‘ನಾನು ಜೀವಂತವಾಗಿ ಮರಳದೇ ಇರಬಹುದು’; ಜೈಲಿನಲ್ಲಿ ಹೃದಯಾಘಾತ, ಪಾರ್ಶ್ವವಾಯು ಭೀತಿ ಇದೆ ಎಂದು ನ್ಯಾಯಾಧೀಶರಿಗೆ ಪತ್ರ ಬರೆದ ಇಮ್ರಾನ್ ಖಾನ್

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ತಕ್ಷಣವೇ ತಮಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ. "ನಾನು ಜೀವಂತವಾಗಿ ಮರಳದೇ ಇರಬಹುದು" ಎಂಬ ಗಂಭೀರ ಎಚ್ಚರಿಕೆಯೊಂದಿಗೆ ಅವರು ತಮ್ಮ ಜೀವಕ್ಕೆ ಇರುವ ಅಪಾಯದ ಕುರಿತು ಕಳವಳ ಹೊರಹಾಕಿದ್ದಾರೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ 74 ವರ್ಷದ ಇಮ್ರಾನ್ ಖಾನ್ ಅವರ ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದು, ತಕ್ಷಣದ ಮತ್ತು ವಿಶೇಷ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಯ ಅಗತ್ಯವಿದೆ ಎಂದು ಅವರ ವಕೀಲರು ಮತ್ತು ಪಕ್ಷದ ನಾಯಕರು ತಿಳಿಸಿದ್ದಾರೆ.

‘ನಾನು ಜೀವಂತವಾಗಿ ಮರಳದೇ ಇರಬಹುದು’; ಜೈಲಿನಲ್ಲಿ ಹೃದಯಾಘಾತ, ಪಾರ್ಶ್ವವಾಯು ಭೀತಿ ಇದೆ ಎಂದು ನ್ಯಾಯಾಧೀಶರಿಗೆ ಪತ್ರ ಬರೆದ ಇಮ್ರಾನ್ ಖಾನ್
ಇಮ್ರಾನ್ ಖಾನ್
Image Credit source: AP

Updated on: Nov 16, 2026 | 10:57 PM

ಇಸ್ಲಾಮಾಬಾದ್, ನವೆಂಬರ್ 16: ಜೈಲಿನಲ್ಲಿ ತಮ್ಮ ಆರೋಗ್ಯ ತೀವ್ರವಾಗಿ ಹದಗೆಡುತ್ತಿರುವ ನಡುವೆಯೇ, ತಾವು ಸೆರೆಮನೆಯಲ್ಲೇ ಸಾವನ್ನಪ್ಪಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ತಮಗೆ ಮತ್ತು ತಮ್ಮ ಪತ್ನಿ ಬುಶ್ರಾ ಬೀಬಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಬಲಗಣ್ಣಿನ ಶೇ. 85ರಷ್ಟು ದೃಷ್ಟಿ ಕಳೆದುಕೊಂಡಿದ್ದು, ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದ ಅಪಾಯದಲ್ಲಿದ್ದೇನೆ ಎಂದು ಹೇಳಿರುವ ಇಮ್ರಾನ್ ಖಾನ್, ಈ ಹಿಂದೆ ನಡೆದ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ಬುಶ್ರಾ ಅವರ ದೃಷ್ಟಿಯೂ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.

ಜೈಲಿನಲ್ಲಿ ತಮಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಮತ್ತು ತಮ್ಮನ್ನು ಏಕಾಂತವಾಸದಲ್ಲಿ ಇರಿಸಿ ಮಾನಸಿಕ ಹಾಗೂ ದೈಹಿಕ ಒತ್ತಡ ಹೇರಲಾಗುತ್ತಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಸಿಗದಿದ್ದರೆ ತಾವು ಜೀವಂತವಾಗಿ ಹೊರಬರುವುದಿಲ್ಲ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬದ ವೈಯಕ್ತಿಕ ವೈದ್ಯರಿಗೆ ಜೈಲಿಗೆ ಭೇಟಿ ನೀಡಿ ತಮ್ಮ ಆರೋಗ್ಯ ತಪಾಸಣೆ ನಡೆಸಲು ತಕ್ಷಣವೇ ಅನುಮತಿ ನೀಡಬೇಕೆಂದು ಇಮ್ರಾನ್ ಖಾನ್ ಮತ್ತು ಪಿಟಿಐ ಪಕ್ಷದ ನಾಯಕರು ನ್ಯಾಯಾಲಯ ಹಾಗೂ ಆಡಳಿತವನ್ನು ಒತ್ತಾಯಿಸಿದ್ದಾರೆ.

Loading...

ಪಾಕಿಸ್ತಾನದ ಮಾಜಿ ಪ್ರಧಾನಿಯ ಈ ಗಂಭೀರ ಹೇಳಿಕೆಯು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇಮ್ರಾನ್ ಖಾನ್ ಅವರ ಸುರಕ್ಷತೆ ಮತ್ತು ಆರೋಗ್ಯದ ಹೊಣೆಯನ್ನು ಪ್ರಸ್ತುತ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಪಿಟಿಐ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಖಾನ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್: 48 ಗಂಟೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಕ್ಕೆ ಆದೇಶ

ಪಾಕಿಸ್ತಾನದ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಇಮ್ರಾನ್ ಖಾನ್ ತಮ್ಮ ಆತಂಕಗಳನ್ನು ತೋಡಿಕೊಂಡಿದ್ದು, ಅವರ ವಕೀಲ ಬ್ಯಾರಿಸ್ಟರ್ ಸಲ್ಮಾನ್ ಸಫ್ದರ್ ಈ ಪತ್ರವನ್ನು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನ್ಯಾಯಾಧೀಶರಿಗೆ ತಮ್ಮ ಮಾತುಗಳನ್ನು ತಲುಪಿಸುವಂತೆ ಮಾಜಿ ಪ್ರಧಾನಿ ತಮಗೆ ಸೂಚಿಸಿದ್ದರು ಎಂದು ವಕೀಲರು ತಿಳಿಸಿದ್ದಾರೆ. ಸಫ್ದರ್ ಅವರು ನವೆಂಬರ್ 2 ಮತ್ತು ನವೆಂಬರ್ 11ರಂದು ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದರು.

ತಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶಗಳ ಅನುಷ್ಠಾನ ಸೇರಿದಂತೆ ತುರ್ತು ವೈದ್ಯಕೀಯ ಮಧ್ಯಪ್ರವೇಶಕ್ಕೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕರು ಮನವಿ ಮಾಡಿದ್ದಾರೆ. “ನಾನು ಮಾಜಿ ಪ್ರಧಾನಿಯಾಗಿಯಾಗಲಿ ಅಥವಾ ರಾಜಕೀಯ ಪಕ್ಷದ ಮುಖ್ಯಸ್ಥನಾಗಿಯಾಗಲಿ ಇದನ್ನು ಬರೆಯುತ್ತಿಲ್ಲ. ಕ್ರಿಕೆಟ್, ಲೋಕೋಪಕಾರ ಮತ್ತು ಸಾರ್ವಜನಿಕ ಸೇವೆಯ ಮೂಲಕ ನನ್ನ ಜೀವನವನ್ನೇ ಪಾಕಿಸ್ತಾನಕ್ಕೆ ಅರ್ಪಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಖಾನ್ ಎಲ್ಲಿದ್ದಾರೆ? ಮಾಜಿ ಪ್ರಧಾನಿ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಪಾಕಿಸ್ತಾನ

ಆಸ್ಪತ್ರೆ ಕಟ್ಟಿಸಿದವನಿಗೆ ಇಂದು ಚಿಕಿತ್ಸೆಯೇ ಇಲ್ಲ:

“ಚಿಕಿತ್ಸೆ ಪಡೆಯಲು ಆರ್ಥಿಕ ಶಕ್ತಿಯಿಲ್ಲದವರಿಗೆ ಉಚಿತವಾಗಿ ಚಿಕಿತ್ಸೆ ಸಿಗಲಿ ಎಂದು ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಟ್ಟೆ. ಇಂದು, ನನಗೆ ಮತ್ತು ನನ್ನ ಪತ್ನಿಗೆ ಚಿಕಿತ್ಸೆ ನೀಡಿ ಎಂದಷ್ಟೇ ನಾನು ಕೇಳಿಕೊಳ್ಳುತ್ತಿದ್ದೇನೆ” ಎಂದು ಇಮ್ರಾನ್ ಖಾನ್ ಭಾವುಕರಾಗಿ ಬರೆದಿದ್ದಾರೆ. ದೀರ್ಘಕಾಲದ ಏಕಾಂತವಾಸವು ತಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಅವರನ್ನು 2 ದಿನಗಳಲ್ಲಿ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಶನಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು, ಅವರನ್ನು ಪರೀಕ್ಷಿಸಲು ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಮತ್ತು ಕುಟುಂಬದೊಂದಿಗೆ ಸಂವಹನ ನಡೆಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 18ರಂದು ನಿರ್ದೇಶನ ನೀಡಿತ್ತು. ಆದರೆ, ಈ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಅದಕ್ಕೆ ಬದಲಾಗಿ, ಸರ್ಕಾರವು ಅವರನ್ನು ಪಿಮ್ಸ್ ಆಸ್ಪತ್ರೆಗೆ ಕರೆದೊಯ್ದು ನಂತರ ಅಡಿಯಾಲಾ ಜೈಲಿಗೆ ವಾಪಸ್ ಕಳುಹಿಸಿದೆ. ಆ ಸಮಯದಲ್ಲಿ, ಆಸ್ಪತ್ರೆಯ ಬಳಿ ಪಿಟಿಐ ಕಾರ್ಯಕರ್ತರು ಜಮಾಯಿಸಿದ್ದರಿಂದ ಉಂಟಾದ ಭದ್ರತಾ ಕಾರಣಗಳಿಂದಾಗಿ ಮಾರ್ಗ ಬದಲಿಸಲಾಯಿತು ಎಂದು ವಾರ್ತಾ ಸಚಿವ ಅತ್ತಾವುಲ್ಲಾ ತರಾರ್ ಸಮರ್ಥಿಸಿಕೊಂಡಿದ್ದರು.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us