
ಪ್ಯಾರಿಸ್, ಅಕ್ಟೋಬರ್ 19: ಅನೇಕ ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಹಣ ದರೋಡೆ ಘಟನೆಗಳನ್ನು ನೋಡಿದ್ದೇವೆ. ನಿಜ ಜೀವನದಲ್ಲೂ ಹಲವು ಘಟನೆಗಳು ನಡೆದಿವೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿ ಇಂದು ಭಾನುವಾರ ಬೆಳ್ಳಂಬೆಳಗ್ಗೆಯೇ ಭಾರೀ ಅಮೂಲ್ಯ ವಸ್ತುಗಳ ಕಳ್ಳತನ ಆಗಿದೆ. ಫ್ರಾನ್ಸ್ನ ಬಹಳ ಜನಪ್ರಿಯವಾದ ಲೂವ್ರ ಮ್ಯೂಸಿಯಂನಲ್ಲಿ (Louvre Museum) ನೆಪೋಲಿಯನ್ ದೊರೆಯ ಕುಟುಂಬಕ್ಕೆ (Napolean era jewels) ಸೇರಿದ ಕೆಲ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕೇವಲ ಏಳು ನಿಮಿಷದೊಳಗೆ ಕಳ್ಳರ ಕರಾಮತ್ತು ನಡೆದುಹೋಗಿದೆ.
ಲೂವ್ರ ಮ್ಯೂಸಿಯಂ ವಿಶ್ವದ ಅತಿ ದೊಡ್ಡ ಮತ್ತು ಜನಪ್ರಿಯ ಮ್ಯೂಸಿಯಂಗಳಲ್ಲಿ ಒಂದು. ಇಲ್ಲಿ ತೀವ್ರ ಭದ್ರತಾ ವ್ಯವಸ್ಥೆ ಇರುತ್ತದೆ. ಆದರೆ, ಕಳ್ಳರು ಬಹಳ ಸುಲಭವಾಗಿ ಆಭರಣ ಕದ್ದು ಹೋಗಿರುವುದು ಆಶ್ಚರ್ಯ ಮೂಡಿಸಿದೆ. ವರದಿಗಳ ಪ್ರಕಾರ ಮೂರು ಅಥವಾ ನಾಲ್ವರು ವ್ಯಕ್ತಿಗಳಿರುವ ತಂಡವೊಂದು ಈ ಕೆಲಸ ಮಾಡಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ‘ನೋ ಕಿಂಗ್ಸ್’ ಪ್ರತಿಭಟನೆ; ‘ಕಿರೀಟ’ ತೊಟ್ಟು ‘ಕಕ್ಕಸ್ಸು’ ಎರಚುತ್ತಿರುವ ಡೊನಾಲ್ಡ್ ಟ್ರಂಪ್
ಲೂವ್ರ ಮ್ಯೂಸಿಯಂನಲ್ಲಿ ಭಾಗವಾದ ಅಪೋಲೋ ಗ್ಯಾಲರಿಯಲ್ಲಿ (Apollo’s Gallery) ನೆಪೋಲಿಯನ್ ಮತ್ತು ರಾಣಿಯ ಆಭರಣಗಳು ಸೇರಿದಂತೆ ಅಮೂಲ್ಯ ವಸ್ತುಗಳ ಪ್ರದರ್ಶನ ಹಾಕಲಾಗಿರುತ್ತದೆ. ಒಂದು ಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ಸ್ಕೂಟರ್ನಲ್ಲಿ ಬಂದ ಕಳ್ಳರು ಬ್ಯಾಸ್ಕೆಟ್ ಲಿಫ್ಟ್ ಮೂಲಕ ಅಲ್ಲಿಂದ ಅಪೋಲೊ ಗ್ಯಾಲರಿಯನ್ನು ತಲುಪುತ್ತಾರೆ. ತಮ್ಮೊಂದೊಗೆ ತಂದಿದ್ದ ಡಿಸ್ಕ್ ಕಟ್ಟರ್ಗಳ ನೆರವಿನಿಂದ ಕಿಟಕಿಯನ್ನು ಛೇದಿಸಿ ಒಳಗೆ ಪ್ರವೇಶ ಮಾಡುತ್ತಾರೆ.
ನೆಪೋಲಿಯನ್ ಕಾಲದ ಆಭರಣಗಳ ಮೇಲೆ ಕಣ್ಣಿಟ್ಟಿದ್ದ ಕಳ್ಳರು ಒಂಬತ್ತು ಭಾಗಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋಗುತ್ತಾರೆ. ಇವೆಲ್ಲವೂ ಹತ್ತು ನಿಮಿಷಗಳ ಅಂತರದಲ್ಲಿ ನಡೆದು ಹೋಗುತ್ತದೆ ಎಂದು ಹೇಳಲಾಗಿದೆ. ಈ ಒಂಬತ್ತು ಆಭರಣ ಭಾಗಗಳಲ್ಲಿ ಒಂದು ಮ್ಯೂಸಿಯಂ ಹೊರಗೆ ಸಿಕ್ಕಿದೆ. ಅದು ಫ್ರೆಂಚ್ ಮಹಾರಾಣಿಯಾಗಿದ್ದ ಯುಜೀನೀ ಎಂಬಾಕೆಯ ಮುಕುಟಮಣಿಯ ಮುರಿದ ಭಾಗ ಎಂದು ಹೇಳಲಾಗಿದೆ.
ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ
‘ಇದು ನಿಜಕ್ಕೂ ಶಾಕ್ ಕೊಟ್ಟಂತಿದೆ. ಸಿನಿಮಾ ಸ್ಕ್ರಿಪ್ಟ್ ರೀತಿಯಲ್ಲಿ ಕಾಣುತ್ತಿದೆ. ಲೂವ್ರ (Museum) ಅನ್ನು ದರೋಡೆ ಮಾಡುವುದು ಇಷ್ಟು ಸುಲಭವಾ ಎಂಬುದು ನಿಜಕ್ಕೂ ಆಘಾತಕಾರಿ ಎನಿಸುತ್ತದೆ’ ಎಂದು ಪ್ಯಾರಿಸ್ ಸೆಂಟರ್ನ ಮೇಯರ್ ಲೀ ಪ್ಯಾರಿಸಿಯನ್ ಅವರು ಹೇಳಿದ್ದಾರೆ.
ಕಳ್ಳತನವಾದ ಆಭರಣಗಳ ಮೌಲ್ಯ ಎಷ್ಟೆಂದು ನಿರ್ದಿಷ್ಟವಾಗಿ ಹೇಳಲಾಗಿಲ್ಲ. ಆದರೆ, ಎರಡು ಶತಮಾನದ ಹಿಂದಿನ ಕಾಲಘಟ್ಟದ ಈ ಆಭರಣಗಳು ಬೆಲೆ ಕಟ್ಟಲಾಗದ ಅಮೂಲ್ಯ ವಸ್ತುಗಳೆಂದು ಪರಿಗಣಿತವಾಗಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ