China Taiwan Conflict: ತೈವಾನ್​ನತ್ತ ಚೀನಾದ ಯುದ್ಧನೌಕೆ, ಸಮರ ವಿಮಾನಗಳು; ಅತ್ಯಾಧುನಿಕ ಫೈಟರ್ ಜೆಟ್​ ಪ್ರದರ್ಶಿಸಿ ಸಮರಕೆ ಸಿದ್ಧ ಎಂದ ತೈವಾನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 18, 2022 | 7:09 AM

US vs China: ಅಮೆರಿಕದ ಹಲವು ಯುದ್ಧನೌಕೆಗಳು ನೆರೆಯ ಜಪಾನ್​ನಲ್ಲಿ ಲಂಗರು ಹಾಕಿದ್ದು, ಯಾವುದೇ ಕ್ಷಣದಲ್ಲಿ ತೈವಾನ್ ಕೊಲ್ಲಿ ಪ್ರವೇಶಿಸಲು ಸನ್ನದ್ಧ ಸ್ಥಿತಿಯಲ್ಲಿವೆ.

China Taiwan Conflict: ತೈವಾನ್​ನತ್ತ ಚೀನಾದ ಯುದ್ಧನೌಕೆ, ಸಮರ ವಿಮಾನಗಳು; ಅತ್ಯಾಧುನಿಕ ಫೈಟರ್ ಜೆಟ್​ ಪ್ರದರ್ಶಿಸಿ ಸಮರಕೆ ಸಿದ್ಧ ಎಂದ ತೈವಾನ್
ತೈವಾನ್​ನಲ್ಲಿರುವ ಅಮೆರಿಕ ನಿರ್ಮಿತ ಎಫ್​-16ವಿ ಯುದ್ಧವಿಮಾನ
Follow us on

ತೈಪೆ: ಚೀನಾ ಮತ್ತು ತೈವಾನ್ ನಡುವಣ ಸಂಘರ್ಷ (China Taiwan Conflict) ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ತೈವಾನ್ ಕೊಲ್ಲಿಯಲ್ಲಿ (Taiwan Strait) ಚೀನಾದ ಆಟಾಟೋಪಕ್ಕೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ಚೀನಾ ವಿಶ್ವದ ಇತರೆಡೆಯೂ ಇದೇ ಮಾದರಿಯಲ್ಲಿ ಆಟಾಟೋಪ ಪ್ರದರ್ಶಿಸುತ್ತದೆ ಎಂದು ಅಮೆರಿಕ ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಆದರೆ ಉಕ್ರೇನ್ ಯುದ್ಧದ ನಂತರ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ವಿಶ್ವದ ಹಲವು ದೇಶಗಳು ಮತ್ತೊಂದು ಸಂಘರ್ಷ ಬೇಡ ಎನ್ನುವ ನಿಲುವಿಗೆ ಬಂದಿವೆ. ಈ ನಡುವೆ ‘ಸಮರಾಭ್ಯಾಸ’ದ (China Military Exercise) ನೆಪದಲ್ಲಿ ತೈವಾನ್ ಕೊಲ್ಲಿಯಲ್ಲಿ ಚೀನಾ ಗಸ್ತು ಹೆಚ್ಚಿಸಿದ್ದು, ಇಡೀ ದ್ವೀಪಕ್ಕೆ ದಿಗ್ಬಂಧನ ಹಾಕುವ ತಾಲೀಮು ಮುಂದುವರಿಸಿದೆ.

ಚೀನಾದ ಅತ್ಯಾಧುನಿಕ ಯುದ್ಧವಿಮಾನಗಳು ಹಲವು ಬಾರಿ ತೈವಾನ್​ನ ವಾಯುಗಡಿ ಪ್ರವೇಶಿಸಿದ್ದನ್ನು ತೈವಾನ್ ತೀವ್ರವಾಗಿ ವಿರೋಧಿಸಿದೆ. ಅಮೆರಿಕದ ಹಲವು ಯುದ್ಧನೌಕೆಗಳು ನೆರೆಯ ಜಪಾನ್​ನಲ್ಲಿ ಲಂಗರು ಹಾಕಿದ್ದು, ಯಾವುದೇ ಕ್ಷಣದಲ್ಲಿ ತೈವಾನ್ ಕೊಲ್ಲಿ ಪ್ರವೇಶಿಸಲು ಸನ್ನದ್ಧ ಸ್ಥಿತಿಯಲ್ಲಿವೆ. ತೈವಾನ್ ವಿರುದ್ಧ ಹತ್ತಾರು ಆರ್ಥಿಕ ನಿರ್ಬಂಧಗಳನ್ನು ಹೇರಿರುವ ಚೀನಾ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೊಡೆತಕೊಡಲು ಮುಂದಾಗಿದೆ.

ಈ ಎಲ್ಲ ವಿದ್ಯಮಾನಗಳ ನಡುವೆ ನಿನ್ನೆ (ಆಗಸ್ಟ್ 17) ಮಹತ್ವದ ಬೆಳವಣಿಗೆ ನಡೆದಿದೆ. ತೈವಾನ್ ಇದೇ ಮೊದಲ ಬಾರಿಗೆ ಕ್ಷಿಪಣಿಗಳನ್ನು ಹೊತ್ತಿರುವ ಅತ್ಯಾಧುನಿಕ ಎಫ್-16ವಿ ಫೈಟರ್​ಜೆಟ್ ಯುದ್ಧವಿಮಾನವನ್ನು ಜಗತ್ತಿನ ಎದುರು ಅನಾವರಣಗೊಳಿಸಿದೆ. ರಾತ್ರೋರಾತ್ರಿ ಯುದ್ಧವಿಮಾನದ ಪ್ರಾತ್ಯಕ್ಷಿಕೆ ನಡೆದಿದ್ದು, ‘ದಬ್ಬಾಳಿಕೆ ಸಹಿಸುವುದಿಲ್ಲ. ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕೆ ಸಿದ್ಧ’ ಎಂದು ಪರೋಕ್ಷವಾಗಿ ಆದರೆ ಪ್ರಬಲ ಎನಿಸುವಂಥ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.

ಅಮೆರಿಕ ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿಯ ನಂತರ ಕೆರಳಿದ್ದ ಚೀನಾ ಸಮರಾಭ್ಯಾಸದ ನೆಪದಲ್ಲಿ ತೈವಾನ್ ದ್ವೀಪದ ಸುತ್ತ ಯುದ್ಧನೌಕೆಗಳನ್ನು ನಿಯೋಜಿಸಿ ಖಂಡಾಂತರ ಕ್ಷಿಪಣಿಗಳನ್ನು ಹಾರಿಬಿಡುವ ಮೂಲಕ ಬೆದರಿಸಲು ಯತ್ನಿಸಿತ್ತು. ಕಳೆದ ಒಂದು ತಿಂಗಳಿನಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಶಮನಗೊಂಡಿಲ್ಲ.

ಚೀನಾದ ಸಶಸ್ತ್ರಪಡೆಗಳು ಸಮರಾಭ್ಯಾಸದ ನೆಪದಲ್ಲಿ ತೈವಾನ್ ಮೇಲಿನ ಆಕ್ರಮಣವನ್ನು ಅಭ್ಯಾಸ ಮಾಡುತ್ತಿವೆ. ತೈವಾನ್ ಸಹ ಸಮರಾಭ್ಯಾಸದ ಮೊರೆ ಹೋಗಿದ್ದು, ಚೀನಾ ದಂಡೆತ್ತಿ ಬಂದರೆ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಪರಿಶೀಲಿಸುತ್ತಿದೆ. ಇದೀಗ ಅಮೆರಿಕ ನಿರ್ಮಾಣದ ಎಫ್-16ವಿ ಯುದ್ಧನೌಕೆ ನಿರೋಧಕ ಫೈಟರ್​ಜೆಟ್ ವಿಮಾನಗಳನ್ನು ‘ಸಮರ ಸನ್ನದ್ಧ’ ಸ್ಥಿತಿಯಲ್ಲಿ ಇರಿಸಿಕೊಂಡಿರುವ ತೈವಾನ್ ‘ನಾವು ನಿಮಗೆ ಸುಲಭದ ತುತ್ತಾಗುವವರಲ್ಲ’ ಎಂದು ಚೀನಾಗೆ ಸಂದೇಶ ರವಾನಿಸಿದೆ.

ನ್ಯಾನ್ಸಿ ಪೆಲೊಸಿ ಭೇಟಿಯನ್ನು ನೆಪವಾಗಿಸಿಕೊಂಡಿರುವ ಚೀನಾ, ತೈವಾನ್ ವಿರುದ್ಧದ ಕ್ರಮಗಳನ್ನು ತೀವ್ರಗೊಳಿಸಿದೆ. ಒಂದಲ್ಲ ಒಂದು ದಿನ ಸಂಪೂರ್ಣ ದಿಗ್ಬಂಧನ ಹೇರಿ, ತೈವಾನ್ ನಾಗರಿಕರ ಜೀವಕ್ಕೆ ಸಂಕಷ್ಟ ತರಲಿದೆ ಎಂಬ ಆತಂಕ ತೈವಾನ್ ಸರ್ಕಾರವನ್ನು ಕಾಡುತ್ತಿದೆ. ತೈವಾನ್ ಸಹ ತನ್ನ ಅಮೆರಿಕ ನೆರವಿನಿಂದ ಸೇನಾಪಡೆಯನ್ನು ವೇಗವಾಗಿ ಆಧುನೀಕರಿಸುತ್ತಿದ್ದು, ಸೈನಿಕರ ಸಂಖ್ಯೆ, ರಕ್ಷಣಾ ವೆಚ್ಚವನ್ನು ಹೆಚ್ಚಿಸಿಕೊಂಡಿದೆ.

Published On - 7:05 am, Thu, 18 August 22