ಜಕಾರ್ತಾ: ತನ್ನ ನೆರೆರಾಷ್ಟ್ರಗಳ ಸರಹದ್ದು ಅತಿಕ್ರಮಿಸುವ ಚೀನಾದ ಚಾಳಿ ಮುಂದುವರೆದಿದೆ. ಇಂಡೋನೇಷ್ಯಾದ ಮೀನುಗಾರರು ಸೆಲೆಯಾರ್ ದ್ವೀಪದ ಬಳಿ ಚೀನಾದ ಜಲಾಂತರ್ಗಾಮಿ ಡ್ರೋಣ್ಗಳನ್ನು ಪತ್ತೆಹಚ್ಚಿದ್ದಾರೆ. ಚೀನಾದ ಬೀಜಿಂಗ್ ಹಡಗು ಮಾರ್ಗದಿಂದ ಅನತಿ ದೂರದಲ್ಲೇ ಈ ಡ್ರೋಣ್ಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಮಾಧ್ಯಮಗಳು ಚೀನಾದ ಒಳನುಸುಳುವಿಕೆಯ ಧೋರಣೆಯನ್ನು ಟೀಕಿಸಿವೆ.
ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಈ ಹಡಗು ಮಾರ್ಗದಲ್ಲಿ ಈ ಜಲಾಂತರ್ಗಾಮಿ ಡ್ರೋನ್ಗಳು ಪತ್ತೆಯಾಗಿದ್ದು, ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಇಂಡೋನೇಷ್ಯಾ ಈ ಸಮುದ್ರ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸಿದ್ದು, ಚೀನಾ ಈ ಮುನ್ನವೇ ಈ ಸಮುದ್ರ ಪ್ರದೇಶವು ತನಗೆ ಸೇರಿದ್ದೆಂದು ವಾದ ಮಂಡಿಸಿತ್ತು. ಈ ಜಲಮಾರ್ಗವು ಆಸ್ಟ್ರೇಲಿಯಾಕ್ಕೆ ಸರಕು ಸಾಗಾಣಿಕಾ ಹಡಗು ಸಂಚರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.
ಚೀನಾದ ಡ್ರೋಣ್ಗಳೇ ಎಂದ ತಜ್ಞರು
ರೆಕ್ಕೆಯಂತಹ ರಚನೆಯನ್ನು ಹೊಂದಿರುವ ಈ ಜಲಾಂತರ್ಗಾಮಿ ಡ್ರೋಣ್ಗಳು ಅಷ್ಟೇನೂ ಶಕ್ತಿಯುತವಾಗದಿದ್ದರೂ, ಸಮುದ್ರದಾಳದಿಂದಲೇ ಸುತ್ತಲಿನ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವುಗಳು 225 ಸೆಂ.ಮೀಟರ್ ಉದ್ದ, 50 ಸೆಂ.ಮೀ ಅಗಲದ ರೆಕ್ಕೆ ಮತ್ತು 93 ಸೆಂ. ಮೀ ಉದ್ದದ ಆಂಟೆನಾಗಳನ್ನು ಹೊಂದಿವೆ ಎಂದು ಇಂಡೋನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾ,ಫ್ರಾನ್ಸ್ಗಳು ಸಹ ಇಂತಹ ಜಲಾಂತರ್ಗಾಮಿ ಡ್ರೋಣ್ಗಳನ್ನು ಬಳಸುತ್ತವೆಯಾದರೂ, ಮೀನುಗಾರರಿಗೆ ದೊರೆತ ಡ್ರೋಣ್ಗಳು ಚೀನಾ ತಯಾರಿಸಿದಂತಿವೆ ಎಂದು ವರದಿ ತಿಳಿಸಿದೆ. ಮೂರು ಸೆನ್ಸಾರ್ಗಳನ್ನು ಹೊಂದಿರುವ ಡ್ರೋಣ್ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.
2019ರಲ್ಲೂ ಇಂಡೋನೇಷ್ಯಾ ಮತ್ತು ಸಿಂಗಾಪುರದ ನಡುವಿನ ಮಲಕ್ಕಾ ಜಲಸಂಧಿಯ ಬಳಿ ಪತ್ತೆಯಾಗಿದ್ದವು. 2020 ರ ಜನವರಿಯಲ್ಲಿ ದಕ್ಷಿಣ ಇಂಡೋನೇಷ್ಯಾದ ಸುಂಡಾ ದ್ವೀಪದ ಬಳಿಯೂ ಜಲಾಂತರ್ಗಾಮಿ ಡ್ರೋಣ್ಗಳು ಪತ್ತೆಯಾಗಿದ್ದವು.