AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಯೋತ್ಪಾದನೆ ನಿಯಂತ್ರಣವೇ ಭಾರತದ ಮುಖ್ಯ ಕಳಕಳಿ’; ಅಮೆರಿಕಕ್ಕೆ ಸಚಿವ ಎಸ್. ಜೈಶಂಕರ್ ಖಡಕ್ ಸಂದೇಶ

ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ತಮಗೆ ಅತ್ಯಂತ ಕಳವಳಕಾರಿಯಾದ ಭಯೋತ್ಪಾದನೆ ನಿಯಂತ್ರಣದ ವಿಷಯವನ್ನು ಮಿತ್ರರಾಷ್ಟ್ರಗಳು ಆಳವಾಗಿ ಅರ್ಥೈಸಿಕೊಳ್ಳುವುದು ಅತ್ಯಗತ್ಯ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಯಾರೊಂದಿಗೆ ಮಾತುಕತೆ ನಡೆಸುತ್ತಿದೆ ಹಾಗೂ ಏನು ಮಾಡುತ್ತಿದೆ ಎಂಬುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುವುದು ಏಕೆ ಮುಖ್ಯ ಎಂಬುದನ್ನು ಅವರು ವ್ಯಾಖ್ಯಾನಿಸಿದ್ದಾರೆ. ಅಮೆರಿಕ ತನ್ನ ಸ್ವಂತ ನೀತಿಗಳಿಗಾಗಿ ಪದೇ ಪದೇ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

'ಭಯೋತ್ಪಾದನೆ ನಿಯಂತ್ರಣವೇ ಭಾರತದ ಮುಖ್ಯ ಕಳಕಳಿ'; ಅಮೆರಿಕಕ್ಕೆ ಸಚಿವ ಎಸ್. ಜೈಶಂಕರ್ ಖಡಕ್ ಸಂದೇಶ
ಜೈಶಂಕರ್Image Credit source: PTI
ಸುಷ್ಮಾ ಚಕ್ರೆ
|

Updated on:Sep 29, 2026 | 3:41 PM

Share

ಮುಖ್ಯಾಂಶಗಳು

  • ಗಡಿಯಾಚೆಗಿನ ಭಯೋತ್ಪಾದನೆ ಮತ್ತು ನೆರೆಹೊರೆಯ ದೇಶ ಪಾಕಿಸ್ತಾನದ ಕುಮ್ಮಕ್ಕು
  • ಉಗ್ರವಾದದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂ ಭಾರತ
  • ಭಾರತದ ಭದ್ರತೆಗೆ ಪ್ರಥಮ ಆದ್ಯತೆ ಎಂದ ಸಚಿವ ಜೈಶಂಕರ್

ನ್ಯೂಯಾರ್ಕ್, ಸೆಪ್ಟೆಂಬರ್ 29: ವ್ಯಾಪಾರ ಒಪ್ಪಂದದ ವಿಳಂಬ, ಸುಂಕ ನೀತಿಯ ಅನಿಶ್ಚಿತತೆ ಮತ್ತು ಮುಖ್ಯವಾಗಿ ಪಾಕಿಸ್ತಾನ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದಲ್ಲಿ ಭಾರತದ ಆತಂಕಗಳನ್ನು ಅಮೆರಿಕ ಆಳವಾಗಿ ಗ್ರಹಿಸದೇ ಇರುವುದರಿಂದ ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಿನ್ನಡೆ ಅನುಭವಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಏಷ್ಯಾ ಸೊಸೈಟಿ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ರಾಜತಾಂತ್ರಿಕ ಡ್ಯಾನಿಯಲ್ ರಸ್ಸೆಲ್ ಅವರೊಂದಿಗೆ ಮಾತನಾಡಿದ ಜೈಶಂಕರ್, ಜಾಗತಿಕ ರಾಜಕೀಯ ಮತ್ತು ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.

“ಭಾರತಕ್ಕೆ ಅತ್ಯಂತ ಮುಖ್ಯವಾದದ್ದು ಭಯೋತ್ಪಾದನೆಯ ವಿಷಯ. ದಶಕಗಳಿಂದ ನೆರೆಹೊರೆಯ ದೇಶವೊಂದು ಉದ್ದೇಶಪೂರ್ವಕ ಹಾಗೂ ಯೋಜಿತ ನೀತಿಯ ಭಾಗವಾಗಿ ಹರಡುತ್ತಿರುವ ಭಯೋತ್ಪಾದನೆಯಿಂದ ಭಾರತ ಅನುಭವಿಸಿರುವಷ್ಟು ಸಂಕಷ್ಟವನ್ನು ಪ್ರಪಂಚದಾದ್ಯಂತ ಯಾವುದೇ ದೇಶವೂ ಅನುಭವಿಸಿಲ್ಲ” ಎಂದು ಜೈಶಂಕರ್ ಹೇಳಿದರು. ನೇರವಾಗಿ ಪಾಕಿಸ್ತಾನದ ಹೆಸರು ಹೇಳದೆಯೇ, ಅಮೆರಿಕ ತನ್ನ ಸ್ವಂತ ನೀತಿಗಳಿಗಾಗಿ ಪದೇ ಪದೇ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಟೀಕಿಸಿದರು.

“ದಶಕಗಳಿಂದ ನೆರೆಹೊರೆಯ ದೇಶವೊಂದು (ಪಾಕಿಸ್ತಾನ) ಯೋಜಿತ ನೀತಿಯ ಭಾಗವಾಗಿ ಹರಡುತ್ತಿರುವ ಭಯೋತ್ಪಾದನೆಗೆ ಭಾರತ ತುತ್ತಾಗಿರುವಂತೆ ವಿಶ್ವದ ಇತರ ಯಾವುದೇ ದೇಶ ಅನುಭವಿಸಿಲ್ಲ. ಈ ವಿಚಾರದಲ್ಲಿ ನಮ್ಮ ಮಿತ್ರರಾಷ್ಟ್ರದಿಂದ ಸಾಂತ್ವನ ಅಥವಾ ಸರಿಯಾದ ತಿಳುವಳಿಕೆ ಸಿಗದಿದ್ದರೆ, ಅದು ಖಂಡಿತವಾಗಿಯೂ ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಜೈಶಂಕರ್ ಎಚ್ಚರಿಸಿದ್ದಾರೆ.

ಸೆಪ್ಟೆಂಬರ್ 11ರ ಭೀಕರ ಭಯೋತ್ಪಾದಕ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ಕೂಡ ಪಾಕಿಸ್ತಾನದ ಸೇನಾ ನೆಲೆ ಇರುವ ನಗರದಲ್ಲೇ ಅಡಗ ಕುಳಿತಿದ್ದನ್ನು ಇಲ್ಲಿ ಸ್ಮರಿಸಬಹುದು. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತದ ಆತಂಕಗಳನ್ನು ಅರ್ಥ ಮಾಡಿಕೊಳ್ಳಲು ನಿರಾಕರಿಸುವ ಅಥವಾ ನಿರ್ಲಕ್ಷಿಸುವ ಮಿತ್ರರಾಷ್ಟ್ರದ ನಿಲುವು ಖಂಡಿತವಾಗಿಯೂ ದ್ವಿಪಕ್ಷೀಯ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಸುಳಿವು ನೀಡಿದರು.

ಇದನ್ನೂ ಓದಿ: ‘ಭಯೋತ್ಪಾದಕ ದೇಶ ನನ್ನನ್ನು ಈ ಪ್ರಶ್ನೆ ಕೇಳುತ್ತಿದೆಯೇ?’; ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!

2025ರ ಏಪ್ರಿಲ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನದ ಒಳಗಿನ ಭಯೋತ್ಪಾದನಾ ಕೇಂದ್ರಗಳು ಮತ್ತು ಸೇನಾ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿತ್ತು. ಇದು ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯಾಗಿ ಬಳಸಿಕೊಳ್ಳುವ ಪಾಕಿಸ್ತಾನದ ಕುತಂತ್ರವನ್ನು ಜಾಗತಿಕವಾಗಿ ಮತ್ತೊಮ್ಮೆ ಬಯಲು ಮಾಡಿತ್ತು.

“ನಾವು ದ್ವಿಪಕ್ಷೀಯ ಬಾಂಧವ್ಯವು ಪಾಸಿಟಿವ್ ದಿಕ್ಕಿನಲ್ಲಿ ಸಾಗಲಿ ಎಂದು ಬಯಸುತ್ತೇವೆ. ಆದರೆ ನಾವು ಎದುರಿಸುತ್ತಿರುವ ನೈಜ ಸವಾಲುಗಳ ಬಗ್ಗೆಯೂ ಎಚ್ಚರದಿಂದಿರಬೇಕು. ಈ ಕೆಲವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಷ್ಟೂ ನಮಗೆ ಉತ್ತಮ ಸಂಬಂಧ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಸಚಿವ ಜೈಶಂಕರ್ ಹೇಳಿದರು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷ ಭಾರತಕ್ಕೆ ತಟ್ಟಲಿಲ್ಲ ಏಕೆ?: ಜಾಣ್ಮೆಯ ತಂತ್ರಗಾರಿಕೆ ಬಿಚ್ಚಿಟ್ಟ ಜೈಶಂಕರ್

ಭಾರತವು ಕೋಟ್ಯಂತರ ಸಣ್ಣ ರೈತರು, ಉತ್ಪಾದಕರು ಮತ್ತು ಕಾರ್ಖಾನೆಗಳನ್ನು ಒಳಗೊಂಡ ದೊಡ್ಡ ಆರ್ಥಿಕ ರಚನೆಯನ್ನು ಹೊಂದಿರುವುದರಿಂದ ವ್ಯಾಪಾರ ಸಂಕೀರ್ಣವಾಗಿದೆ. ಪ್ರಸ್ತುತ ವ್ಯಾಪಾರ ಒಪ್ಪಂದದ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿದ್ದರೂ, ಅಮೆರಿಕದ ಸುಂಕ ನೀತಿಗಳ ಬದಲಾವಣೆಯಿಂದಾಗಿ ಅನಿಶ್ಚಿತತೆ ಮುಂದುವರಿದಿದೆ ಎಂದು ಅವರು ವಿವರಿಸಿದರು.

ಈ ಮೊದಲು ಭಾರತವು ಯಾವುದೇ ಒಂದು ದೇಶದ ಮೇಲೆ ಅವಲಂಬಿತವಾಗಿರದೆ ‘ತಟಸ್ಥ ರಾಜತಾಂತ್ರಿಕತೆ’ ಕಾಯ್ದುಕೊಂಡಾಗ ಅಮೆರಿಕ ಆಕ್ಷೇಪಿಸುತ್ತಿತ್ತು. ಆದರೆ, ಇಂದು ಅಮೆರಿಕವೇ ಚೀನಾ, ರಷ್ಯಾ, ಉಕ್ರೇನ್, ಏಷ್ಯಾ ಮತ್ತು ಯುರೋಪ್ ಜೊತೆ ಮುಕ್ತವಾಗಿ ವ್ಯವಹರಿಸುವ ಮೂಲಕ ಭಾರತದ ಅದೇ ರಾಜತಾಂತ್ರಿಕ ಮಾದರಿಯನ್ನು ಬಹಿರಂಗವಾಗಿ ಅನುಸರಿಸುತ್ತಿದೆ ಎಂದು ಜೈಶಂಕರ್ ವ್ಯಂಗ್ಯವಾಡಿದರು.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು:

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿಕೆಯನ್ನು ಖಂಡಿಸಿದ ಜೈಶಂಕರ್, “ಪಾಕಿಸ್ತಾನವು ಭಯೋತ್ಪಾದನೆಯ ಸರಣಿ ಅಪರಾಧಿ. ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಮತ್ತು ಅದರ ಪರಿಣಾಮಗಳಿಂದ ಮುಕ್ತಿ ಪಡೆಯಲು ಅವರು ನೀಡುವ ತಪ್ಪು ವಾದಗಳನ್ನು ಭಾರತ ಸಹಿಸುವುದಿಲ್ಲ. ಸ್ವಯಂ ರಕ್ಷಣೆಯ ಹಕ್ಕನ್ನು ಭಾರತ ಚಲಾಯಿಸಲಿದೆ” ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:39 pm, Tue, 29 September 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More