ಹೇಡಿತನದ ಕೃತ್ಯ; ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೋ ಕೊಲೆ ಪ್ರಯತ್ನಕ್ಕೆ ಪಿಎಂ ನರೇಂದ್ರ ಮೋದಿ ಖಂಡನೆ

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೋ ಅವರ ಹತ್ಯೆ ಯತ್ನವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಇದೊಂದು ಹೇಡಿತನದ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಬುಧವಾರ ಸ್ಲೋವಾಕ್ ಪಿಎಂ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಹೇಡಿತನದ ಕೃತ್ಯ; ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೋ ಕೊಲೆ ಪ್ರಯತ್ನಕ್ಕೆ ಪಿಎಂ ನರೇಂದ್ರ ಮೋದಿ ಖಂಡನೆ
ಸ್ಲೊವೊಕಿಯಾ ಪ್ರಧಾನಿ ಮೇಲೆ ಗುಂಡು ಹಾರಿಸಿದವನನ್ನು ಹಿಡಿದಿರುವ ಪೊಲೀಸರು

Updated on: May 16, 2024 | 12:24 PM

ನವದೆಹಲಿ: “ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ (Robert Fico) ಅವರ ಮೇಲೆ ನಡೆದ ಗುಂಡಿನ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಾನು ಈ ಹೇಡಿತನದ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಬರ್ಟ್ ಫಿಕೋ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಭಾರತವು ಸ್ಲೋವಾಕ್ ಗಣರಾಜ್ಯದ ಜನರೊಂದಿಗೆ ಸದಾ ಇರಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಟ್ವೀಟ್ ಮಾಡಿದ್ದಾರೆ.

ಸ್ಲೋವಾಕಿಯಾದಲ್ಲಿ 4 ಬಾರಿ ಪ್ರಧಾನ ಮಂತ್ರಿಯಾಗಿದ್ದ ರಾಬರ್ಟ್ ಫಿಕೊ ಅವರ ಮೇಲೆ ಬುಧವಾರ ಹ್ಯಾಂಡ್ಲೋವಾದಲ್ಲಿ ಗುಂಡು ಹಾರಿಸಿದ ನಂತರ ತೀವ್ರವಾಗಿ ಗಾಯಗೊಂಡಿದ್ದರು. 59 ವರ್ಷದ ರಾಬರ್ಟ್ ಫಿಕೋ ಅವರ ಹೊಟ್ಟೆಗೆ ತೀವ್ರವಾದ ಗಾಯವಾಗಿದ್ದು, ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆ ಸ್ಥಳದಲ್ಲಿದ್ದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ

ನಿನ್ನೆ ಕ್ಯಾಬಿನೆಟ್ ಸಭೆ ಬಳಿಕ ಕಾರು ಹತ್ತಲು ಹೊರಗೆ ಬಂದ ರಾಬರ್ಟ್ ಫಿಕೊ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅವರ ಮೇಲೆ ಅನೇಕ ಬಾರಿ ಗುಂಡು ಹಾರಿಸಲಾಯಿತು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು. ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಯುರೋಪ್ ಬೆಚ್ಚಿಬಿದ್ದಿದೆ.

ಈ ಘಟನೆಯು ಹ್ಯಾಂಡ್ಲೋವಾ ಪಟ್ಟಣದ ಸಾಂಸ್ಕೃತಿಕ ಕೇಂದ್ರದ ಹೊರಗೆ ನಡೆದಿದ್ದು, 5 ಬಾರಿ ಗುಂಡು ಹಾರಿಸಿದ ಕೂಡಲೆ ಪ್ರಧಾನಿ ರಾಬರ್ಟ್ ಫಿಕೋ ನೆಲದ ಮೇಲೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೂಡಲೆ ಅವರನ್ನು ಅಂಗರಕ್ಷಕರು ಕಾರಿನಲ್ಲಿ ಕೂರಿಸಿಕೊಂಡು ಹೋದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ