AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಶಾಸಕ ಅನಂತ್ ಸಿಂಗ್ ಮಗಳ ಮದುವೆಯಲ್ಲಿ ಪಾತ್ರೆಗೇ ಕೈ ಹಾಕಿ ಊಟ ಬಾಚಿಕೊಂಡ ಜನ; ಭಾರೀ ಟ್ರೋಲ್ ಆಯ್ತು ವಿಡಿಯೋ

ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ ಹಾಗೂ ‘ಬಾಹುಬಲಿ’ (ಬಲಶಾಲಿ ನಾಯಕ) ಎಂದೇ ಹೆಸರಾಗಿರುವ ಅನಂತ್ ಸಿಂಗ್ ಅವರ ಪುತ್ರಿಯ ಅದ್ದೂರಿ ವಿವಾಹ ಮಹೋತ್ಸವದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಬಿಳಿ ಶರ್ಟ್, ಕಪ್ಪು ಕೋಟ್ ಮತ್ತು ಸನ್‌ಗ್ಲಾಸ್ ಧರಿಸಿ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ನಿಂತು ಅನಂತ್ ಸಿಂಗ್ ಗಮ್ಚಾ ತಿರುಗಿಸುತ್ತಿದ್ದರೆ, ಸಾವಿರಾರು ಯುವಕರು "ಛೋಟೆ ಸರ್ಕಾರ್, ಛೋಟೆ ಸರ್ಕಾರ್" ಎಂದು ಜಯಘೋಷ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಅನಂತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನದ್ವಾನ್‌ನಲ್ಲಿ ನಡೆದ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹಕ್ಕೆ ಸುಮಾರು 5 ಲಕ್ಷ ಜನರು ಸೇರಿದ್ದರು. ಮದುವೆಯ ಊಟದ ವ್ಯವಸ್ಥೆಯ ವೇಳೆ ನಡೆದ ಅವಾಂತರಗಳ ವಿಡಿಯೋ ಭಾರೀ ವೈರಲ್ ಆಗುತ್ತಿವೆ.

ಬಿಹಾರದ ಶಾಸಕ ಅನಂತ್ ಸಿಂಗ್ ಮಗಳ ಮದುವೆಯಲ್ಲಿ ಪಾತ್ರೆಗೇ ಕೈ ಹಾಕಿ ಊಟ ಬಾಚಿಕೊಂಡ ಜನ; ಭಾರೀ ಟ್ರೋಲ್ ಆಯ್ತು ವಿಡಿಯೋ
ಅನಂತ್ ಸಿಂಗ್- ಶಿವಾಂಗಿ ಸಿಂಗ್
ಸುಷ್ಮಾ ಚಕ್ರೆ
|

Updated on:Nov 26, 2026 | 11:09 PM

Share

ಲಕ್ನೋ, ನವೆಂಬರ್ 26: ಒಂದು ದೇಶದ ಇಮೇಜ್ ಅನ್ನು ಜಾಗತಿಕ ಮಟ್ಟದಲ್ಲಿ ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು ಸುಲಭದ ಮಾತಲ್ಲ. ಆದರೆ, ಕೇವಲ ಒಂದು ವಿವಾದಾತ್ಮಕ ಹೇಳಿಕೆ, ಒಂದು ವಿಡಿಯೋ, ಒಂದು ಫೋಟೋ ಆ ದೇಶದ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದೀಗ ಬಿಹಾರದಲ್ಲಿ ನಡೆದಿರುವ ಅಲ್ಲಿನ ಸ್ವತಂತ್ರ ಶಾಸಕ ಅನಂತ್ ಸಿಂಗ್ ಅವರ ಮಗಳು ಶಿವಾಂಗಿ ಸಿಂಗ್ ಮದುವೆ ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿದೆ. ಇಂಟರ್ನೆಟ್​ ತುಂಬ ಅನಂತ್ ಸಿಂಗ್ ಮಗಳ ಮದುವೆಯ ವಿಡಿಯೋಗಳೇ ಹರಿದಾಡುತ್ತಿವೆ. ಆದರೆ, ಈ ವಿಡಿಯೋಗಳು ಭಾರತದ ಇಮೇಜನ್ನು ಕುಗ್ಗಿಸುವಂತಿದೆ ಎಂಬುದು ಬೇಸರದ ಸಂಗತಿ. ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು 150 ಕೋಟಿವರೆಗೂ ಖರ್ಚು ಮಾಡಿ ಅನಂತ್ ಸಿಂಗ್ 5 ಲಕ್ಷ ಜನರಿಗೆ ಮದುವೆಯ ಊಟದ ವ್ಯವಸ್ಥೆ ಮಾಡಿದ್ದರು. ಆದರೆ, ಅಲ್ಲಿನ ಅವ್ಯವಸ್ಥೆಯಿಂದಾಗಿ ಮದುವೆಗೆ ಬಂದ ಜನ ನೀರು ಕುಡಿಯುವ ಲೋಟವನ್ನೇ ತಟ್ಟೆಯಾಗಿ ಮಾಡಿಕೊಂಡು, ಅಡುಗೆ ಮಾಡಿಟ್ಟಿದ್ದ ಪಾತ್ರೆಯಿಂದಲೇ ಆಹಾರವನ್ನು ಕೈಯಿಂದ ಬಾಚಿಕೊಂಡು ತಿನ್ನುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತದ ಬಗೆಗಿನ ಇಮೇಜ್ ಮೇಲೆ ಹೊಡೆತ ನೀಡಿದೆ.

ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಮಹೋತ್ಸವವು ಭಾರಿ ಜನಸಂದಣಿ ಮತ್ತು ಊಟದ ಕೌಂಟರ್‌ಗಳ ಬಳಿ ಉಂಟಾದ ತೀವ್ರ ಗೊಂದಲದಿಂದಾಗಿ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸುದ್ದಿಯಾಗಿದೆ. ಸುಮಾರು 5 ಲಕ್ಷ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತಾದರೂ, ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಹರಿದುಬಂದ ಪರಿಣಾಮ ತಟ್ಟೆಗಳ ತೀವ್ರ ಕೊರತೆ ಉಂಟಾಗಿ ಅತಿಥಿಗಳು ನೀರು ಕುಡಿಯುವ ಗ್ಲಾಸ್, ರಟ್ಟಿನ ಕಾರ್ಟನ್‌ಗಳು ಮತ್ತು ದಿನಪತ್ರಿಕೆಗಳಲ್ಲಿ ಆಹಾರ ಹಾಕಿಕೊಂಡು ತಿಂದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗ್ಲಾಸ್, ರಟ್ಟಿನ ಬಾಕ್ಸ್‌ಗಳ ಬಳಕೆ:

ನವೆಂಬರ್ 25ರಂದು ಪಾಟ್ನಾ ಜಿಲ್ಲೆಯ ಅನಂತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನದ್ವಾನ್‌ನಲ್ಲಿ ನಡೆದ ಈ ಮದುವೆಗೆ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಜನಸಾಗರ ಹೆಚ್ಚಾದಂತೆ ಊಟದ ಕೌಂಟರ್‌ಗಳ ಬಳಿ ತಟ್ಟೆಗಳು ಖಾಲಿಯಾದವು. ಹೀಗಾಗಿ ಹಲವರು ನೀರು ಕುಡಿಯುವ ಗ್ಲಾಸ್‌ಗಳಲ್ಲೇ ಊಟ ಹಾಕಿಕೊಂಡು ತಿಂದರೆ, ಇನ್ನು ಕೆಲವರು ರಟ್ಟಿನ ಬಾಕ್ಸ್‌ಗಳು ಮತ್ತು ನ್ಯೂಸ್‌ಪೇಪರ್‌ಗಳನ್ನೇ ತಟ್ಟೆಗಳನ್ನಾಗಿ ಬಳಸಿಕೊಂಡಿದ್ದಾರೆ. ಅನೇಕರು ಬಡಿಸುವ ಕೌಂಟರ್‌ಗಳನ್ನು ದಾಟಿ ನೇರವಾಗಿ ಬೃಹತ್ ಪಾತ್ರೆಗಳಿಂದಲೇ ತಮಗೆ ಬೇಕಾದ ಆಹಾರವನ್ನು ತೆಗೆದುಕೊಳ್ಳುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ಅನಂತ್ ಸಿಂಗ್ ಪುತ್ರಿ ಶಿವಾಂಗಿಯ ಮದುವೆಗೆ ಜನಸಾಗರ: ಟ್ರಾಫಿಕ್ ಜಾಮ್, ಕುದುರೆ ರೇಸ್‌ ನೋಡಲು ವಿದ್ಯುತ್ ಕಂಬವೇರಿದ ಜನ

ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಆಹಾರ ವಿತರಣೆಯ ನಿರ್ವಾಹಕರು ಕಾಯುತ್ತಿದ್ದ ಅತಿಥಿಗಳತ್ತ ಗಾಳಿಯಲ್ಲೇ ತಟ್ಟೆಗಳನ್ನು ಎಸೆಯುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಟ್ವೀಟ್​ ಕೌಂಟರ್ ಬಳಿಯಂತೂ ಭಾರಿ ನೂಕುನುಗ್ಗಲು ಉಂಟಾಗಿದ್ದು, ರಸಗುಲ್ಲಾ ಟ್ರೇಗಳನ್ನು ತಂದಿಟ್ಟ ಕೆಲವೇ ಕ್ಷಣಗಳಲ್ಲಿ ಖಾಲಿಯಾಗುತ್ತಿದ್ದವು. ಜನರನ್ನು ನಿಯಂತ್ರಿಸಲು ಕೆಲವೆಡೆ ಲಾಠಿ ಪ್ರಹಾರವನ್ನೂ ನಡೆಸಲಾಗಿದೆ.

ಅಂದಾಜು 150 ಕೋಟಿ ವೆಚ್ಚದಲ್ಲಿ ಈ ವಿವಾಹವನ್ನು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ. ವಿಐಪಿ ಅತಿಥಿಗಳಿಗಾಗಿ ಹೆಲಿಪ್ಯಾಡ್‌ಗಳು, ವರನಿಗೆ 3 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಮತ್ತು ಕುದುರೆ ರೇಸ್‌ನಲ್ಲಿ ಗೆದ್ದವರಿಗೆ ಮಹೀಂದ್ರಾ ಥಾರ್ ಬಹುಮಾನ ನೀಡುವಂತಹ ಐಷಾರಾಮಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಊಟದ ಮೆನುವಿನಲ್ಲಿ ಬಿಹಾರದ ಪ್ರಸಿದ್ಧ ಲಿಟ್ಟಿ-ಚೋಖಾ, ಪನ್ನೀರ್ ಖಾದ್ಯಗಳು, ಪಿಜ್ಜಾ-ಬರ್ಗರ್ ಸೇರಿದಂತೆ 150ಕ್ಕೂ ಹೆಚ್ಚು ಬಗೆಯ ಸಸ್ಯಾಹಾರಿ ಖಾದ್ಯಗಳು ಮತ್ತು ಲಕ್ಷಾಂತರ ರಸಗುಲ್ಲಾ ಹಾಗೂ ಗುಲಾಬ್ ಜಾಮೂನ್‌ಗಳನ್ನು ಸಿದ್ಧಪಡಿಸಲಾಗಿತ್ತು.

ಇದನ್ನೂ ಓದಿ: ಮಂಚದ ಮೇಲೆ ಮಲಗಿಕೊಂಡೇ ತಿಲಕ ಇರಿಸಿಕೊಂಡ ಬಿಹಾರದ ಶಾಸಕ ಅನಂತ್ ಸಿಂಗ್; ವಿಡಿಯೋ ವೈರಲ್

ಮದುವೆಗೂ ಮುನ್ನ ಪ್ರೆಸ್​ಮೀಟ್ ಮಾಡಿದ್ದ ಅನಂತ್ ಸಿಂಗ್ ತಮ್ಮ ಮಗಳ ಮದುವೆಗೆ ಬಿಹಾರ ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳಿಂದ, ಪಾಕಿಸ್ತಾನ ಸೇರಿದಂತೆ ಬೇರೆ ದೇಶಗಳಿಂದಲೂ ಜನರು ಆಗಮಿಸಬಹುದು ಎಂದು ಬಹಿರಂಗವಾಗಿ ಆಹ್ವಾನ ನೀಡಿದ್ದರು. ಮದುವೆಗೆ ಲಕ್ಷಾಂತರ ಜನರು ಏಕಕಾಲಕ್ಕೆ ಆಗಮಿಸಿದ್ದರಿಂದ ನದ್ವಾನ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸುಮಾರು 10 ಕಿಲೋಮೀಟರ್‌ಗಳವರೆಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. “ಈ ಮದುವೆಯಲ್ಲಿ ಒಂದು ಹೊತ್ತಿನ ಊಟ ಪಡೆಯುವುದು ಒಂದು ಯುದ್ಧ ಗೆದ್ದಷ್ಟೇ ಕಷ್ಟಕರವಾಗಿತ್ತು” ಎಂದು ಅತಿಥಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ಭಾರತದ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ ಈ ರೀತಿಯ ಅದ್ದೂರಿ ಮದುವೆ ಏರ್ಪಡಿಸಿ, ಜನರಿಗೆ ಸರಿಯಾಗಿ ಊಟ ಸಿಗದೆ ಅವರು ತಳ್ಳಾಡುತ್ತಾ ಪಾತ್ರೆಯೊಳಗೇ ಕುಳಿತು ಊಟ ಮಾಡುತ್ತಿರುವ ದೃಶ್ಯಗಳು ಭಾರತದ ಜನರ ಜೀವನ ಮಟ್ಟದ ಬಗ್ಗೆ ಚರ್ಚೆ ನಡೆಸುವಂತೆ ಮಾಡಿವೆ.

ಭಾರತದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಬಿಹಾರವೂ ಒಂದಾಗಿದೆ. ನಿರುದ್ಯೋಗ, ಬಡತನ ಮತ್ತು ಉದ್ಯೋಗಕ್ಕಾಗಿ ವಲಸೆ ಹೋಗುವ ಸಮಸ್ಯೆಗಳನ್ನು ರಾಜ್ಯ ಇಂದಿಗೂ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಹಾರದ ಯುವಕರು ಉತ್ತಮ ವಿಶ್ವವಿದ್ಯಾಲಯಗಳು, ಉದ್ಯೋಗ, ಆಸ್ಪತ್ರೆಗಳು ಮತ್ತು ಮೂಲಸೌಕರ್ಯಗಳಿಗಾಗಿ ಒತ್ತಾಯಿಸಬೇಕಿದೆ. ಪ್ರಬಲ ರಾಜಕಾರಣಿಯೊಬ್ಬರನ್ನು ನೋಡಲು ನೂರಾರು ಕಿಲೋಮೀಟರ್ ಪ್ರಯಾಣಿಸುವ ಯುವಜನತೆ, ಒಂದು ಸಾರ್ವಜನಿಕ ಗ್ರಂಥಾಲಯ ಅಥವಾ ಉತ್ತಮ ಶಾಲೆಗಾಗಿ ಏಕೆ ಅಷ್ಟೇ ಉತ್ಸಾಹ ತೋರುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 pm, Thu, 26 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More