AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಖಾನ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್: 48 ಗಂಟೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಕ್ಕೆ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಅವರನ್ನು 48 ಗಂಟೆಗಳ ಒಳಗಾಗಿ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಉನ್ನತ ನ್ಯಾಯಾಲಯ ಆದೇಶಿಸಿದೆ. ಅಡಿಯಾಲಾ ಜೈಲಿನಿಂದ 48 ಗಂಟೆಗಳಲ್ಲಿ ಶಿಫಾ ಇಂಟರ್‌ನ್ಯಾಷನಲ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ತಿಳಿಸಿದ್ದು, ಇಮ್ರಾನ್ ಖಾನ್ ಅವರ ಆರೋಗ್ಯವನ್ನು ಪರಿಶೀಲಿಸಲು ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆಯೂ ಸೂಚಿಸಿದೆ.

ಇಮ್ರಾನ್ ಖಾನ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್: 48 ಗಂಟೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಕ್ಕೆ ಆದೇಶ
ಇಮ್ರಾನ್ ಖಾನ್‌ಗೆ ಕೋರ್ಟ್‌ನಿಂದ ಬಿಗ್ ರಿಲೀಫ್Image Credit source: PTI
ಪ್ರಸನ್ನ ಹೆಗಡೆ
|

Updated on: Aug 18, 2026 | 3:04 PM

Share

ಇಸ್ಲಾಮಾಬಾದ್, ಆಗಸ್ಟ್​​ 18: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಲ್ಲಿನ ಉನ್ನತ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿದೆ. ಆರೋಗ್ಯ ಹದಗೆಟ್ಟಿರುವ ಆತಂಕದ ಹಿನ್ನೆಲೆಯಲ್ಲಿ, ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರನ್ನು 48 ಗಂಟೆಗಳೊಳಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷ ಮತ್ತು ಕುಟುಂಬದವರು ಹಲವು ದಿನಗಳಿಂದ ಈ ಬೇಡಿಕೆ ಇಟ್ಟಿದ್ದರು. ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಇತ್ತೀಚಿನ ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಸೆಪ್ಟೆಂಬರ್ 16ರವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ

ಪಿಟಿಐ ವಕ್ತಾರ ನಯೀಂ ಹೈದರ್ ಪಂಜುಥಾ ಅವರ ಪ್ರಕಾರ, ಉನ್ನತ ನ್ಯಾಯಾಲಯ ಇಮ್ರಾನ್ ಖಾನ್ ಅವರನ್ನು ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 16ರವರೆಗೆ ಇರಿಸಲು ಸೂಚಿಸಿದೆ. ಜೊತೆಗೆ, ಪ್ರತಿ ವಾರ ಅವರ ಕುಟುಂಬ ಸದಸ್ಯರು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ಆದೇಶಿಸಿದೆ.

ಇದನ್ನೂ ಓದಿ: ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಫಿದಾ! ಇಂಡಿಯನ್ ಮಾಡೆಲ್ ಉಲ್ಲೇಖಿಸಿ ‘ಸೇವ್ ಅಮೆರಿಕಾ ಆ್ಯಕ್ಟ್’ಗೆ ಒತ್ತಾಯ

ವೈದ್ಯಕೀಯ ಮಂಡಳಿ ರಚನೆ

ಇಮ್ರಾನ್ ಖಾನ್ ಅವರ ಆರೋಗ್ಯವನ್ನು ಪರಿಶೀಲಿಸಲು ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಲು ಕೋರ್ಟ್ ಸೂಚಿಸಿದೆ. ಈ ಮಂಡಳಿಯಲ್ಲಿ ಅವರ ವೈಯಕ್ತಿಕ ವೈದ್ಯರು ಮತ್ತು ಸಹೋದರಿ ಡಾ. ಉಜ್ಮಾ ಖಾನ್ ಕೂಡ ಸದಸ್ಯರಾಗಿರುತ್ತಾರೆ. ಆದರೆ, ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಹಂಚಿಕೊಳ್ಳಬಾರದು ಅಥವಾ ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಕೋರ್ಟ್ ಅವರ ಕುಟುಂಬ ಮತ್ತು ವಕೀಲರಿಗೆ ನಿರ್ದೇಶಿಸಿದೆ.

ಆರೋಗ್ಯದ ಬಗ್ಗೆ ಹೆಚ್ಚಿದ ಆತಂಕ

73 ವರ್ಷದ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ಅವರು ಆಗಸ್ಟ್ 2023ರಿಂದ ಅಡಿಯಾಲಾ ಜೈಲಿನಲ್ಲಿದ್ದಾರೆ. ಕಳೆದ ವರ್ಷದಿಂದ ಅವರ ಪುತ್ರರು ತಂದೆಯ ಆರೋಗ್ಯದ ಬಗ್ಗೆ ನಿರಂತರ ಕಳವಳ ವ್ಯಕ್ತಪಡಿಸುತ್ತಿದ್ದು, ಜೈಲಿನಲ್ಲಿದ್ದ ವೇಳೆ ಇಮ್ರಾನ್ ಖಾನ್ ಅವರ ಬಲ ಕಣ್ಣಿನ ದೃಷ್ಟಿ ಗಮನಾರ್ಹವಾಗಿ ಕುಂದಿದೆ ಎಂದು ವಕೀಲರು ತಿಳಿಸಿದ್ದಾರೆ.

ಇಮ್ರಾನ್ ಖಾನ್ ವಿರುದ್ಧದ ಪ್ರಕರಣಗಳು

ಅಧಿಕಾರ ಕಳೆದುಕೊಂಡ ಬಳಿಕ ಇಮ್ರಾನ್ ಖಾನ್ ವಿರುದ್ಧ ಸರ್ಕಾರಿ ಉಡುಗೊರೆಗಳ (ತೋಷಾಖಾನಾ) ಪ್ರಕರಣ, ಕಾನೂನುಬಾಹಿರ ವಿವಾಹ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಕೆಲವು ಶಿಕ್ಷೆಗಳು ಅಮಾನತುಗೊಂಡಿದ್ದರೆ, ಕೆಲವು ತೀರ್ಪುಗಳು ರದ್ದಾಗಿದ್ದು, ಇನ್ನೂ ಮೇಲ್ಮನವಿ ವಿಚಾರಣೆ ಮುಂದುವರಿದಿದೆ. ಆದರೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಇಮ್ರಾನ್ ಖಾನ್ ನಿರಾಕರಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us