ನಿಫಾ ಭೀತಿ: ಕೇರಳದಿಂದ ಬರುವವರಿಗೆ ಕಡ್ಡಾಯ ತಪಾಸಣೆ; ಇನ್ನೊಂದೆಡೆ, ಹಣ್ಣುಗಳಿಂದ ವೈರಸ್ ಹಬ್ಬುವ ಭಯ
ರಾಜ್ಯಕ್ಕೆ ಬರುವವರ ಪ್ರತಿಯೊಬ್ಬರ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಪಡೆಯಲಿರುವ ಸಿಬ್ಬಂದಿ. ವಿದ್ಯಾರ್ಥಿಗಳು ಬಂದರೆ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡಿ, ಉದ್ಯೋಗಸ್ಥರು ಬಂದರೆ ಕೆಲಸ ಮಾಡುವ ಸಂಸ್ಥೆಗೆ ಮಾಹಿತಿ ನೀಡಿ ಕ್ವಾರಂಟೈನ್ಗೆ ಸೂಚಿಸಲಿದ್ದಾರೆ.
ಮೈಸೂರು: ಕೇರಳದಲ್ಲಿ ಕೊರೊನಾ ಜೊತೆ ನಿಫಾ ವೈರಸ್ ಪತ್ತೆಯಾಗಿರುವ ಕಾರಣ ಕರ್ನಾಟಕ ಕೇರಳ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್ಪೋಸ್ಟ್ನಲ್ಲಿ ತಪಾಸಣೆಯನ್ನೂ ಬಿಗಿಗೊಳಿಸಲಾಗಿದ್ದು, ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದರಷ್ಟೇ ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಬರಲಿಚ್ಛಿಸುವವರು 72 ಗಂಟೆಯೊಳಗೆ ತಪಾಸಣೆ ನಡೆಸಿದ ನೆಗೆಟಿವ್ ವರದಿ ತರಬೇಕು. ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶಿಸಲು ಅವಕಾಶ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ರಾಜ್ಯಕ್ಕೆ ಬರುವವರ ಪ್ರತಿಯೊಬ್ಬರ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಪಡೆಯಲಿರುವ ಸಿಬ್ಬಂದಿ. ವಿದ್ಯಾರ್ಥಿಗಳು ಬಂದರೆ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡಿ, ಉದ್ಯೋಗಸ್ಥರು ಬಂದರೆ ಕೆಲಸ ಮಾಡುವ ಸಂಸ್ಥೆಗೆ ಮಾಹಿತಿ ನೀಡಿ ಕ್ವಾರಂಟೈನ್ಗೆ ಸೂಚಿಸಲಿದ್ದಾರೆ. ಅಂತೆಯೇ, ಸಾರ್ವಜನಿಕರಿಗೆ ಒಂದು ವಾರ ಕ್ವಾಂರಂಟೈನ್ ಇರುವಂತೆ ಸೂಚನೆ ನೀಡಲಾಗುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಸದ್ಯ ಹೋಂ ಕ್ವಾರಂಟೈನ್ ಇರುವವರ ಮಾನಿಟರಿಂಗ್ ಮಾಡುವುದು ಕಷ್ಟವಾಗಿದ್ದು, ಯಾರ ಕೈಗಳಿಗೂ ಕ್ವಾರಂಟೈನ್ ಸೀಲ್ಗಳನ್ನು ಹಾಕಲಾಗುತ್ತಿಲ್ಲ. ಇದರಿಂದ ಕ್ವಾರಂಟೈನ್ ಬಗ್ಗೆ ನಿಗಾ ವಹಿಸಲು ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅಷ್ಟೇ ಅಲ್ಲದೇ, ಕೇರಳದಿಂದ ಬರುವ ಹಣ್ಣುಗಳಿಂದಲೂ ನಿಫಾ ವೈರಸ್ ಭೀತಿ ಇದ್ದು, ಕೇರಳದಿಂದ ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಬರುವುದರಿಂದ ಭಯ ಹೆಚ್ಚಿದೆ. ರಾಂಬುಟನ್ ಸೇರಿದಂತೆ ಸಾಕಷ್ಟು ಹಣ್ಣುಗಳು ರಾಜ್ಯಕ್ಕೆ ಬರುತ್ತಿದ್ದು, ಕೇರಳದಿಂದ ಬರುವ ಹಣ್ಣುಗಳಿಂದ ನಿಫಾ ಹರಡುವ ಭೀತಿ ಇದೆ. ಬಾವಲಿಗಳು ಕಚ್ಚಿದ ಹಣ್ಣಿನಲ್ಲಿ ನಿಫಾ ವೈರಸ್ ಬರುವ ಶಂಕೆ ವ್ಯಕ್ತವಾಗಿದೆ.
ಕೇರಳದಲ್ಲಿ ನಿಫಾ ವೈರಸ್ : ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ: * ನಿಫಾಗೆ ಬಲಿಯಾದ ಹುಡುಗನ 251 ಸಂಪರ್ಕಗಳಲ್ಲಿ 129 ಆರೋಗ್ಯ ಕಾರ್ಯಕರ್ತರು ಮತ್ತು 54 ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ. ಹೆಚ್ಚಿನ ಅಪಾಯದ ವರ್ಗದಲ್ಲಿ 30 ಆರೋಗ್ಯ ಕಾರ್ಯಕರ್ತರು ಇದ್ದಾರೆ
* ಕೇರಳಕ್ಕೆ ಭೇಟಿ ನೀಡಿದ ಕೇಂದ್ರ ತಂಡವು ಜಿಲ್ಲಾ ಕಣ್ಗಾವಲು ಅಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಶೋಧನೆ ನಡೆಸಿತು. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪ್ರಕಾರ, “ಇದು 12 ವರ್ಷ ವಯಸ್ಸಿನ ಬಾಲಕನ ಮನೆ, ಕುಟುಂಬ ಸದಸ್ಯರು ಮತ್ತು ಇತರರೊಂದಿಗೆ ಸಂವಹನ ನಡೆಸುವ ಕೇಂದ್ರಬಿಂದುವಾಗಿದೆ.”
* ಕೇಂದ್ರ ತಂಡವು ಒದಗಿಸಿದ ಮೈಕ್ರೋ ಪ್ಲಾನ್ ಪ್ರಕಾರ, ಕಂಟೈನ್‌ಮೆಂಟ್ ಏರಿಯಾದಲ್ಲಿ ಪ್ರಕರಣಗಳನ್ನು ಸಕ್ರಿಯವಾಗಿ ಹುಡುಕಲು ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ. ಕಣ್ಣೂರು, ಮಲಪ್ಪುರಂ ಮತ್ತು ವಯನಾಡ್‌ನಂತಹ ಜಿಲ್ಲೆಗಳನ್ನು ಎಚ್ಚರಿಸುವ ಅಗತ್ಯವಿದೆ ಎಂದು ಭೂಷಣ್ ಕೇರಳ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
* ಪ್ರತಿನಿತ್ಯ ವರದಿ ಮಾಡಲು ಮತ್ತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು 24×7 ಕಂಟ್ರೋಲ್ ರೂಂ ಸ್ಥಾಪಿಸುವ ಅಗತ್ಯವನ್ನು ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ
* ಪ್ರಸ್ತುತ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ತಾಂತ್ರಿಕ ಬೆಂಬಲವನ್ನು ಕೇಂದ್ರವು ಭರವಸೆ ನೀಡಿದೆ.
* ಏತನ್ಮಧ್ಯೆ, ವೀಣಾ ಜಾರ್ಜ್ ಸೋಮವಾರ ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪರೀಕ್ಷಾ ಪ್ರಯೋಗಾಲಯ ಸಿದ್ಧವಾಗಿದೆ ಮತ್ತು ಇನ್ನು ಮುಂದೆ ಆರ್‌ಟಿ-ಪಿಸಿಆರ್ ಮತ್ತು ಇತರ ಮಾದರಿಗಳ ಪರೀಕ್ಷೆಯನ್ನು ಅಲ್ಲಿ ಮಾಡಲಾಗುವುದು ಎಂದು ಹೇಳಿದರು
* ಆರೋಗ್ಯ ಇಲಾಖೆ ನಿಫಾ ವೈರಸ್ ನ ನಿಖರವಾದ ಪರಿಸ್ಥಿತಿಯನ್ನು ಪರೀಕ್ಷಿಸಲು ಮತ್ತು ಯಾವುದೇ ತಪ್ಪು ಮಾಹಿತಿಯನ್ನು ಹರಡದಂತೆ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
* ಜಿಲ್ಲೆಯಲ್ಲಿ ನಿಫಾ ವೈರಸ್ ಮೊದಲ ಪ್ರಕರಣ ವರದಿಯಾದಾಗಿನಿಂದ ಸಚಿವೆ ವೀಣಾ ಜಾರ್ಜ್ ಕಳೆದ ಎರಡು ದಿನಗಳಿಂದ ಕೋಯಿಕೋಡ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
* ರಾಜ್ಯ ಪಶುಸಂಗೋಪನಾ ಇಲಾಖೆಯು ಕೋಯಿಕ್ಕೋಡ್ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಪರೀಕ್ಷಿಸಲು ಆರಂಭಿಸಿದೆ.
Nipah virus ತಮಿಳುನಾಡಿನಲ್ಲಿ ನಿಫಾ ವೈರಸ್ ಪ್ರಕರಣಗಳಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ
(Nipah Virus fear Strict action in Kerala Karnataka Border)
Published On - 1:33 pm, Tue, 7 September 21