ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ಪಹಲ್ಗಾಮ್ ದಾಳಿ ಪ್ರಸ್ತಾಪಿಸಿ ಜಾಗತಿಕ ವೇದಿಕೆಯಲ್ಲಿ ಪಾಕ್ ವಿರುದ್ಧ ಭಾರತ ನೇರ ವಾಗ್ದಾಳಿ

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತವು ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದೆ. 'ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ' ಎಂಬುದು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ ಭಾರತ, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಪ್ರತಿಪಾದಿಸಿದೆ. ಪಹಲ್ಗಾಮ್ ದಾಳಿ ಉಲ್ಲೇಖಿಸಿ, ಭಯೋತ್ಪಾದಕರಿಗೆ ಆಶ್ರಯ, ಹಣಕಾಸು ನೀಡುವವರ ವಿರುದ್ಧ ಕ್ರಮಕ್ಕೆ ಕರೆ ನೀಡಿದೆ. ಪಾಕಿಸ್ತಾನದ ಆರೋಪಗಳನ್ನು ಅಲ್ಲಗಳೆದಿದ್ದು, ಜಾಗತಿಕವಾಗಿ ಚರ್ಚೆ ಮುಂದುವರೆದಿದೆ.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ಪಹಲ್ಗಾಮ್ ದಾಳಿ ಪ್ರಸ್ತಾಪಿಸಿ ಜಾಗತಿಕ ವೇದಿಕೆಯಲ್ಲಿ ಪಾಕ್ ವಿರುದ್ಧ ಭಾರತ ನೇರ ವಾಗ್ದಾಳಿ
ಬಿಪ್ಲಬ್

Updated on: Oct 07, 2026 | 12:58 PM

ನ್ಯೂಯಾರ್ಕ್​, ಅಕ್ಟೋಬರ್ 07: ಗಡಿಯಾಚೆಗಿನ ಭಯೋತ್ಪಾದನೆ ವಿಚಾರದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಆರನೇ ಸಮಿತಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್, ಭಯೋತ್ಪಾದನೆಗೆ ಯಾವುದೇ ರೀತಿಯ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆಯಿಂದ ತನ್ನ ಜನರು ಮತ್ತು ಗಡಿಗಳನ್ನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಗಂಭೀರ ಆರೋಪ

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ದೇಬ್ ಆರೋಪಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ, ಹಣಕಾಸು ಮತ್ತು ಬೆಂಬಲ ನೀಡುವವರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಪಹಲ್ಗಾಮ್ ದಾಳಿಯ ಉಲ್ಲೇಖ

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಘಟನೆಯನ್ನು ದೇಬ್ ಪ್ರಸ್ತಾಪಿಸಿದ್ದಾರೆ. ಈ ದಾಳಿಯ ಹಿಂದೆ ಇರುವ ಸಂಘಟಕರು, ಹಣಕಾಸು ಒದಗಿಸಿದವರು ಮತ್ತು ಪ್ರಾಯೋಜಕರನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆ ದಾಖಲೆಗಳಲ್ಲಿಯೂ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿರುವುದನ್ನು ಉಲ್ಲೇಖಿಸಲಾಗಿದೆ.

ಪೋಸ್ಟ್

‘ಒಳ್ಳೆಯ-ಕೆಟ್ಟ ಭಯೋತ್ಪಾದನೆ’ ಇಲ್ಲ

ಭಯೋತ್ಪಾದನೆಯನ್ನು ‘ಒಳ್ಳೆಯದು’ ಮತ್ತು ‘ಕೆಟ್ಟದ್ದು’ ಎಂದು ವಿಭಜಿಸುವುದನ್ನು ಭಾರತ ಒಪ್ಪುವುದಿಲ್ಲ ಎಂದು ದೇಬ್ ಹೇಳಿದ್ದಾರೆ. ಯಾವುದೇ ಕಾರಣ ನೀಡಿದರೂ ನಾಗರಿಕರನ್ನು ಗುರಿಯಾಗಿಸುವ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂಬುದು ಭಾರತದ ನಿಲುವು.

ಮತ್ತಷ್ಟು ಓದಿ: ‘ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’; ಅಫ್ಘಾನ್ ಮೇಲಿನ ಪಾಕಿಸ್ತಾನದ ದಾಳಿಗೆ ಭಾರತ ಖಂಡನೆ

ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತು ಸಮಗ್ರ ಸಮಾವೇಶವಾದ ಸಿಸಿಐಟಿಯನ್ನು ಅನ್ನು ಶೀಘ್ರವಾಗಿ ಅಂಗೀಕರಿಸಬೇಕು ಎಂದು ಭಾರತ ಮತ್ತೆ ಒತ್ತಾಯಿಸಿದೆ. ಭಾರತ 1996ರಲ್ಲೇ ಈ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಭಯೋತ್ಪಾದನೆಯ ವ್ಯಾಖ್ಯಾನ ಸೇರಿದಂತೆ ಹಲವು ವಿಚಾರಗಳಲ್ಲಿ ದೇಶಗಳ ನಡುವೆ ಒಮ್ಮತ ಮೂಡದ ಕಾರಣ ಸಮಾವೇಶ ಇನ್ನೂ ಅಂತಿಮಗೊಂಡಿಲ್ಲ. ವಿಶ್ವಸಂಸ್ಥೆ ಆರನೇ ಸಮಿತಿಯ 2026ರ ಕಾರ್ಯಸೂಚಿಯಲ್ಲೂ ಸಿಸಿಐಟಿ ಕುರಿತು ಚರ್ಚೆ ಮುಂದುವರೆದಿದೆ.

ಭಾರತ–ಪಾಕಿಸ್ತಾನ ನಡುವೆ ಆರೋಪ–ಪ್ರತ್ಯಾರೋಪ

ಭಾರತದ ಹೇಳಿಕೆಗೆ ಪಾಕಿಸ್ತಾನವೂ ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯಿಸಿದೆ. ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಆರೋಪಗಳನ್ನು ಪಾಕಿಸ್ತಾನ ತಳ್ಳಿಹಾಕಿದ್ದು, ಭಾರತದ ಆರೋಪಗಳಿಗೆ ಸಾಕ್ಷ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಭಯೋತ್ಪಾದನೆ ವಿಚಾರದಲ್ಲಿ ಎರಡೂ ದೇಶಗಳ ನಡುವೆ ವಿಶ್ಸಂಸ್ಥೆ ವೇದಿಕೆಯಲ್ಲೂ ಆರೋಪ–ಪ್ರತ್ಯಾರೋಪ ಮುಂದುವರೆದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us