ಪಾಕಿಸ್ತಾನದ ಗ್ವಾದರ್​ನಲ್ಲಿ ಬಿಎಲ್​ಎ ದಾಳಿ, 9 ಯೋಧರು ಸೇರಿ 13 ಮಂದಿ ಸಾವು

|

Updated on: Aug 13, 2023 | 5:28 PM

ಪಾಕಿಸ್ತಾನದ ಗ್ವಾದರ್ ಬಳಿ ಚೀನಾದ ಇಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ದಾಳಿ ನಡೆಸಿದೆ. ಘಟನೆಯಲ್ಲಿ 9 ಪಾಕ್ ಯೋಧರು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ಗ್ವಾದರ್​ನಲ್ಲಿ ಬಿಎಲ್​ಎ ದಾಳಿ, 9 ಯೋಧರು ಸೇರಿ 13 ಮಂದಿ ಸಾವು
ಪಾಕಿಸ್ತಾನದ ಗ್ವಾದರ್​ನಲ್ಲಿ ಬಿಎಲ್​ಎ ದಾಳಿ (Photo Credit: ANI)
Follow us on

ಇಸ್ಲಾಮಾಬಾದ್, ಆಗಸ್ಟ್ 13: ಚೀನಾದ ಇಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ದಾಳಿ ನಡೆಸಿದ ಘಟನೆ ಪಾಕಿಸ್ತಾನದ ಗ್ವಾದರ್​ ಬಳಿ ನಡೆದಿದೆ. ಘಟನೆಯಲ್ಲಿ ಒಂಬತ್ತು ಪಾಕ್ ಯೋಧರು ಮತ್ತು ನಾಲ್ವರು ಚೀನೀ ಇಂಜಿನಿಯರ್​​ಗಳು ಸಾವನ್ನಪ್ಪಿದ್ದಾರೆ. ದಾಳಿ ನಂತರ ಅದರ ಹೊಣೆಯನ್ನು ಬಿಎಲ್​ಎ ಹೊತ್ತುಕೊಂಡಿದೆ.

ಪಾಕಿಸ್ತಾನದ ಬೀಜಿಂಗ್-ಹಣಕಾಸಿನ ಗ್ವಾದರ್ ಬಂದರಿನಲ್ಲಿ ಕೆಲಸ ಮಾಡುವ ಚೀನಾದ ಎಂಜಿನಿಯರ್‌ಗಳ ಬೆಂಗಾವಲುಪಡೆಯ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಭಾನುವಾರ ವರದಿ ಮಾಡಿದೆ. ದಾಳಿ ನಡೆದ ಬಗ್ಗೆ ಪಾಕಿಸ್ತಾನ ಭದ್ರತಾ ಏಜೆನ್ಸಿಗಳು ದೃಢಪಡಿಸಿವೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Eiffel Tower: ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ ಕರೆ: ಸಾರ್ವಜನಿಕರ ಪ್ರವೇಶ ನಿರ್ಬಂಧ

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ, ಬಲೂಚಿಸ್ತಾನಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಒಪ್ಪಂದಗಳು ಮಾಡಿಕೊಳ್ಳಬೇಡಿ ಎಂಬ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಚೀನಾದ ವಿರುದ್ಧ ಬಿಎಲ್​ಎ ದಾಳಿಯನ್ನು ನಡೆಸುತ್ತಿದೆ.

ಏಪ್ರಿಲ್ 2022 ರಲ್ಲಿ, ಬಿಎಲ್​ಎ ಮಹಿಳಾ ಆತ್ಮಹುತಿ ಬಾಂಬರ್ ಮೂಲಕ ಮೂವರು ಚೀನೀ ಶಿಕ್ಷಕರನ್ನು ಕೊಂದಿತ್ತು. 2020 ರಲ್ಲಿ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ ಮೇಲಿನ ದಾಳಿಯ ಹೊಣೆಯನ್ನೂ BLA ಹೊತ್ತುಕೊಂಡಿದೆ. 2018ರಲ್ಲಿ ಕರಾಚಿಯಲ್ಲಿರುವ ಚೀನಾದ ದೂತಾವಾಸದ ಮೇಲೆಯೂ ಬಿಎಲ್‌ಎ ಉಗ್ರರು ದಾಳಿ ನಡೆಸಿದ್ದರು. 2021 ರಲ್ಲಿ, ಚೀನೀ ಇಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸನ್ನು ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 9 ಚೀನೀ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 13 ಜನರು ಸಾವನ್ನಪ್ಪಿದರು.

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 13 August 23