Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು?

| Updated By: Skanda

Updated on: Sep 07, 2021 | 3:10 PM

ಈ ಅಧ್ಯಯನವನ್ನು ಪ್ರಕಟಣಾ ಪೂರ್ವವಾಗಿ bioRxiv ಸರ್ವರ್​ನಲ್ಲಿ ಪ್ರಕಟಿಸಲಾಗಿದ್ದು, ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ. ChAdOx1 ಬಹು ಉಪಯೋಗಿ ಲಸಿಕೆ ಸಮ್ಮಿಶ್ರಣವಾಗಿದ್ದು, ಪ್ಯಾಥೋಗಾನ್​ಗಳ ವಿವಿಧ ಡಿಎನ್​ಎಗಳ ಜತೆ ಸಂಯೋಜಿಸಿ ಉಪಯೋಗಿಸಬಹುದೆಂದು ತಜ್ಞರು ತಿಳಿಸಿದ್ದಾರೆ.

Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು?
ನಿಫಾ ವೈರಾಣುವಿಗೆ ಲಸಿಕೆ?
Follow us on

ಕೊರೊನಾ ಆತಂಕದ ಜತೆಜತೆಗೆ ನಿಫಾ ವೈರಸ್​ ಭೀತಿಯೂ ಉಲ್ಬಣಿಸಿರುವುದು ಕೇರಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳನ್ನು ಚಿಂತೆಗೀಡುಮಾಡಿದೆ. ಆದರೆ, ನಿಫಾ ವೈರಾಣು ನಿಯಂತ್ರಣದ ಕುರಿತು ನಡೆದ ಪ್ರಾಥಮಿಕ ಅಧ್ಯಯನದ ವರದಿಯೊಂದು ಕೊಂಚ ಸಮಾಧಾನಕಾರಿಯಾಗಿ ಕಾಣಿಸುತ್ತಿದ್ದು, ಕೊರೊನಾ ಲಸಿಕೆ ಕೊವಿಶೀಲ್ಡ್​ ನಿಫಾ ವೈರಾಣುವಿನ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವನ್ನು ಮಂಡಿಸಿದೆ. ಜೆನ್ನರ್​ ಇನ್​ಸ್ಟಿಟ್ಯೂಟ್, ಆಕ್ಸ್​ಫರ್ಡ್​ ಯುನಿವರ್ಸಿಟಿ ಹಾಗೂ ಯುಎಸ್​ನ ನ್ಯಾಶನಲ್​ ಇನ್​ಸ್ಟಿಟ್ಯೂಟ್ ಆಫ್​ ಹೆಲ್ತ್​ ಸಹಯೋಗದಲ್ಲಿ ಜುಲೈ ತಿಂಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ChadOx1 ಸಮ್ಮಿಶ್ರಣದ ಲಸಿಕೆಯನ್ನು ನಿಫಾ ವೈರಸ್​ಗೆ ಸಂಯೋಜಿಸಿ ಆಫ್ರಿಕನ್​ ಗ್ರೀನ್​ ಮಂಕಿ ಮೇಲೆ ಪ್ರಯೋಗಿಸಿದಾಗ ಅದು ಸಂಪೂರ್ಣ ಸುರಕ್ಷಿತವೆಂದು ಸಾಬೀತಾಗಿದೆ. ಹೀಗಾಗಿ ನಿಫಾ ವೈರಾಣುವನ್ನು ಹತ್ತಿಕ್ಕಲು ಕೊವಿಶೀಲ್ಡ್​ ಹೊಸ ಭರವಸೆಯಂತೆ ಕಾಣಿಸುತ್ತಿದೆ.

ಸದ್ಯ ಕೇರಳದಲ್ಲಿ 12 ವರ್ಷದ ಬಾಲಕನ ಸಾವಿಗೆ ಕಾರಣವಾದ ಲೆಥಾಲ್ ನಿಫಾ ವೈರಸ್​ ವಿರುದ್ಧ ಹೋರಾಡಲು ಈವರೆಗೆ ಯಾವುದೇ ಅಂಗೀಕೃತ ಲಸಿಕೆಗಳು ಅಸ್ತಿತ್ವದಲ್ಲಿಲ್ಲ. ಈ ಹಿಂದೆ 2018ರಲ್ಲೂ ಒಮ್ಮೆ ಕೇರಳದಲ್ಲಿ ತಲ್ಲಣ ಮೂಡಿಸಿದ್ದ ವೈರಾಣು 18 ಸೋಂಕಿತರಲ್ಲಿ 17 ಜನರ ಸಾವಿಗೆ ಕಾರಣವಾಗಿತ್ತಾದರೂ ಅದಕ್ಕೆಂದೇ ಮೀಸಲಾದ ಲಸಿಕೆ ಲಭ್ಯವಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಈ ಅಧ್ಯಯನವನ್ನು ಪ್ರಕಟಣಾ ಪೂರ್ವವಾಗಿ bioRxiv ಸರ್ವರ್​ನಲ್ಲಿ ಪ್ರಕಟಿಸಲಾಗಿದ್ದು, ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ. ChAdOx1 ಬಹು ಉಪಯೋಗಿ ಲಸಿಕೆ ಸಮ್ಮಿಶ್ರಣವಾಗಿದ್ದು, ಪ್ಯಾಥೋಗಾನ್​ಗಳ ವಿವಿಧ ಡಿಎನ್​ಎಗಳ ಜತೆ ಸಂಯೋಜಿಸಿ ಉಪಯೋಗಿಸಬಹುದೆಂದು ತಜ್ಞರು ತಿಳಿಸಿದ್ದಾರೆ. ಆಸ್ಟ್ರಾಜೆನೆಕಾ ಅಥವಾ ಕೊವಿಶೀಲ್ಡ್​ ಹೆಸರಲ್ಲಿ ಮನುಷ್ಯರ ದೇಹ ಸೇರುತ್ತಿರುವ ChAdOx1 ಕೊರೊನಾ (Sarscov2) ಸ್ಪೈಕ್ ಪ್ರೋಟೀನ್​ ಹೊಂದಿರುವುದರಿಂದ ಅದು ಕೊವಿಡ್​ 19 ವಿರುದ್ಧ ಹೋರಾಡುತ್ತದೆ. ಅದೇ ರೀತಿ ಸದರಿ ಲಸಿಕೆಯನ್ನು ಅಗತ್ಯಕ್ಕನುಗುಣವಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ನಿಫಾಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಬಾಂಗ್ಲಾದೇಶದಲ್ಲಿ ಸಿಕ್ಕಿದ ನಿಫಾ ವೈರಾಣುವಿನಿಂದ ಗ್ಲೈಕೋಪ್ರೋಟೀನ್​ ತೆಗೆದು ಬಳಸಿಕೊಳ್ಳಲಾಗಿದೆ. ಅದನ್ನು ChadOx1 NiV ಎಂದು ಹೆಸರಿಸಲಾಗಿದ್ದು, ಆಯ್ದ 8 ಮಂಗಗಳ ಮೇಲೆ ಪ್ರಯೋಗ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ನಾಲ್ಕು ಮಂಗಗಳ ಎರಡು ಗುಂಪು ಮಾಡಿಕೊಂಡು ಒಂದು ಗುಂಪಿಗೆ ChadOx1NiV ಸಮ್ಮಿಶ್ರಣದ ಒಂದು ಅಥವಾ ಎರಡು ಡೋಸ್​ ಹಾಗೂ ಇನ್ನೊಂದು ಗುಂಪಿಗೆ ಡಮ್ಮಿ ಪ್ರೋಟೀನ್ (ChAdOx1 GFP) ನೀಡಲಾಗಿತ್ತು. ಬಳಿಕ ಎಲ್ಲಾ ಮಂಗಗಳಿಗೂ ಕೃತಕವಾಗಿ ಮೂಗು ಅಥವಾ ಗಂಟಲಿನ ಮೂಲಕ ನಿಫಾ ಸೋಂಕು ತಗುಲಿಸಲಾಗಿತ್ತು. ಅದಾಗಿ ಮೂರೇ ಮೂರು ದಿನದ ಒಳಗಾಗಿ ಡಮ್ಮಿ ಪ್ರೋಟೀನ್​ ಸ್ವೀಕರಿಸಿದ್ದ ಮಂಗಗಳಲ್ಲಿ ನಿಫಾ ಸೋಂಕಿನ ಲಕ್ಷಣಗಳು ಕಂಡು ಬರಲು ಆರಂಭವಾಗಿ 5 ರಿಂದ 7 ದಿನಗಳಲ್ಲಿ ತೀವ್ರ ಜ್ವರ ಬಾಧಿಸಲು ಆರಂಭಿಸಿದಾಗ ಅವುಗಳಿಗೆ ದಯಾಮರಣ ನೀಡಲಾಯಿತು. ಆದರೆ, ಇತ್ತ ಒಂದು ಅಥವಾ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದ ಮಂಗಗಳು ಯಾವುದೇ ಲಕ್ಷಣಗಳನ್ನು ತೋರಿಸದೇ, ಸೋಂಕಿಗೂ ತುತ್ತಾಗದೇ ಆರೋಗ್ಯವಾಗಿದ್ದವು ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ಅಧ್ಯಯನದಿಂದಾಗಿ ನಿಫಾ ವೈರಾಣುವಿನ ವಿರುದ್ಧ ಕೊವಿಶೀಲ್ಡ್​ ಲಸಿಕೆಯ ಮಾದರಿಯನ್ನು ಬಳಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ತಜ್ಞರಲ್ಲಿ ಮೂಡಿದ್ದು, ಒಂದೊಮ್ಮೆ ನಿಫಾ ಆತಂಕ ಬಿಗಡಾಯಿಸಿದಲ್ಲಿ ಇದನ್ನೇ ಪ್ರಯೋಗಿಸುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಧ್ಯಯನಗಳೂ ಮುಂದುವರೆದಿವೆ.

ಇದನ್ನೂ ಓದಿ:
ನಿಫಾ ಭೀತಿ: ಕೇರಳದಿಂದ ಬರುವವರಿಗೆ ಕಡ್ಡಾಯ ತಪಾಸಣೆ; ಇನ್ನೊಂದೆಡೆ, ಹಣ್ಣುಗಳಿಂದ ವೈರಸ್​ ಹಬ್ಬುವ ಭಯ 

Nipah virus ಕೇರಳದ ಮೂರು ಜಿಲ್ಲೆಗಳಲ್ಲಿ ನಿಫಾ ವೈರಸ್ ಎಚ್ಚರಿಕೆ; ನಿಫಾಗೆ ಬಲಿಯಾದ ಬಾಲಕನ ನಿಕಟ ಸಂಪರ್ಕದಲ್ಲಿದ್ದ 8 ಮಂದಿಗೆ ಸೋಂಕು ಇಲ್ಲ

(Covishield Vaccine against Nipah virus is it true what the study says here is what you need to know)