ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವುದೇ ನನ್ನ ಪ್ಲ್ಯಾನ್ ಆಗಿತ್ತು, ಸಾವಿಗೆ ಹೆದರಲ್ಲ: ಫ್ಲೈದುಬೈ ಸಹ-ಪೈಲಟ್ ಹಮ್ಮಾಮಿ ಸ್ಫೋಟಕ ತಪ್ಪೊಪ್ಪಿಗೆ

ಫ್ಲೈದುಬೈ ಸಹ-ಪೈಲಟ್ ಹಮ್ಮಾಮಿ ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವ ಸಂಚು ರೂಪಿಸಿ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ್ದ. ಆದರೆ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಪ್ರಾಣ ಪಣಕ್ಕಿಟ್ಟು, 174 ಜನರ ಜೀವ ಉಳಿಸಿದರು. ಈ ಭಯೋತ್ಪಾದಕ ಕೃತ್ಯ ಸಿರಿಯಾ ಲಿಂಕ್ ಹೊಂದಿದ್ದು, ವಿಮಾನಯಾನ ಭದ್ರತಾ ವೈಫಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಸ್ರೇಲ್ ಭಾರತೀಯ ಪೈಲಟ್ ಅನ್ನು ಗೌರವಿಸಿದೆ.

ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವುದೇ ನನ್ನ ಪ್ಲ್ಯಾನ್ ಆಗಿತ್ತು, ಸಾವಿಗೆ ಹೆದರಲ್ಲ: ಫ್ಲೈದುಬೈ  ಸಹ-ಪೈಲಟ್ ಹಮ್ಮಾಮಿ ಸ್ಫೋಟಕ ತಪ್ಪೊಪ್ಪಿಗೆ
ಮಚ್ಚರ್, ಹಮಾಮ್
Image Credit source: X Account

Updated on: Oct 05, 2026 | 7:35 AM

ದುಬೈ, ಅಕ್ಟೋಬರ್ 05: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ  ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಓಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ , ವಿಚಾರಣೆ ವೇಳೆ ಅತ್ಯಂತ ಆಘಾತಕಾರಿ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ.

‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, ಸೌದಿ ಅರೇಬಿಯಾ ಮತ್ತು ಯುಎಇ ತನಿಖಾಧಿಕಾರಿಗಳ ತೀವ್ರ ವಿಚಾರಣೆ ವೇಳೆ ಆತ, “ನನಗೆ ಸಾವಿನ ಭಯವಿರಲಿಲ್ಲ; ಇಸ್ರೇಲ್ ನೆಲದ ಮೇಲೆಯೇ ಈ ವಿಮಾನವನ್ನು ಅಪ್ಪಳಿಸಿ ಭೀಕರ ದುರಂತ ಸೃಷ್ಟಿಸುವುದು ನನ್ನ ಗುರಿಯಾಗಿತ್ತು” ಎಂದು ಒಪ್ಪಿಕೊಂಡಿದ್ದಾನೆ.

ದಾಳಿಯ ಭೀಕರ ಕ್ಷಣ: ಪ್ರಾರ್ಥನೆಯ ನೆಪ ಹೇಳಿ ಕೊಡಲಿಯಿಂದ ಹಲ್ಲೆ

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದು, ಆ ಕರಾಳ ಕ್ಷಣವನ್ನು ವಿವರಿಸಿದ್ದಾರೆ

ಹಿಂಬದಿಯಿಂದ ಕೊಡಲಿಯೇಟು: ವಿಮಾನ ಹಾರಾಟದಲ್ಲಿದ್ದಾಗ ಹಮ್ಮಾಮಿ ಪ್ರಾರ್ಥನೆ ಮಾಡಲು ಅನುಮತಿ ಕೇಳಿದನು. ಸ್ಮಿತ್ ಸಮ್ಮತಿಸುತ್ತಿದ್ದಂತೆ, ಕಾಕ್‌ಪಿಟ್‌ನಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಸ್ಮಿತ್ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ.

ಮತ್ತಷ್ಟು ಓದಿ: ಪ್ರಾರ್ಥನೆ ನೆಪದಲ್ಲಿ ಎದ್ದುನಿಂತು ಕ್ಯಾ. ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದ ಫ್ಲೈದುಬೈ ಸಹ ಪೈಲಟ್!

ಸ್ಮಿತ್ ಪ್ರತಿರೋಧ: ಮೊದಲು ವಿಮಾನಕ್ಕೇ ಏನೋ ತಾಂತ್ರಿಕ ತೊಂದರೆಯಾಗಿ ಅಪ್ಪಳಿಸುತ್ತಿದೆ ಎಂದು ಭಾವಿಸಿದೆ. ಆದರೆ ಸತತವಾಗಿ ಹೊಡೆತಗಳು ಬೀಳುತ್ತಿದ್ದಾಗ, ನನ್ನ ಪಕ್ಕದಲ್ಲಿದ್ದವನೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು. ರಕ್ತ ಸುರಿಯುತ್ತಿದ್ದರೂ ಜೀವದ ಹಂಗು ತೊರೆದು ಕಾಕ್‌ಪಿಟ್ ಬಾಗಿಲನ್ನು ಹೊರಗೆ ಎಳೆದು ಅನ್‌ಲಾಕ್ ಮಾಡಿದೆ” ಎಂದು ಸ್ಮಿತ್ ಹೇಳಿದ್ದಾರೆ.

ಸಿರಿಯಾ ಮತ್ತು ಉಗ್ರ ಸಿದ್ಧಾಂತ: ಹಮ್ಮಾಮಿ ಓಮನ್ ಪ್ರಜೆಯಾಗಿದ್ದರೂ, ಆತನ ತಾಯಿ ಸಿರಿಯಾ ಮೂಲದವರಾಗಿದ್ದು, ಆತ ತನ್ನ ಹೆಚ್ಚಿನ ಸಮಯವನ್ನು ಸಿರಿಯಾದಲ್ಲೇ ಕಳೆದಿದ್ದನು. ಅಲ್ಲಿಯೇ ಆತ ತೀವ್ರಗಾಮಿ ಉಗ್ರ ಸಿದ್ಧಾಂತಕ್ಕೆ ಮಾರುಹೋಗಿದ್ದ.

ಓಮನ್‌ನಲ್ಲಿ ಬ್ಯಾನ್ ಆಗಿದ್ದ ಪೈಲಟ್: 2024 ರಲ್ಲಿ ‘ಓಮನ್ ಏರ್’ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿದ್ದಾಗ ಈತನ ಬಳಿ ಉಗ್ರಗಾಮಿ ಸಾಹಿತ್ಯ ಮತ್ತು ಸಾಮಗ್ರಿಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತನನ್ನು ಹಾರಾಟ ನಡೆಸದಂತೆ ತವರು ನೆಲದಲ್ಲೇ ನಿಷೇಧಿಸಲಾಗಿತ್ತು.

ಭದ್ರತಾ ವೈಫಲ್ಯದ ಪ್ರಶ್ನೆ: ಓಮನ್‌ನಲ್ಲಿ ಹಾರಾಟ ನಿರ್ಬಂಧವಿದ್ದರೂ ಆತ ಫ್ಲೈದುಬೈಗೆ ಹೇಗೆ ನೇಮಕಗೊಂಡ ಮತ್ತು ಇಸ್ರೇಲ್‌ನಂತಹ ಅತ್ಯಂತ ಸೂಕ್ಷ್ಮ ಮಾರ್ಗದ ವಿಮಾನಕ್ಕೆ ಆತನನ್ನು ಹೇಗೆ ನಿಯೋಜಿಸಲಾಯಿತು ಎಂಬ ಬಗ್ಗೆ ಮೊಸಾದ್ ಮತ್ತು ಯುಎಇ ಭದ್ರತಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ.

ಇಸ್ರೇಲ್‌ನಿಂದ ಅಧಿಕೃತ ಆಹ್ವಾನ: 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಕೃತಜ್ಞತೆ ಸಲ್ಲಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್‌ನ ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಗೌರವ ಅತಿಥಿಯಾಗಿ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

ಯುಎಇ ಭದ್ರತಾ ವರದಿ : ಎಮಿರೇಟ್ಸ್ ನ್ಯೂಸ್ ಏಜೆನ್ಸಿ ಪ್ರಕಾರ, ಇದೊಂದು ವ್ಯವಸ್ಥಿತ ‘ಭಯೋತ್ಪಾದಕ ಕೃತ್ಯ’ವಾಗಿದ್ದು , ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಗರ ಪ್ರದೇಶಕ್ಕೆ ಅಪ್ಪಳಿಸುವ ಸಂಚು ಇದಾಗಿತ್ತು.

ಕಾಕ್‌ಪಿಟ್ ಸುರಕ್ಷತಾ ಕೊಡಲಿ: ವಿಮಾನದಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸಲು ಕಾಕ್‌ಪಿಟ್‌ನಲ್ಲಿ ‘ಕ್ರ್ಯಾಶ್ ಆಕ್ಸ್’ ಇಡಲಾಗಿರುತ್ತದೆ. ದಾಳಿಕೋರ ಪೈಲಟ್ ಅದೇ ಕೊಡಲಿಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವುದು ವಾಯುಯಾನ ವಲಯದಲ್ಲಿ ಸುರಕ್ಷತಾ ನಿಯಮಗಳ ಮರುಪರಿಶೀಲನೆಗೆ ಕಾರಣವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us