ಕೋಪನ್ ಹೇಗನ್: ಇದು ನಿಜಕ್ಕೂ ನಮ್ಮೆಲ್ಲರನ್ನು ನಿರಾಳವಾಗಿಸುವ ಸುದ್ದಿ. ಕೋರೋನಾ ವೈರಸ್ ಭೀತಿ ಕಡಿಮೆಯಾಗುತ್ತಿದ್ದ ದಿನಗಳಲ್ಲೇ ಧುತ್ತನೆ ತಲೆಯೆತ್ತಿ ಮನುಕುಲಕ್ಕೆ ಆಘಾತಕಾರಿಯಾಗಿ ಗೋಚರಿಸಲಾರಂಭಿಸಿದ್ದ ಮಂಕಿಪಾಕ್ಸ್ (Monkeypox) ಪಿಡುಗಿನ ಪ್ರಭಾವ ಯುರೋಪ್ ನಲ್ಲಿ ಕಡಿಮೆಯಾಗುತ್ತಿದೆ. ಮಂಗಳವಾರದಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಹೆಚ್ ಒ) (WHO) ಬಿಡುಗಡೆ ಮಾಡಿರುವ ಹೇಳಿಕೆಯೊಂದರ ಪ್ರಕಾರ ಯುರೋಪ್ ನಲ್ಲಿ (Europe) ಮಂಕಿಪಾಕ್ಸ್ ತೀವ್ರತೆ ಕಡಿಮೆಯಾಗುತ್ತಿದೆ ಮತ್ತು ಅದರ ನಿಯಂತ್ರಣದ ಕ್ರಮಗಳು ಸರಿಯಾದ ನಿಟ್ಟಿನಲ್ಲಿ ಸಾಗಿವೆ. ಅಷ್ಟಾಗಿಯೂ ಎಲ್ಲ ರಾಷ್ಟ್ರಗಳು ಎಚ್ಚರ ತಪ್ಪಬಾರದು ಮತ್ತು ಪಿಡುಗಿನ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಕ್ರಮಗಳನ್ನು ದ್ವಿಗುಣಗೊಳಿಸಬೇಕು ಎಂದು ಡಬ್ಲ್ಯೂ ಹೆಚ್ ಒ ಹೇಳಿದೆ.
‘ಫ್ರಾನ್ಸ್, ಜರ್ಮನಿ, ಪೋರ್ಚುಗಲ್ ಸ್ಪೇನ್, ಯುಕೆ ಮತ್ತು ಕೆಲ ಬೇರೆ ರಾಷ್ಟ್ರಗಳಿಂದ ಮಂಕಿಪಾಕ್ಸ್ ಪಿಡುಗಿ ತೀವ್ರತೆ ಕಮ್ಮಿಯಾಗುತ್ತಿರುವ ಬಗ್ಗೆ ಪ್ರೋತ್ಸಾಹದಾಯಕ ಕುರುಹುಗಳು ಲಭ್ಯವಾಗುತ್ತಿವೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಯೂರೋಪ್ ಪ್ರಾದೇಶಿಕ ನಿರ್ದೇಶಕರಾಗಿರುವ ಹ್ಯಾನ್ಸ್ ಕ್ಲೂಜ್ ಹೇಳಿದ್ದಾರೆ.
‘ಪಿಡುಗನ್ನು ನಿಯಂತ್ರಿಸಲು ನಾವು ಜಾರಿಗೊಳಿಸಿರುವ ಕ್ರಮಗಳು ಸರಿಯಾದ ನಿಟ್ಟಿನಲ್ಲಿ ಸಾಗಿವೆ,’ ಎಂದು ಅವರು ಹೇಳಿದ್ದಾರೆ.
‘ಆದರೆ, ಅದನ್ನು ಪ್ರಾಂತ್ಯದಿಂದ ಸಂಪೂರ್ಣವಾಗಿ ನಿರ್ಮೂಲಗೊಳಿಸಬೇಕಾದರೆ, ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು,’ ಎಂದು ಅವರು ಹೇಳಿದರು.
ರಷ್ಯಾ ಮತ್ತು ಮಧ್ಯೆ ಏಷ್ಯಾದ ದೇಶಗಳು ಸೇರಿದಂತೆ ಡಬ್ಲ್ಯೂ ಹೆಚ್ ಒ ಯುರೋಪ್ ಪ್ರಾಂತ್ಯವು 53 ರಾಷ್ಟ್ರಗಳನ್ನು ಒಳಗೊಂಡಿದ್ದು ಈ ಪೈಕಿ 43 ದೇಶಗಳಲ್ಲಿ 22,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಆಸ್ಪತ್ರೆಗಳಲ್ಲಿ ನೋಂದಾಯಿಸಲ್ಪಟ್ಟಿದ್ದವು. ಜಾಗತಿಕವಾಗಿ ಶೇಕಡ 35 ರಷ್ಟು ಪ್ರಕರಣಗಳು ಈ ಪ್ರಾಂತ್ಯದಲ್ಲೇ ಪತ್ತೆಯಾಗಿದ್ದವು.
ವಿಶ್ವದ ನಾನಾ ಭಾಗಗಳಲ್ಲಿ ನಾಲ್ಕು ವಾರಗಳ ಕಾಲ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಸತತವಾಗಿ ಹೆಚ್ಚಳ ಕಂಡ ನಂತರ ಕಳೆದ ವಾರ ಶೇಕಡ 21 ರಷ್ಟು ಇಳಿಕೆ ಕಂಡುಬಂದಿದೆ ಎಂದು ಡಬ್ಲ್ಯೂ ಹೆಚ್ ಒ ವರದಿ ಮಾಡಿದೆ.
‘ಯುರೋಪ್ ನಲ್ಲಿ ಮಂಕಿಪಾಕ್ಸ್ ವೈರಸ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಅದನ್ನು ನಿರ್ಮೂಲ ಮಾಡಬೇಕಾದರೆ, ನಿಗ್ರಾಣಿ, ಲಸಿಕೆ ಹಾಕಿಸುವ ಅಭಿಯಾನ ಜಾರಿಯಲ್ಲಿಡುವುದು, ಸಂಪರ್ಕದ ಮೂಲಕ ತಾಕಿರುವ ಸೋಂಕು, ಮತ್ತು ಸೋಂಕು ಹಬ್ಬುವುದಕ್ಕೆ ಪ್ರಮುಖ ಕಾರಣವಾಗಿರುವ ಸಲಿಂಗ ಕಾಮದಲ್ಲಿ ತೊಡಗುವ ಪುರುಷರ ಜೊತೆ ಸಮಾಲೋಚನೆ ನಡೆಸುವುದು-ಮೊದಲಾದವುಗಳನ್ನು ಮಾಡಲೇಬೇಕು ಎಂದು ಡಬ್ಲ್ಯೂ ಹೆಚ್ ಒ ಹೇಳಿದೆ.
ಪೋರ್ಚುಗಲ್ ನಿದರ್ಶನವನ್ನು ಉಲ್ಲೇಖಿಸಿರುವ ಕ್ಲೂಜ್, ‘ಪೂರ್ಣ ಪ್ರಮಾಣದ ಲಸಿಕಾ ಅಭಿನಯಾನ ಇಲ್ಲದೆ ಹೋದಾಗ್ಯೂ ಪೋರ್ಚುಗಲ್ ಸರ್ಕಾರ ಸಾರ್ವಜನಿಕ ನಡಾವಳಿಯಲ್ಲಿ ಬದಲಾವಣೆ ತರುವ ಮತ್ತು ಸಮುದಾಯಗಳ ಜೊತೆ ಸಂವಾದಗಳನ್ನು ನಡೆಸುವ ಮೂಲಕ ಪಿಡುಗಿನ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶ ಕಂಡಿದೆ,’ ಎಂದು ಹೇಳಿದ್ದಾರೆ.