
ವಾಷಿಂಗ್ಟನ್, ಜುಲೈ 06: ಒಂದೊಮ್ಮೆ ಅಮೆರಿಕ ಸಂಸತ್ತು ಡೊನಾಲ್ಡ್ ಟ್ರಂಪ್(Donald Trump) ಅವರ ಒನ್ ಬಿಗ್ ಬ್ಯೂಟಿಫುಲ್ ಬಿಲ್ಗೆ ಅನುಮೋದನೆ ನೀಡಿದರೆ ಹೊಸ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್(Elon Musk) ಹೇಳಿದಂತೆ ನಡೆದುಕೊಂಡಿದ್ದಾರೆ. ಹೊಸ ಪಕ್ಷವನ್ನು ಘೋಷಿಸಿದ್ದಾರೆ.ಈ ಪಕ್ಷಕ್ಕೆ ‘ಅಮೆರಿಕ ಪಾರ್ಟಿ’ ಎಂದು ಹೆಸರಿಸಲಾಗಿದೆ. ಮಸ್ಕ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ಘೋಷಣೆ ಮಾಡಿದ್ದಾರೆ.
ನೀವು ನಿಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಅಮೆರಿಕ ಪಕ್ಷವನ್ನು ರಚಿಸಲಾಗಿದೆ ಎಂದು ಅವರು ಬರೆದಿದ್ದಾರೆ. ಅಮೆರಿಕದ ಪ್ರಸ್ತುತ ರಾಜಕೀಯದ ಮೇಲೂ ಮಸ್ಕ್ ದಾಳಿ ನಡೆಸಿದರು. ದೇಶವನ್ನು ಹಾಳುಮಾಡುವುದು ಮತ್ತು ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ, ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್ನರ ನಡುವೆ ಯಾವುದೇ ವ್ಯತ್ಯಾಸವಿಲ್ಲ.
ವಾಸ್ತವವಾಗಿ ಅವರು ಒಂದೇ ಪಕ್ಷ. ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿಲ್ಲ, ನಾವು ಏಕಪಕ್ಷ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಅಮೆರಿಕದ ಸ್ವಾತಂತ್ರ್ಯ ದಿನದಂದು, ಎಲೋನ್ ಮಸ್ಕ್ ತಮ್ಮ ವೇದಿಕೆ ಎಕ್ಸ್ನಲ್ಲಿ ಸಮೀಕ್ಷೆಯನ್ನು ನಡೆಸಿದರು. ನೀವು ಎರಡು ದೊಡ್ಡ ಪಕ್ಷಗಳಿಂದ ಸ್ವಾತಂತ್ರ್ಯವನ್ನು ಬಯಸುತ್ತೀರಾ? ನಾವು ಅಮೆರಿಕ ಪಕ್ಷವನ್ನು ರಚಿಸಬೇಕೇ? ಎಂದು ಕೇಳಿದ್ದರು.
ಮಸ್ಕ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಟೀಕಿಸಿದ್ದಾರೆ. ಈ ಕಾನೂನು ಮುಂದಿನ 10 ವರ್ಷಗಳಲ್ಲಿ ಅಮೆರಿಕದ ಸಾಲವನ್ನು 3.3 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದರು. ಮಸ್ಕ್ ಈ ಹಿಂದೆ ಟ್ರಂಪ್ ಅವರ ಸಲಹೆಗಾರರಾಗಿದ್ದರು ಮತ್ತು ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಕೆಲಸವನ್ನು ನೋಡಿಕೊಳ್ಳುತ್ತಿದ್ದರು.
ಮತ್ತಷ್ಟು ಓದಿ: ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಎಲಾನ್ ಮಸ್ಕ್
2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಬಹಳ ಹತ್ತಿರವಾಗಿದ್ದ ಎಲಾನ್ ಮಸ್ಕ್, ‘ ಒನ್ ಬಿಗ್ ಬ್ಯೂಟಿಫುಲ್ ಬಿಲ್ ‘ ಬಗ್ಗೆ ಅಧ್ಯಕ್ಷರೊಂದಿಗೆ ತೀವ್ರ ವಿರೋಧ ಹೊಂದಿದ್ದರು.
ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸ್ಪೇಸ್ ಎಕ್ಸ್, ಟೆಸ್ಲಾ ಕಂಪನಿಗಳ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಪರೂಪದ ಜೋಡಿ ಎಂದೇ ಹೇಳಲಾಗುತ್ತಿತ್ತು. ಒಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾದರೆ, ಮತ್ತೊಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ದೇಶದ ಅಧ್ಯಕ್ಷ. ಆದರೆ ಇಬ್ಬರ ಸ್ನೇಹಕ್ಕೆ ಒಂದು ವರ್ಷ ತುಂಬುವುದರೊಳಗೆ ಮನಸ್ತಾಪ ಹುಟ್ಟಿಕೊಂಡಿದ್ದು, ಈಗ ಅದು ದ್ವೇಷವಾಗಿ ಬದಲಾಗಿದೆ.
ಎಲಾನ್ ಮಸ್ಕ್ ಟ್ರಂಪ್ ವಿರುದ್ಧ ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ಈ ಮೂಲಕ ಅಮೆರಿಕ ಪಕ್ಷ ಎಂಬ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.ಒನ್ ಬಿಗ್ ಬ್ಯೂಟಿಫುಲ್ ಬಿಲ್ ತೆರಿಗೆದಾರರ ಮೇಲೆ ತೀವ್ರ ಹೊರೆಯುಂಟು ಮಾಡಲಿದೆ ಎಂಬುದು ಮಸ್ಕ್ ವಾದ.
ಅಮೆರಿಕದ ಜನರನ್ನು ಪ್ರತಿನಿಧಿಸುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಇದು ಸರಿಯಾದ ಸಮಯವೇ ಎಂಬ ಪ್ರಶ್ನೆಗೆ ಎಕ್ಸ್ನಲ್ಲಿ ಶೇ.80ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Sun, 6 July 25