ಭೂಮಿಗೆ ಪ್ಲಾಸ್ಟಿಕ್ ತಿನ್ನಿಸುತ್ತಿರುವ ಆಹಾರ ಕಂಪೆನಿಗಳು.. ಇದೆಂಥಾ ‘ಮಣ್ಣು’ ತಿನ್ನೋ ಕೆಲಸ?

| Updated By: ಆಯೇಷಾ ಬಾನು

Updated on: Dec 08, 2020 | 7:38 AM

ಕೋಕಾ-ಕೋಲಾ ಉತ್ಪಾದಿಸುವ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಜಗತ್ತಿನ ಹಲವು ರಾಷ್ಟ್ರಗಳ ಸಮುದ್ರ ತೀರ, ಪಾರ್ಕ್​ ಮತ್ತಿತರ ಪ್ರವಾಸಿ ತಾಣಗಳಲ್ಲಿ ಸಿಕ್ಕಿವೆ.

ಭೂಮಿಗೆ ಪ್ಲಾಸ್ಟಿಕ್ ತಿನ್ನಿಸುತ್ತಿರುವ ಆಹಾರ ಕಂಪೆನಿಗಳು.. ಇದೆಂಥಾ ‘ಮಣ್ಣು’ ತಿನ್ನೋ ಕೆಲಸ?
ಸಾಂದರ್ಭಿಕ ಚಿತ್ರ
Follow us on

ಸತತ ಮೂರು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಗೆ ಕಾರಣವಾಗಿರುವ ಸಂಸ್ಥೆಗಳು ಎಂಬ ಅಪಖ್ಯಾತಿಗೆ ಕೋಕಾ-ಕೋಲಾ, ಪೆಪ್ಸಿಕೋ ಮತ್ತು ನೆಸ್ಲೆ ಗುರಿಯಾಗಿವೆ. ಬ್ರೇಕ್​ ಫ್ರೀ ಫ್ರಂ ಪ್ಲಾಸ್ಟಿಕ್ ಸಂಸ್ಥೆಯ ಸಮೀಕ್ಷೆಯಲ್ಲಿ ಈ ಅಂಶ ಬಯಲಿಗೆ ಬಂದಿದೆ. ಕೋಕಾ-ಕೋಲಾ ಪ್ಲಾಸ್ಟಿಕ್​ ಮೂಲಕ ಪರಿಸರವನ್ನು ಮಲಿನಗೊಳಿಸುತ್ತಿರುವ ವಿಶ್ವದ ನಂ.1 ಸಂಸ್ಥೆಯಾಗಿದ್ದು, ಪೆಪ್ಸಿಕೋ ಮತ್ತು ನೆಸ್ಲೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಕಳೆದ ಎರಡು ವರ್ಷಗಳಲ್ಲೂ ಪ್ಲಾಸ್ಟಿಕ್​ ತ್ಯಾಜ್ಯ ಉತ್ಪಾದನೆಯಲ್ಲಿ ಮುಂದಿದ್ದ ಈ ಸಂಸ್ಥೆಗಳು ತಮ್ಮ ತಪ್ಪನ್ನು ಇನ್ನೂ ತಿದ್ದಿಕೊಂಡಿಲ್ಲ. ತಮ್ಮಿಂದ ಉಂಟಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿಯೇ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್
ಕೋಕಾ-ಕೋಲಾ ಉತ್ಪಾದಿಸುವ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಜಗತ್ತಿನ ಹಲವು ರಾಷ್ಟ್ರಗಳ ಸಮುದ್ರ ತೀರ, ಪಾರ್ಕ್​ ಮತ್ತಿತರ ಪ್ರವಾಸಿ ತಾಣಗಳಲ್ಲಿ ಸಿಕ್ಕಿವೆ. ಕಳೆದ ಬಾರಿಯ ಸಮೀಕ್ಷೆಯಲ್ಲಿ ಒಟ್ಟು 51 ರಾಷ್ಟ್ರಗಳ ಪೈಕಿ 37 ರಾಷ್ಟ್ರಗಳಲ್ಲಿ ತ್ಯಾಜ್ಯ ಪತ್ತೆಯಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಇನ್ನೂ ಬಿಗಡಾಯಿಸಿದ್ದು ಸಮೀಕ್ಷೆಯಲ್ಲಿ ಪಾಲ್ಗೊಂಡ 55 ದೇಶಗಳ ಪೈಕಿ 51 ದೇಶಗಳಲ್ಲಿ ಕೋಕಾ-ಕೋಲಾ ಕಂಪೆನಿಯ ತ್ಯಾಜ್ಯ ಅತ್ಯಧಿಕ ಪ್ರಮಾಣದಲ್ಲಿ ಸಿಕ್ಕಿದೆ.

ನೆಸ್ಲೆ ಮತ್ತು ಪೆಪ್ಸಿಕೋದ ಒಟ್ಟು ತ್ಯಾಜ್ಯದ ಪ್ರಮಾಣ ಕೋಕಾ-ಕೋಲಾ ಸಂಸ್ಥೆಯ ತ್ಯಾಜ್ಯಕ್ಕೆ ಸಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನೆಲ್ಲೆಡೆ ಒಟ್ಟು 15,000 ಸ್ವಯಂ ಸೇವಕರು ಈ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದಾರೆ.

ಸಿಂಗಲ್​ ಯೂಸ್​ ಪ್ಲಾಸ್ಟಿಕ್​ ಉತ್ಪಾದಿಸುವ ಕಂಪೆನಿಗಳು
ವಿಶ್ವ ಮಟ್ಟದಲ್ಲಿ ಸಿಂಗಲ್​ ಯೂಸ್ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಈ ಸಂಸ್ಥೆಗಳು ಮುಂದಿವೆ. ತಾವು ಉತ್ಪಾದಿಸುವ ತ್ಯಾಜ್ಯದ ಕಡೆಗೆ ಹಾಗೂ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಅನುಸರಿಸುವ ಕ್ರಮದ ಕಡೆಗೆ ಕೋಕಾ-ಕೋಲಾ, ಪೆಪ್ಸಿ ಮತ್ತು ನೆಸ್ಲೆ ಸೇರಿದಂತೆ ಎಲ್ಲಾ ಸಂಸ್ಥೆಗಳು ಗಂಭೀರವಾಗಿ ಆಲೋಚಿಸಬೇಕು ಎಂದು ಬ್ರೇಕ್​ ಫ್ರೀ ಫ್ರಂ ಪ್ಲಾಸ್ಟಿಕ್ ಅಭಿಯಾನದ ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 2017ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಶೇ.91ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮಣ್ಣು ಸೇರುತ್ತಿರುವ ಅಂಶ ಬಯಲಾಗಿತ್ತು. ಪ್ಲಾಸ್ಟಿಕ್ ಮರುಬಳಕೆ ಎನ್ನುವುದು ಕೇವಲ ಘೋಷವಾಕ್ಯವಾಗಿಯೇ ಉಳಿದೆ ಎಂದು ಅನೇಕ ತಜ್ಞರು ಆತಂಕ ವ್ಯಕ್ತಪಡಿಸಿದ್ದರು.

ಅದೇ ರಾಗ, ಅದೇ ಹಾಡು
ಇತ್ತ ಕೋಕಾ-ಕೋಲಾ, ಪೆಪ್ಸಿಕೋ ಮತ್ತು ನೆಸ್ಲೆ ಸಂಸ್ಥೆಗಳು ಬಹುತೇಕ ಒಂದೇ ತೆರನಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು 2030ರ ಒಳಗೆ ನಾವು ಉತ್ಪಾದಿಸಿದ ಅಷ್ಟೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಲೆಹಾಕುತ್ತೇವೆ ಎಂದು ಹೇಳಿವೆ. ಪ್ಲಾಸ್ಟಿಕ್ ಮರುಬಳಕೆಗೆ ಈಗಾಗಲೇ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ತ್ಯಾಜ್ಯ ಉತ್ಪಾದನೆಯನ್ನು ಖಂಡಿತಾ ಕಡಿಮೆ ಮಾಡುತ್ತೇವೆ ಎಂಬ ಭರವಸೆ ನೀಡಿವೆ.

ಔಷಧಿ ತಯಾರಿಕಾ ಘಟಕದ ತ್ಯಾಜ್ಯ ಸೀದಾ ಕೆರೆಗೆ: ಜೀವ ಸಂಕುಲಕ್ಕೆ ಎದುರಾಯ್ತು ಪ್ರಾಣ ಸಂಕಟ