Kannada News World Corona Cases raises in World 11 million covid cases registered in one week details inside
Covid 19: ಜಗತ್ತಿನಲ್ಲಿ ಏರಿಕೆಯಾಗುತ್ತಿರುವ ಕೊರೊನಾ; ಒಂದು ವಾರದಲ್ಲಿ 1 ಕೋಟಿಗೂ ಹೆಚ್ಚು ಪ್ರಕರಣಗಳು ದಾಖಲು
Corona Cases: ಜಗತ್ತಿನಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಒಂದು ವಾರದ ಅವಧಿಯಲ್ಲಿ 11 ಮಿಲಿಯನ್ಗೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಕುರಿತ ವರದಿ ಇಲ್ಲಿದೆ.
ಪ್ರಾತಿನಿಧಿಕ ಚಿತ್ರ
Follow us on
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ (Corona Cases) ಏರಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ಅಂಕಿಅಂಶಗಳನ್ನು ತೆರೆದಿಟ್ಟಿದೆ. ಮಾರ್ಚ್ 7 ರಿಂದ ಮಾರ್ಚ್ 13ರ ನಡುವೆ 11 ಮಿಲಿಯನ್ (1.1 ಕೋಟಿ) ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಂದು ತಿಂಗಳು ಕೊವಿಡ್ ಇಳಿಕೆಯ ನಂತರ ಇದೀಗ ಮತ್ತೆ ಉಲ್ಬಣವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಸಂಖ್ಯೆಯು ಶೇ.8ರಷ್ಟು ಹೆಚ್ಚಾಗಿದೆ. ಹಲವು ದೇಶಗಳಲ್ಲಿ ಕಡಿಮೆ ಪರೀಕ್ಷೆಗಳು ನಡೆಯುತ್ತಿವೆ. ಅದರ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಇದು ಇನ್ನೂ ಹೆಚ್ಚಬಹುದು ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಗುರುವಾರ ಎಚ್ಚರಿಸಿದ್ದಾರೆ. ಜಗತ್ತಿನಲ್ಲಿ ಕೊರೊನಾ ಏರಿಕೆಯ ಕುರಿತ ಮುಖ್ಯಾಂಶಗಳು ಇಲ್ಲಿವೆ.
ಜಗತ್ತಿನಲ್ಲಿ ಕೊರೊನಾ ಏರಿಕೆಯ ಕುರಿತು ಮುಖ್ಯಾಂಶಗಳು:
ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಇದು ಒಮಿಕ್ರಾನ್ ರೂಪಾಂತರದಿಂದ ಸಂಭವಿಸಿದೆ ಎನ್ನಲಾಗುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡ ನಿಯಮಗಳನ್ನು ಹೇರುವ ಕುರಿತು ಚಿಂತಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಚೀನಾದಲ್ಲಿ ಬುಧವಾರ 5,200ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದು ಕೊರೊನಾ ಆರಂಭಿಕ ಸಮಯದಲ್ಲಿ ಕಂಡುಬಂದಿದ್ದಕ್ಕಿಂತ ಹೆಚ್ಚಾಗಿತ್ತು. ಅದರ 24 ಗಂಟೆಗಳ ನಂತರ 3,000 ಪ್ರಕರಣಗಳು ವರದಿಯಾಗಿದ್ದು, ಕೆಲವೆಡೆ ನಿರ್ಬಂಧಗಳನ್ನು ಮರಳಿ ವಿಧಿಸಲಾಗಿದೆ.
ದಕ್ಷಿಣ ಕೊರಿಯಾದಲ್ಲಿ 6,21,328 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 429 ಸಾವುಗಳು ವರದಿಯಾಗಿವೆ. ಅದಾಗ್ಯೂ ನಿರ್ಬಂಧಗಳನ್ನು ಕೊನೆಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪ್ನಲ್ಲೂ ಕೊರೊನಾ ಏರಿಕೆಯಾಗುತ್ತಿದೆ. ಜರ್ಮನಿಯಲ್ಲಿ ನಿರ್ಬಂಧಗಳು ಮುಂದುವರೆದಿವೆ.
ಯುರೋಪ್ಗೆ ಈಗಾಗಲೇ ಕೊರೊನಾದ ಹೊಸ ಅಲೆ ಅಪ್ಪಳಿಸಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನಿಂದ ಯುರೋಪ್ಗೆ ಸಹಸ್ರಾರು ಜನರು ವಲಸೆ ಹೋಗಿದ್ದಾರೆ. ಈ ಸ್ಥಳಾಂತರವು ಕೊರೊನಾ ಏರಿಕೆಗೆ ಕಾರಣವಾಗಬಹುದು ಎಂದಿದ್ದಾರೆ ತಜ್ಞರು.
ಅಮೇರಿಕಾದ ಉನ್ನತ ವೈದ್ಯಕೀಯ ತಜ್ಞ ಆಂಥೋನಿ ಫೌಸಿ ‘ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆಯಾದರೆ ನಿರ್ಬಂಧಗಳನ್ನು ಹೇರಬೇಕಾಗಬಹುದು’’ ಎಂದಿದ್ದಾರೆ.