ಅಮೆರಿಕಾದ ಗೌರವ ಮತ್ತು ಪ್ರತಿಷ್ಠೆಯನ್ನು ಟ್ರಂಪ್ ಹಾಳುಮಾಡಿದ್ದಾರೆ: ಗುರಿಂದರ್ ಸಿಂಗ್

| Updated By: ಸಾಧು ಶ್ರೀನಾಥ್​

Updated on: Nov 24, 2020 | 1:11 PM

ಅಮೆರಿಕಾದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕಳೆದೊಂದು ವರ್ಷದಲ್ಲಿ ಯಾವ ಮಟ್ಟಿಗೆ ಕುಸಿದಿತ್ತೆಂದರೆ, ರಿಪಬ್ಲಿಕನ್ ಪಕ್ಷದ ಸದಸ್ಯರೇ ಅವರನ್ನು ವಿರೋಧಿಸಲಾರಂಭಿಸಿದ್ದರು. ಗುರಿಂದರ್ ಸಿಂಗ್ ಖಾಲ್ಸಾ ಅವರು ಬಹಳಷ್ಟು ಭಾರತೀಯರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ, ಈ ಅಮೇರಿಕನ್–ಸಿಖ್ ಆ ದೇಶದಲ್ಲಿ ಬಹಳ ಪ್ರಭಾವಶಾಲಿ ಧುರೀಣ ಮತ್ತು ರಿಪಬ್ಲಿಕನ್ ಪಕ್ಷದ ಸಕ್ರಿಯ ಸದಸ್ಯ ಕೂಡ ಹೌದು. ಟ್ರಂಪ್ ಅವರನ್ನು ನೇರವಾಗಿ, ನಿರ್ಭೀತಿಯಿಂದ ಟೀಕಿಸಿದ ಹಲವು ಅಮೆರಿಕನ್ನರಲ್ಲಿ ಗುರಿಂದರ್ ಸಿಂಗ್ ಸಹ ಒಬ್ಬರು. ಕೇವಲ ರಿಪಬ್ಲಿಕನ್ ಪಕ್ಷದ ಸದಸ್ಯತ್ವ ಅಥವಾ […]

ಅಮೆರಿಕಾದ ಗೌರವ ಮತ್ತು ಪ್ರತಿಷ್ಠೆಯನ್ನು ಟ್ರಂಪ್ ಹಾಳುಮಾಡಿದ್ದಾರೆ: ಗುರಿಂದರ್ ಸಿಂಗ್
Follow us on

ಅಮೆರಿಕಾದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕಳೆದೊಂದು ವರ್ಷದಲ್ಲಿ ಯಾವ ಮಟ್ಟಿಗೆ ಕುಸಿದಿತ್ತೆಂದರೆ, ರಿಪಬ್ಲಿಕನ್ ಪಕ್ಷದ ಸದಸ್ಯರೇ ಅವರನ್ನು ವಿರೋಧಿಸಲಾರಂಭಿಸಿದ್ದರು. ಗುರಿಂದರ್ ಸಿಂಗ್ ಖಾಲ್ಸಾ ಅವರು ಬಹಳಷ್ಟು ಭಾರತೀಯರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ, ಈ ಅಮೇರಿಕನ್ಸಿಖ್ ಆ ದೇಶದಲ್ಲಿ ಬಹಳ ಪ್ರಭಾವಶಾಲಿ ಧುರೀಣ ಮತ್ತು ರಿಪಬ್ಲಿಕನ್ ಪಕ್ಷದ ಸಕ್ರಿಯ ಸದಸ್ಯ ಕೂಡ ಹೌದು. ಟ್ರಂಪ್ ಅವರನ್ನು ನೇರವಾಗಿ, ನಿರ್ಭೀತಿಯಿಂದ ಟೀಕಿಸಿದ ಹಲವು ಅಮೆರಿಕನ್ನರಲ್ಲಿ ಗುರಿಂದರ್ ಸಿಂಗ್ ಸಹ ಒಬ್ಬರು.

ಕೇವಲ ರಿಪಬ್ಲಿಕನ್ ಪಕ್ಷದ ಸದಸ್ಯತ್ವ ಅಥವಾ ಟ್ರಂಪ್ ಅವರನ್ನ ಟೀಕಿಸಿರುವುದು ಮಾತ್ರ ಗುರಿಂದರ್ ಅವರ ಪರಿಚಯ ಪತ್ರವಲ್ಲ. 2007ರಲ್ಲಿ, ತಲೆ ಮೇಲೆ ಸಿಖ್ ಸಂಪ್ರದಾಯದಂತೆ ಪಗಡಿ (ರುಮಾಲು) ಧರಿಸದ್ದಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಆ ಅವಮಾನ ಅವರಲ್ಲಿ ಅದೆಷ್ಟು ಛಲ ಮೂಡಿಸಿತ್ತೆಂದರೆ ಮುಂದೆ ಕೆಲವೇ ದಿನನಗಳಲ್ಲಿ ಅವರು 67,000 ಸಾವಿರಕ್ಕಿಂತ ಜಾಸ್ತಿ ಮನವಿ ಪತ್ರಗಳನ್ನು ಸಂಗ್ರಹ ಮಾಡಿ ಅಮೆರಿಕ ಕಾಂಗ್ರೆಸ್ ಸಲ್ಲಿಸಿ, ಸಿಖ್ ಸಮುದಾಯದೆಡೆ ಆ ದೇಶಲ್ಲಿದ್ದ ನೀತಿಯನ್ನು (Transportation Security Administrator’s Policy) ಬದಲಾಯಿಸುವಂತೆ ಮಾಡಿದ್ದರು. ಅವರ ಈ ಸಾಹಸಕ್ಕಾಗಿ ರೋಸಾ ಪಾರ್ಕ್ಸ್ ಟ್ರೇಲ್​ಬ್ಲೇಜರ್ ಪ್ರಶಸ್ತಿಯಿಂದ ಸನ್ಮಾನಿಸಲಾಗಿತ್ತು. ಇಂಥ ಗುರಿಂದರ್, ಟ್ರಂಪ್ ಅವರ ಕಾರ್ಯವೈಖರಿಯನ್ನು ಬಲವಾಗಿ ಟೀಕಿಸಿದ್ದಾರೆ.

‘‘ಅಮೆರಿಕಾದ ಐಕ್ಯತೆ, ಸಮಗ್ರತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಡೊನಾಲ್ಡ್ ಟ್ರಂಪ್ ಹಾಳು ಮಾಡಿದ್ದಾರೆ. ಅದು ಪುನಃ ಮೊದಲಿನಂತಾಗಲು ಬಹಳ ವರ್ಷಗಳು ಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಡೆಮೊಕ್ರ್ಯಾಟ್ ಮತ್ತು ರಿಪಬ್ಲಿಕನ್-ಎರಡೂ ಪಕ್ಷಗಳ ಬೆಂಬಲಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ಸುಕರಾಗಿದ್ದಾರೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಗರಿಷ್ಠ ಪ್ರಮಾಣದ ಮತದಾನವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ,’’ ಎಂದು ಗುರಿಂದರ್ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾವು ಅಮೆರಿಕಾದಲ್ಲಿ ನೆಲೆಸಲಾರಂಭಿಸಿದ ಮೇಲೆ ಗಮನಿಸಿರುವಂತೆ ದೇಶದ ಜನರ ಧೃವೀಕರಣ ಮತ್ತು ಇಬ್ಭಾಗಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿದೆಯೆಂದು ಗುರಿಂದರ್ ಹೇಳಿದ್ದಾರೆ.

‘‘ಕಳೆದ 25 ವರ್ಷಗಳಲ್ಲಿ ಅಮೇರಿಕನ್ನರ ಧೃವೀಕರಣ ಮತ್ತು ವಿಭಜನೆಯಾಗುತ್ತಿರುವುದನ್ನು ನಾನು ಕಂಡಿದ್ದೇನೆ. ಕೊವಿಡ್-19 ಮಾಹಾಮಾರಿಯು ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಈ ಶಕೆಯಲ್ಲಿ ನಮ್ಮನ್ನು ಯಾರು ಪ್ರತಿನಿಧಿಸುತ್ತಾರೆನ್ನುವುದರ ಬಗ್ಗೆ ಜನ ಹೆಚ್ಚು ಚಿಂತಿತರಾಗಿದ್ದಾರೆ,’’ ಎಂದು ಗುರಿಂದರ್ ಹೇಳಿದ್ದಾರೆ.

ಖುದ್ದು ಗುರಿಂದರ್ ಅವರೇ ಅಂಗೀಕರಿಸಿರುವಂತೆ, 2016 ಮತ್ತು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಆದಾಗ್ಯೂ ಪಕ್ಷದ ಅಭ್ಯರ್ಥಿ ಪರ (ಟ್ರಂಪ್) ಮತ ಚಲಾಯಿಸಲ್ಲವಂತೆ.

‘‘ಇವತ್ತಿನ ಮುಕ್ತ ಜಾಗತಿಕ ವ್ಯವಸ್ಥೆಯಲ್ಲಿ, ನೈತಿಕವಾಗಿ ಮತ್ತು ನ್ಯಾಯೋಚಿತವಾಗಿ ಟ್ರಂಪ್ ದೇಶದ ಅಧ್ಯಕ್ಷನಾಗಲು ನಾಲಾಯಕ್ ಅಗಿರುವ ವ್ಯಕ್ತಿ. ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಸಲ್ಲುವ ಗೌರವ ಮತ್ತು ಆದರಗಳಿಂದ ಪ್ರಭಾವಿತನಾಗಿ ನಾನು ಸ್ವಇಚ್ಛೆಯಿಂದ ಅಮೆರಿಕನ್ ಪ್ರಜೆಯಾಗಿರುವೆ. ಆದರೆ ಮಾನವೀಯ ಮೌಲ್ಯಗಳು ಅಪಾಯದಲ್ಲಿರುವುದು ಮೊದಲ ಬಾರಿಗೆ ನನಗೆ ಭಾಸವಾಗುತ್ತಿದೆ. ಹಾಗಂತ ಪಕ್ಷದೆಡೆಗಿನ ನನ್ನ ನಿಷ್ಠೆಯಲ್ಲಿ ಯಾವುದೇ ರಾಜಿಯಿಲ್ಲ, ನಾನ್ಯಾವತ್ತೂ ಪಕ್ಷವನ್ನು ತ್ಯಜಿಸಲಾರೆ,’’ ಎಂದು ಗುರಿಂದರ್ ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಜನಾಂಗೀಯ ಸಮುದಾಯಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಗುರಿಂದರ್ ಹೇಳುತ್ತಾರೆ.

‘‘ಕಮಲಾ ಒಬ್ಬ ಪ್ರಭಾವಶಾಲಿ ಮಹಿಳೆ. ಆಕೆ ಆಯ್ಕೆಯಾಗಿರುವುದು, ಜನಾಂಗೀಯ ಸಮುದಾಯಗಳಲ್ಲಿ ಮತ್ತು ವಲಸಿಗರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಅವರಿಂದಾಗಿ ಇಂಡೊಅಮೆರಿಕನ್ ಸಂಬಂಧಗಳು ಉತ್ತಮಗೊಳ್ಳಲಿವೆ. ಮತ್ತೊಂದು ವಿಷಯವನ್ನು ನಾನು ಹೇಳಬಯಸುತ್ತೇನೆ, ಇಂಡೊಅಮೆರಿಕನ್ ಸಮುದಾಯ ಈಗ ಹೆಚ್ಚು ಸಕ್ರಿಯಗೊಳ್ಳುವ ಅವಶ್ಯಕತೆಯಿದೆ,’’ ಎಂದು ಗುರಿಂದರ್ ಹೇಳಿದ್ದಾರೆ.

Published On - 3:59 pm, Fri, 20 November 20