Turkey Wildfire: ಟರ್ಕಿಯಲ್ಲಿ ಕರಾಳ ಕಾಡ್ಗಿಚ್ಚು; 100ಕ್ಕೂ ಹೆಚ್ಚು ಪ್ರದೇಶಗಳಿಗೆ ಆವರಿಸಿದ ಬೆಂಕಿ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಬೋಡ್ರಮ್​ ರೆಸ್ಟಾರ್ಟ್​ನಿಂದ ಪ್ರವಾಸಿಗರು ಮತ್ತು ಹೋಟೆಲ್​ ಸಿಬ್ಬಂದಿಯನ್ನು ಬೋಟ್​ ಮೂಲಕ ರಕ್ಷಿಸಲಾಗಿದೆ. ಈ ಪ್ರದೇಶದಲ್ಲೆಲ್ಲ ದಟ್ಟವಾದ ಹೊಗೆ, ಬೆಂಕಿಯ ಜ್ವಾಲೆಗಳು ಹರಡುತ್ತಿದ್ದು, ಆಕಾಶವೆಲ್ಲ ಸಂಪೂರ್ಣ ಕಪ್ಪಾಗಿ ಕಾಣಿಸುತ್ತಿದೆ.

Turkey Wildfire: ಟರ್ಕಿಯಲ್ಲಿ ಕರಾಳ ಕಾಡ್ಗಿಚ್ಚು; 100ಕ್ಕೂ ಹೆಚ್ಚು ಪ್ರದೇಶಗಳಿಗೆ ಆವರಿಸಿದ ಬೆಂಕಿ, ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಟರ್ಕಿ ಕಾಡ್ಗಿಚ್ಚು ಚಿತ್ರಣ
Edited By:

Updated on: Aug 02, 2021 | 6:10 PM

ಟರ್ಕಿಯ ದಕ್ಷಿಣ ಕರಾವಳಿಯಲ್ಲಿ ಎದ್ದಿರುವ ಕಾಡ್ಗಿಚ್ಚಿನ ಭೀಕರತೆ ದಿನೇದಿನೆ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಾಡ್ಗಿಚ್ಚು ಪ್ರಾರಂಭವಾಗಿ 5 ದಿನ ಕಳೆದಿದೆ. ಒಂದೇ ಸಮ ಕೆನ್ನಾಲಿಗೆ ಚಾಚುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳಗಳು, ರಕ್ಷಣಾ ಪಡೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಮನವ್ಗಾಟ್​​ನಲ್ಲಿ ಭಾನುವಾರ ಇಬ್ಬರು ಬೆಂಕಿಗೆ ಆಹುತಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇನ್ನೂ 10 ಮಂದಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ತಿಳಿಸಿದ್ದಾರೆ.

ಟರ್ಕಿಯ ಸುಮಾರು 100 ಪ್ರದೇಶಗಳಲ್ಲಿ ಬೆಂಕಿಯ ತೀವ್ರತೆ ಹರಡಿದೆ. ಮನವ್ಗಾಟ್​, ಮಾರ್ಮರಿ, ಮಿಲಾಸ್​​ನ ಒಳನಾಡು ಪಟ್ಟಗಳಲ್ಲಿ ಕಳೆದ ಐದು ದಿನಗಳಿಂದಲೂ ಬೆಂಕಿ ಉರಿಯುತ್ತಿದ್ದು, ಅಲ್ಲಿನ ನಿವಾಸಿಗಳನ್ನೆಲ್ಲ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅರಣ್ಯ ಸಚಿವ ಬೇಕಿರ್ ಪಕ್ಡೆಮಿರ್ಲಿ ತಿಳಿಸಿದ್ದಾರೆ.

ಬೋಡ್ರಮ್​ ರೆಸ್ಟಾರ್ಟ್​ನಿಂದ ಪ್ರವಾಸಿಗರು ಮತ್ತು ಹೋಟೆಲ್​ ಸಿಬ್ಬಂದಿಯನ್ನು ಬೋಟ್​ ಮೂಲಕ ರಕ್ಷಿಸಲಾಗಿದೆ. ಈ ಪ್ರದೇಶದಲ್ಲೆಲ್ಲ ದಟ್ಟವಾದ ಹೊಗೆ, ಬೆಂಕಿಯ ಜ್ವಾಲೆಗಳು ಹರಡುತ್ತಿದ್ದು, ಆಕಾಶವೆಲ್ಲ ಸಂಪೂರ್ಣ ಕಪ್ಪಾಗಿ ಕಾಣಿಸುತ್ತಿದೆ. ಇದೆಲ್ಲದರ ಮಧ್ಯೆ ಬೆಂಕಿ ನಂದಿಸುವ ಪ್ರಯತ್ನವೂ ಸಾಗುತ್ತಲೇ ಇದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ.

ಕಳೆದ ಬುಧವಾರದಿಂದ ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಜನರನ್ನು ಬೆಂಕಿ ಆವೃತ ಪ್ರದೇಶಗಳಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಟರ್ಕಿಯ ರಕ್ಷಣಾ ಪಡೆಗಳಲ್ಲದೆ, ರಷ್ಯಾ, ಉಕ್ರೇನ್​, ಇರಾನ್​, ಅಜೆರ್ಬೈಜಾನ್​ಗಳಿಂದಲೂ ರಕ್ಷಣಾ ತಂಡಗಳು ಆಗಮಿಸಿದ್ದು, ಇವರೆಲ್ಲರೂ ಅಗ್ನಿಶಾಮಕದಳಗಳ ಬೆಂಬಲಕ್ಕೆ ನಿಂತಿವೆ ಎಂದು ಬೇಕಿರ್ ಪಕ್ಡೆಮಿರ್ಲಿ ಹೇಳಿದ್ದಾರೆ.

ಇದನ್ನೂ ಓದಿ: Turkey Wildfire: ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; ನಷ್ಟವನ್ನು ವಿವರಿಸುತ್ತಿವೆ ಹೃದಯ ವಿದ್ರಾವಕ ಚಿತ್ರಗಳು

Death toll from wildfires in Turkey Reach To 8