Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ

Islamic Leader On Eradicating Poverty: ಹಣ ಬೇಕೆಂದು ಬಿಕ್ಷೆ ಬೇಡುವ ಬದಲು ಅಣುಬಾಂಬ್ ಇಟ್ಟು ಬೆದರಿಸಿ ಹಣ ವಸೂಲಿ ಮಾಡಿ ಎಂದು ಪಾಕಿಸ್ತಾನದ ಇಸ್ಲಾಮಿಕ್ ನಾಯಕ ಸಾದ್ ರಿಜ್ವಿ ಹೇಳಿಕೆ ನೀಡಿದ್ದಾನೆ.

Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ
ಸಾದ್ ರಿಜ್ವಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 03, 2023 | 12:09 PM

ಇಸ್ಲಾಮಾಬಾದ್: ಪರಮಾಣು ಬಾಂಬ್ (Nuclear Bomb) ಮೂಲಕ ಬೇರೆ ದೇಶಗಳನ್ನು ಹೆದರಿಸಿ ಹಣ ವಸೂಲಿ ಮಾಡುವಂತೆ ಪಾಕಿಸ್ತಾನ ಪ್ರಧಾನಿಗೆ ಅಲ್ಲಿನ ಇಸ್ಲಾಮಿಕ್ ಮುಖಂಡರೊಬ್ಬರು ಸಲಹೆ ನೀಡಿರುವ ಸಂಗತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ (Pakistan Economic Crisis) ದೇಶ ಇಡೀ ಜಗತ್ತಿನ ಮುಂದೆ ಮಂಡಿಯೂರಿ ಬಿಕ್ಷೆ ಬೇಡುವ ಬದಲು ಪರಮಾಣು ಬಾಂಬ್​ನಿಂದ ಬೆದರಿಸಿ ಹಣ ಪಡೆದುಕೊಳ್ಳಬೇಕು ಎಂದಿದ್ದಾರೆ.

ಪ್ರಧಾನಿ ಮತ್ತವರ ಇಡೀ ಸಂಪುಟ ಮತ್ತು ಸೇನಾ ಮುಖ್ಯಸ್ಥರು ಹಣಕಾಸು ನೆರವು ಯಾಚಿಸಲು ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ಇದೆಲ್ಲಾ ಯಾಕೆ ಬೇಕು ಎಂಬುದು ನನ್ನ ಪ್ರಶ್ನೆ. ಪಾಕಿಸ್ತಾನದ ಆರ್ಥಿಕತೆ ಅಪಾಯದ ಸ್ಥಿತಿಯಲ್ಲಿದೆ ಎಂದು ಹೇಳುತ್ತಾರೆ. ನಾನು ಹೇಳುವುದೇನೆಂದರೆ ಒಂದು ಕೈಯಲ್ಲಿ ಕುರಾನ್, ಮತ್ತೊಂದು ಕೈಯಲ್ಲಿ ಅಣು ಬಾಂಬ್​ನ ಸೂಟ್​ಕೇಸ್ ಹಿಡಿದು ಪ್ರಧಾನಿಗಳು ತಮ್ಮ ಸಂಪುಟವನ್ನು ಸ್ವೀಡನ್ ದೇಶಕ್ಕೆ ಕರೆದುಕೊಂಡು ಹೋಗಬೇಕು. ಕುರಾನ್​ನ ಭದ್ರತೆಗಾಗಿ ತಾವು ಬಂದಿದ್ದೇವೆ ಎಂದು ಹೇಳಬೇಕು. ಆಗ ಇಡೀ ಜಗತ್ತೇ ನಿಮ್ಮ ಪಾದಕ್ಕೆ ಬೀಳದೇ ಹೋದರೆ ನನ್ನ ಹೆಸರು ಬೇರೆ ಇಟ್ಟುಕೊಳ್ಳುತ್ತೇನೆಎಂದು ತೆಹ್ರೀಕ್ ಎ ಲಬೇಕ್ ಪಾಕಿಸ್ತಾನ್ ಪಕ್ಷದ ಮುಖ್ಯಸ್ಥ ಸಾದ್ ರಿಜ್ವಿ (Saad Rizvi) ಲಾಹೋರ್​ನಲ್ಲಿ ನಡೆದ ಸಭೆಯೊಂದರಲ್ಲಿ ಹೇಳಿರುವುದು ವರದಿಯಾಗಿದೆ.

ಇದನ್ನೂ ಓದಿ: ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು, ಅವರೆಲ್ಲರ ಡಿಎನ್ಎ ಒಂದೇ: ದತ್ತಾತ್ರೇಯ ಹೊಸಬಾಳೆ

ಸ್ವೀಡನ್ ಮತ್ತು ನೆದರ್​ಲೆಂಡ್ಸ್ ದೇಶಗಳಲ್ಲಿ ಮುಸ್ಲಿಮರ ಪವಿತ್ರ ಕುರಾನ್ ಗ್ರಂಥವನ್ನು ಸುಟ್ಟ ಪ್ರಕರಣಗಳನ್ನು ಸಾದ್ ರಿಜ್ವಿ ಪ್ರಸ್ತಾಪಿಸಿ ಮೇಲಿನಂತೆ ಸಲಹೆ ನೀಡಿದ್ದಾರೆ. ಅವರ ಈ ಸಾರ್ವಜನಿಕ ಭಾಷಣ ಕೇಳಲು 12 ಸಾವಿರ ಜನರು ಸೇರಿದ್ದರೆಂದು ಹೇಳಲಾಗುತ್ತದೆ. ಹೀಗಾಗಿ, ಸಾದ್ ರಿಜ್ವಿ ಅವರ ಈ ಹುಚ್ಚುತನದ ಹೇಳಿಕೆಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.

ಇನ್ನು, ಪಾಕಿಸ್ತಾನದ ಆರ್ಥಿಕತೆ ಶೋಚನೀಯ ಸ್ಥಿತಿಯಲ್ಲಿದೆ. ಅದರ ವಿದೇಶೀ ಮೀಸಲು ನಿಧಿ ದಿನೇ ದಿನೇ ಕುಸಿಯುತ್ತಿದ್ದು, ಕೆಲವೇ ಶತಕೋಟಿಯಷ್ಟು ಹಣ ಮಾತ್ರ ಉಳಿದಿದೆ. ಹಣಕಾಸು ನೆರವಿಗಾಗಿ ಪಾಕಿಸ್ತಾನ ಹತಾಶವಾಗಿ ಹೋಗಿದೆ. ಐಎಂಎಫ್​ನಿಂದ ಸಿಗಬೇಕಾದ ಸಾಲ, ಕೈಗೆ ಬಂದರೂ ಬಾಯಿಗೆ ಬರದು ಎಂಬಂತಾಗಿದೆ. ಪಾಕಿಸ್ತಾನ ಆಡಳಿತದಲ್ಲಿ ಹಣಕಾಸು ಶಿಸ್ತು ಸಮರ್ಪಕವಾಗಿಲ್ಲದಿರುವುದು ಇವೇ ಮುಂತಾದ ಕಾರಣಗಳಿಂದಾಗಿ ಸಾಲವನ್ನು ಐಎಂಎಫ್ ತಡೆಹಿಡಿದಿದೆ. ಇನ್ನೊಂದೆಡೆ ಪಾಕಿಸ್ತಾನ ಸರ್ವಋತು ಸ್ನೇಹ ರಾಷ್ಟ್ರವೆನಿಸಿರುವ ಚೀನಾದಿಂದಲೂ ನಿರೀಕ್ಷಿತ ಸಹಾಯ ಸಿಕ್ಕಿಲ್ಲ. ಅದರ ಇಸ್ಲಾಮಿಕ್ ಮಿತ್ರ ದೇಶಗಳೂ ಪಾಕಿಸ್ತಾನದ ಕೈ ಹಿಡಿದಿಲ್ಲ ಎನ್ನುವುದು ವಾಸ್ತವ.

ಇದನ್ನೂ ಓದಿ: Budget 2023: ಭಾರತದ ಬಜೆಟ್​​ ಖುಷಿ ನೀಡಿದೆ; ತಾಲಿಬಾನ್ ನಾಯಕರು ಹೀಗೆನ್ನಲು ಕಾರಣವಿದೆ

ಭಾರತ ಪರಮಾಣು ಬಾಂಬ್ ಪಡೆದ ಕೆಲ ವರ್ಷಗಳಲ್ಲಿ ಪಾಕಿಸ್ತಾನವೂ ಅಣ್ವಸ್ತ್ರ ದೇಶಗಳ ಪಟ್ಟಿಗೆ ಸೇರಿದೆ. ಗಂಜಿ ತಿಂದರೂ ಪರವಾಗಿ ನಮಗೆ ಪರಮಾಣು ಬಾಂಬ್ ಬೇಕು ಎಂದು ಅಂದಿನ ನಾಯಕರು ಪಣತೊಟ್ಟಿದ್ದರು. ಇವತ್ತು ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ, ತಿನ್ನಲು ಹಲವರಿಗೆ ಗಂಜಿಯೂ ಸಿಗುತ್ತಿಲ್ಲ ಎಂಬಂತಹ ವ್ಯಂಗ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿವೆ.

Published On - 12:09 pm, Fri, 3 February 23