Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು

| Updated By: ಗಣಪತಿ ಶರ್ಮ

Updated on: Feb 04, 2023 | 11:26 AM

ಚೀನಾದ ಕಣ್ಗಾವಲು ಬಲೂನ್ ಪತ್ತೆಯಾಗಿರುವುದು ಚೀನಾ ಹಾಗೂ ಅಮೆರಿಕದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರ ಚೀನಾ ಪ್ರವಾಸ ರದ್ದಾಗಿದೆ.

Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು
ಚೀನಾದ 'ಪತ್ತೇದಾರಿ ಬಲೂನ್' ಯೂಸ್ ನಲ್ಲಿ ಪತ್ತೆ
Image Credit source: ABC News
Follow us on

ವಾಷಿಂಗ್ಟನ್: ಚೀನಾದ ಕಣ್ಗಾವಲು ಬಲೂನೊಂದು​ ಅಮೆರಿಕದಲ್ಲಿ ಹಾರಾಡುತ್ತಿರುವುದಾಗಿ ಪೆಂಟಗನ್ (ಅಮೆರಿಕದ ರಕ್ಷಣಾ ಸಚಿವಾಲಯ) (Pentagon) ತಿಳಿಸಿದೆ. ಇದು ಮುಂದಿನ ಕೆಲವು ದಿನಗಳ ವರೆಗೆ ಅಮೆರಿಕ(United States) ವಾಯು ಪ್ರದೇಶದಲ್ಲಿ ಹಾರಾಡುವ ಸಾಧ್ಯತೆ ಇದೆ ಎಂದೂ ಪೆಂಟಗನ್ ಹೇಳಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಲೂನ್​ ಅಮೆರಿಕ ಖಂಡದ ಪೂರ್ವದೆಡೆಗೆ 60,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಶಂಕಿತ ಕಣ್ಗಾವಲು ಬಲೂನ್​ ಮೇಲೆ ಏರೋಸ್ಪೇಸ್ ಡಿಫೆನ್ಸ್ ವಿಭಾಗ ನಿಗಾ ಇರಿಸಿದೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ತಿಳಿಸಿದ್ದಾರೆ. ಬಲೂನ್ ಸದ್ಯ ಅಮೆರಿಕ ಖಂಡದ ಮಧ್ಯ ಭಾಗದಲ್ಲಿದ್ದು ಪೂರ್ವದೆಡೆಗೆ ಚಲಿಸುತ್ತಿದೆ. ಇದರಿಂದ ಸದ್ಯಕ್ಕೆ ನಮ್ಮ ಜನರಿಗಾಗಲೀ ರಕ್ಷಣಾ ಪಡೆಗಳಿಗಾಗಲೀ ನೇರ ಭೀತಿ ಇಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ ಅದರ ಮೇಲೆ ನಿಕಟವಾಗಿ ನಿಗಾ ಇರಿಸಲಾಗುತ್ತಿದ್ದು, ಮುಂದೇನು ಮಾಡಬಹುದು ಎಂಬ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಚೀನಾದ ಕಣ್ಗಾವಲು ಬಲೂನ್ ಪತ್ತೆಯಾಗಿರುವುದು ಚೀನಾ ಹಾಗೂ ಅಮೆರಿಕದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರ ಚೀನಾ ಪ್ರವಾಸ ರದ್ದಾಗಿದೆ. ಹಲವಾರು ವರ್ಷಗಳ ನಂತರ ಅಮೆರಿಕದ ವಿದೇಶಾಂಗ ಸಚಿವರು ಚೀನಾ ಪ್ರವಾಸ ಕೈಗೊಳ್ಳಲು ಮುಂದಾಗಿದ್ದರು.

ಈ ಮಧ್ಯೆ, ಬಲೂನ್​ ಚೀನಾಕ್ಕೆ ಸೇರಿದ್ದು ಎಂಬುದನ್ನು ಅಲ್ಲಿನ ಆಡಳಿತ ಒಪ್ಪಿಕೊಂಡಿದೆ. ಹವಾಮಾನಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಬಲೂನ್​ ಅನ್ನು ಹಾರಿಬಿಡಲಾಗಿದ್ದು, ಅದು ಯೋಜಿತ ಕಕ್ಷೆಯಿಂದ ದೂರ ಸರಿದ ಪರಿಣಾಮ ಅಮೆರಿಕದ ವಾಯು ಪ್ರದೇಶ ಪ್ರವೇಶಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: China Spy Balloons: ಅಮೆರಿಕ ಅಣ್ವಸ್ತ್ರ ತಾಣಗಳ ಸುತ್ತ ಚೀನಾ ರಹಸ್ಯ ಬಲೂನುಗಳ ಹಾರಾಟ?

ಚೀನಾದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈಡರ್, ಅದು ಕಣ್ಗಾವಲು ಬಲೂನ್ ಎಂಬುದು ನಮಗೆ ತಿಳಿದಿದೆ. ಅದು ಸ್ಪಷ್ಟವಾಗಿ ಅಮೆರಿಕದ ವಾಯು ಗಡಿಯನ್ನು ಉಲ್ಲಂಘಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಚೀನಾದ ಬಲೂನ್ ಅನ್ನು ಅಮೆರಿಕ ಏಕೆ ಹೊಡೆದುರುಳಿಸುತ್ತಿಲ್ಲ?

ಚೀನಾದ ಬಲೂನ್ ಪ್ರಸ್ತುತ ವಾಣಿಜ್ಯ ವಿಮಾನಗಳ ಹಾರಾಟದ ಮಿತಿಗಿಂತಲೂ ಎತ್ತರದ ವಾಯು ಪ್ರದೇಶದಲ್ಲಿ ಹಾರಾಡುತ್ತಿದೆ. ತಕ್ಷಣಕ್ಕೆ ಬಲೂನ್​ನಿಂದ ಜನರಿಗಾಗಲೀ ಸೇನೆಗಾಗಲೀ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಅದನ್ನು ಹೊಡೆದುರುಳಿಸಿಲ್ಲ. ಒಂದು ವೇಳೆ ಅದನ್ನು ಹೊಡೆದುರುಳಿಸಿದರೆ ಅದರ ಅವಶೇಷಗಳಿಂದ ಜನರಿಗೆ ಹಾಗೂ ಆಸ್ತಿಗೆ ಹಾನಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ. ಇದೂ ಕೂಡ ಬಲೂನ್ ಹೊಡೆದುರುಳಿಸದಿರಲು ಕಾರಣ ಎಂದು ಪೆಂಟಗನ್ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ