ಚೀನಾದಲ್ಲಿ ಈ ಹಿಂದೆ ಸಾರ್ಸ್ ವೈರಸ್ ಸೃಷ್ಟಿಸಿದ್ದ ಅವಾಂತರ ಒಂದೆರಡಲ್ಲ. ಈಗ ಇದೇ ಸಾರ್ಸ್ ವೈರಸ್ ಮತ್ತೊಂದು ವೈರಸ್ ಚೀನಾದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಭಾರಿ ಮುನ್ನೆಚ್ಚರಿಕೆ ಕೈಗೊಂಡರೂ ದಿನದಿಂದ ದಿನಕ್ಕೆ ವೈರಸ್ ಹೊಸಬರಿಗೆ ಹರಡುತ್ತಿದ್ದು, ಹಲವು ದೇಶಗಳು ಚೀನಾದ ಕೆಲವು ನಗರಗಳಿಗೆ ಪ್ರವಾಸ ಕೈಗೊಳ್ಳದಂತೆ ತಮ್ಮ ನಾಗರಿಕರನ್ನ ಎಚ್ಚರಿಸಿವೆ.
ಸಾರ್ಸ್.. ಇದೊಂದು ಹೆಸರನ್ನ ಕೇಳಿದ್ರೆ ಜಗತ್ತಿನ ಜನ ಇವತ್ತಿಗೂ ಬೆಚ್ಚಿ ಬೀಳ್ತಾರೆ. ಸಾರ್ಸ್ ವೈರಸ್ ಸೃಷ್ಟಿಸಿದ್ದ ತಲ್ಲಣಗಳು ಒಂದೆರಡಲ್ಲ. ಇದು ಪತ್ತೆಯಾಗಿ 15 ವರ್ಷಕ್ಕೂ ಹೆಚ್ಚು ಕಾಲ ಕಳೆದ್ರೂ. ಅದರ ಹೆಸರು ಕೇಳ್ತಿದ್ದಂತೆ ಜನ ಹೌಹಾರಿ ಬಿಡ್ತಾರೆ. ಅಷ್ಟರ ಮಟ್ಟಿಗೆ ಸಾರ್ಸ್ ಜಗತ್ತಿನಲ್ಲಿ ಆತಂಕ ಹುಟ್ಟಿಸಿತ್ತು.
ಈಗ ಇದೇ ರೀತಿಯ ಮತ್ತೊಂದು ವೈರಸ್ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಎಲ್ಲಿ ಸಾರ್ಸ್ ವೈರಸ್ ಪತ್ತೆಯಾಗಿತ್ತೋ ಅದೇ ಚೀನಾದಲ್ಲಿ ಅದರ ಮತ್ತೊಂದು ವೆರೈಟಿಯಾಗಿರೋ ಕೊರೊನಾ ವೈರಸ್ ಪತ್ತೆಯಾಗಿದೆ. ಚೀನಾದ ವುಹಾನ್, ಶೆನ್ಜೆನ್ ನಗರಗಳಲ್ಲಿ ಕೊರೊನಾ ವೈರಸ್ ಅತಿ ವೇಗವಾಗಿ ಹರಡ್ತಿದೆ. ಚೀನಾದಲ್ಲೇ 62 ಪ್ರಕರಣಗಳಲ್ಲಿ ವೈರಸ್ ಪತ್ತೆಯಾಗಿದ್ದು, ಸುಮಾರು 1700ಕ್ಕೂ ಹೆಚ್ಚು ಜನರಿಗೆ ವೈರಸ್ ಹರಡಿರುವ ಸಾಧ್ಯತೆ ಇದೆ ಅಂತಾ ಗೊತ್ತಾಗಿದೆ.
ಭಾರತೀಯ ಮೂಲದ ಶಿಕ್ಷಕಿಗೂ ತಗುಲಿದ ‘ಕರೋನಾ’ ವೈರಸ್..!
ಚೀನಾದ ಶೆನ್ಜೆನ್ ನಗರದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಮೂಲದ ಪ್ರೀತಿ ಮಹೇಶ್ವರಿ ಅನ್ನೋರು ಶುಕ್ರವಾರ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ರು. ಪ್ರೀತಿ ಮಹೇಶ್ವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ಕೊರೊನಾ ವೈರಸ್ ತಗುಲಿದೆ ಅಂತಾ ದೃಢಪಡಿಸಿದ್ದಾರೆ. ಪ್ರೀತಿ ಮಹೇಶ್ವರಿ ಪತಿ ಅನ್ಷುಮಾನ್ ಖೋವಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರೀತಿ ಇನ್ನೂ ಐಸಿಯುನಲ್ಲೇ ಇದ್ದಾರೆ. ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ ಅಂತಾ ಹೇಳಿದ್ದಾರೆ.
ಚೀನಾ ಪ್ರವಾಸ ಮುಗಿಸಿ ತಮ್ಮ ದೇಶಗಳಿಗೆ ಹಿಂತಿರುಗಿದ್ದ ಥೈಲ್ಯಾಂಡ್ ಮತ್ತು ಜಪಾನ್ನ ತಲಾ ಒಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಅಂತಾ ಗೊತ್ತಾಗಿದೆ. ಇದೇ ಕಾರಣಕ್ಕಾಗಿ ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳು, ತಮ್ಮ ಪ್ರಜೆಗಳಿಗೆ ಚೀನಾಗೆ. ಅದ್ರಲ್ಲೂ ವುಹಾನ್, ಶೆನ್ಜೆನ್ಗೆ ಭೇಟಿ ನೀಡಿದಂತೆ ಸಲಹೆ ನೀಡಿವೆ. ಒಟ್ನಲ್ಲಿ ಸಾರ್ಸ್, ಝಿಕಾ ಬಳಿಕ ಜಗತ್ತಿನಲ್ಲಿ ಈಗ ಕೊರೊನಾ ವೈರಸ್ ಗುಮ್ಮ ಜನರನ್ನ ಬೆಚ್ಚಿ ಬೀಳಿಸ್ತಿದೆ.
Published On - 8:03 am, Mon, 20 January 20