವೆಂದರೆ ಪ್ರಮುಖ ವಾಯುನೆಲೆ ಮತ್ತು ಪರಮಾಣು ಕ್ಷಿಪಣಿಗಳು ಇರುವ ವಾಯವ್ಯ ಭಾಗದಲ್ಲಿ ಚೀನಾದ ಈ ರಹಸ್ಯ ಬಲೂನುಗಳು ಹಾರುತ್ತಿವೆ ಎಂದು ಅಮೆರಿಕ ಹೇಳಿಕೊಂಡಿದೆ.
ಚೀನಾದ ಈ ರಹಸ್ಯ ಬಲೂನುಗಳು ತನ್ನ ಸೂಕ್ಷ್ಮ ಪ್ರದೇಶಗಳ ಮೇಲೆ ಹಾರುತ್ತಿರುವುದು ಅಮೆರಿಕಕ್ಕೆ ಕೆಂಗಣ್ಣು ತಂದಿದೆ. ಈ ಬಲೂನುಗಳನ್ನು ಹೊಡೆದುರುಳಿಸಲು ನಿರ್ಧರಿಸಲಾಗಿತ್ತಾದರೂ ಕೆಳಗೆ ಜನರಿಗೆ ಇದರಿಂದ ತೊಂದರೆ ಆಗಬಹುದು ಎಂದೆಣಿಸಿ ಅದನ್ನು ಕೈಬಿಡಲಾಯಿತಂತೆ. ಬಲೂನು ಹೊಡೆಯುವಂತೆ ಸ್ವತಃ ಅಧ್ಯಕ್ಷ ಜೋ ಬೈಡನ್ ಅವರೇ ಸೂಚಿಸಿದ್ದು ತಿಳಿದುಬಂದಿದೆ.
ಈ ಪ್ರದೇಶದ ಮೇಲೆ ಹಾರುತ್ತಿದ್ದ ಬಲೂನು ಚೀನಾಗೆ ಸೇರಿದ್ದಾಗಿದ್ದು ಅದು ಬೇಹುಗಾರಿಕೆಯ ಉದ್ದೇಶದಿಂದ ಹಾರಿಬಿಡಲಾಗಿದ್ದುದು ಸ್ಪಷ್ಟ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಆದರೆ, ಈ ಬೇಹುಗಾರಿಕೆ ಬಲೂನಿನಿಂದ ಹೆಚ್ಚೇನೂ ತೊಂದರೆ ಆಗುವಂತನಿಸುವುದಿಲ್ಲ. ಗುಪ್ತಚರ ದೃಷ್ಟಿಯಿಂದ ಈ ಬಲೂನು ದೊಡ್ಡ ಅಪಾಯ ತರುವಂತಿಲ್ಲ ಎಂದು ಈ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Air India: ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ತುರ್ತು ಭೂಸ್ಪರ್ಶ
ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರು ಚೀನಾಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಚೀನಾ ಮತ್ತು ಅಮೆರಿಕ ಮಧ್ಯೆ ಇತ್ತೀಚೆಗೆ ಬಿಕ್ಕಟ್ಟು ಹೆಚ್ಚುತ್ತಿದೆ. ಚೀನಾ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳೆಯುವತ್ತ ಸಾಗುತ್ತಿದೆ. ಅಲ್ಲದೇ ಹೇರಳ ನೈಸರ್ಗಿಕ ಸಂಪತ್ತುಗಳಿರುವ ಸೌತ್ ಚೀನಾ ಸಮುದ್ರದ ಬಹಳ ಜಾಗಗಳು ತನ್ನದೆಂದು ಹೇಳಿಕೊಳ್ಳುತ್ತಿದೆ. ತೈವಾನ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಸನ್ನಾಹದಲ್ಲಿದೆ. ಇದೆಲ್ಲವೂ ಅಮೆರಿಕಕ್ಕೆ ತಲೆನೋವು ತಂದಿದೆ. ಚೀನಾದ ಶಕ್ತಿಯನ್ನು ಕುಗ್ಗಿಸಲು ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ತಾನು ಸೇರಿ ಕ್ವಾಡ್ ಗುಂಪು ರಚಿಸಿದೆ. ಚೀನಾವನ್ನು ಉರಿಸಲು ಭಾರತದ ಜೊತೆ ಮಿಲಿಟರಿ ಸಂಬಂಧ ಗಟ್ಟಿಯಾಗಿಸಿಕೊಳ್ಳುತ್ತಿದೆ.