ಏಳು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಹಿಳೆಯೊಬ್ಬಳಿಗೆ ತನ್ನನ್ನು ರಾಜಕುಮಾರಿ ಎಂದು ಕರೆಸಿಕೊಳ್ಳುವ ಅಧಿಕಾರಿ ಲಭಿಸಿದೆ. ಹೌದು, ಈ ಸ್ವಾರಸ್ಯಕರ ಸಂಗತಿ ನಡೆದಿರೋದು ಬೆಲ್ಜಿಯಂ ದೇಶದಲ್ಲಿ.
ಬೆಲ್ಜಿಯಂನ ಮಾಜಿ ಅರಸ ಇಮ್ಮಡಿ ಌಲ್ಬರ್ಟ್ ಹೊಂದಿದ್ದ ಅನೈತಿಕ ಸಂಬಂಧದ ಪರಿಣಾಮವಾಗಿ ಆತನಿಗೆ 1968ರಲ್ಲಿ ಹೆಣ್ಣು ಮಗುವೊಂದು ಪ್ರಾಪ್ತವಾಗಿತ್ತು. ಮಗುವಿಗೆ ಡೆಲ್ಫಿನ್ ಬೋಯೆಲ್ ಎಂದು ನಾಮಕರಣ ಸಹ ಮಾಡಲಾಗಿತ್ತು. ಆದರೆ, ಎಲ್ಲಿ ಈ ಕೂಸು ತನ್ನ ಅರಸೊತ್ತಿಗೆಗೆ ಕಂಟಕವಾಗುತ್ತಾಳೋ ಅನ್ನೋ ಭೀತಿಯಲ್ಲಿ ಌಲ್ಬರ್ಟ್ ಡೆಲ್ಫಿನ್ನ ತನ್ನ ಮಗಳೆಂದು ಒಪ್ಪಿಕೊಂಡಿರಲಿಲ್ಲ.
ಇದೀಗ, ಪ್ರತಿಷ್ಠಿತ ಕಲಾವಿದೆಯಾಗಿ ಹೆಸರು ಮಾಡಿರುವ ಡೆಲ್ಫಿನ್ ಌಲ್ಬರ್ಟ್ ತನ್ನನ್ನು ಮಗಳೆಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಳು. ಇದಕ್ಕೆ ಮಾಜಿ ಅರಸ ಒಪ್ಪದಿದ್ದಾಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಳು. ಸತತ ಏಳು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಕೊನೆಗೂ ಜಯಶಾಲಿಯಾಗಿದ್ದಾಳೆ. ಕೋರ್ಟ್ ಆದೇಶಿಸಿದ DNA ಪರೀಕ್ಷೆಯಲ್ಲಿ ಡೆಲ್ಫಿನ್ ಌಲ್ಬರ್ಟ್ ಮಗಳು ಎಂದು ಸಾಬೀತಾಗಿದೆ. ಇದೀಗ, ಡೆಲ್ಫಿನ್ ತನ್ನ ಉಪನಾಮವನ್ನು ರಾಜಮನೆತನಕ್ಕಿರುವ ಸಾಕ್ಸೆ ಕೋಬರ್ಗ್ಗೆ ಬದಲಾಯಿಸಲು ಅನುಮತಿ ಸಿಕ್ಕಿದೆ. ಜೊತೆಗೆ, ಇನ್ಮುಂದೆ ಎಲ್ಲರೂ ತನ್ನನ್ನು ರಾಜಕುಮಾರಿ ಎಂದೇ ಸಂಬೋಧಿಸಬೇಕು ಎಂಬ ಅಧಿಕಾರ ಸಹ ದೊರೆತಿದೆ.