
ಲಂಡನ್, ನವೆಂಬರ್ 15: 70ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರಿಗೆ ಆನ್‌ಲೈನ್‌ನಲ್ಲಿ ಮೋಡಿ ಮಾಡಿ, ನಂಬಿಸಿ, ಅವರ ಖಾಸಗಿ ಹಾಗೂ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಬ್ಲ್ಯಾಕ್‌ಮೇಲ್ ಮಾಡಿದ ಗಂಭೀರ ಅಪರಾಧಕ್ಕಾಗಿ ಬ್ರಿಟನ್‌ನಲ್ಲಿದ್ದ ಭಾರತೀಯ ಪ್ರಜೆ ಬಿಲಾಲ್ ಕಾಜಿ ಎಂಬಾತನಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಆನ್‌ಲೈನ್ ಶೋಷಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬ್ರಿಟನ್ ನ್ಯಾಯಾಲಯವು, ಅಪರಾಧಿಗೆ 30 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಅಲ್ಲದೆ, ಆತನ ಹೆಸರನ್ನು ಶಾಶ್ವತವಾಗಿ ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಲು ಆದೇಶಿಸಿದೆ.
ಬಿಲಾಲ್ ಕಾಜಿ ಯಾರು?
ಮೂಲತಃ ಮುಂಬೈನವನಾದ 27 ವರ್ಷದ ಬಿಲಾಲ್ ಕಾಜಿ, ಬ್ರಿಟನ್‌ನ ಚೆಸ್ಟರ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಬಳಿಕ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಿ ಅಲ್ಲಿ ರಸಾಯನಶಾಸ್ತ್ರ ಅಧ್ಯಯನ ಮಾಡುತ್ತಿದ್ದನು. 2021ರ ಆಗಸ್ಟ್‌ನಿಂದ 2025ರ ಆಗಸ್ಟ್ ಅವಧಿಯಲ್ಲಿ ಬ್ರಿಟನ್‌ನಾದ್ಯಂತ 70ಕ್ಕೂ ಹೆಚ್ಚು ಬಾಲಕಿಯರನ್ನು ಕಾಜಿ ಆನ್‌ಲೈನ್‌ನಲ್ಲಿ ಶೋಷಿಸಿದ್ದಾನೆ. ಸ್ನ್ಯಾಪ್‌ಚಾಟ್, ರೋಬ್ಲಾಕ್ಸ್, ವಿಂಕ್ ಮತ್ತು ವಿಜ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಅಪ್ರಾಪ್ತ ಬಾಲಕನ ಫೋಟೋಗಳನ್ನು ಬಳಸಿಕೊಂಡು, ತಾನು ‘ರೀಸ್’ ಎಂಬ ಬ್ರಿಟಿಷ್ ಹುಡುಗನೆಂದು ನಂಬಿಸಿದ್ದ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಯುವಕ ಸೇರಿ ಆತನ ಕುಟುಂಬಸ್ಥರ ವಿರುದ್ಧ ಯುವತಿ ದೂರು
10ರಿಂದ 17 ವರ್ಷದೊಳಗಿನ ಬಾಲಕಿಯರೊಂದಿಗೆ ಪ್ರೇಮ ಸಂಬಂಧ ಬೆಳೆಸುತ್ತಿದ್ದ ಕಾಜಿ, ಅವರ ವಿಶ್ವಾಸ ಗಳಿಸಿದ ನಂತರ ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಪ್ರೇರೇಪಿಸುತ್ತಿದ್ದನು. ಬಾಲಕಿಯರು ನಿರಾಕರಿಸಿದರೆ ಅಥವಾ ಹಿಂಜರಿದರೆ, ಅವರ ಖಾಸಗಿ ಫೋಟೋಗಳನ್ನು ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತೆಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ, ನೇರವಾಗಿ ಅವರ ಸ್ನೇಹಿತರಿಗೇ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದನು.
ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಇದನ್ನೂ ಓದಿ: ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು
2021ರ ನವೆಂಬರ್‌ನಲ್ಲಿ ಸಂತ್ರಸ್ತ ಬಾಲಕಿಯೊಬ್ಬಳು ಡರ್ಬಿಶೈರ್ ಪೊಲೀಸರಿಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತು. ತನ್ನ ಸ್ನ್ಯಾಪ್‌ಚಾಟ್ ಖಾತೆ ಹ್ಯಾಕ್ ಆಗಿದ್ದು, ಬಿಲಾಲ್ ಕಾಜಿಯೊಂದಿಗೆ ಹಂಚಿಕೊಂಡಿದ್ದ ವಿಷಯಗಳನ್ನು ತನ್ನ ಸ್ನೇಹಿತರಿಗೆ ಕಳುಹಿಸಲಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಬ್ರಿಟನ್‌ನ 45 ಪೊಲೀಸ್ ಪಡೆಗಳ ಪೈಕಿ 28 ಪೊಲೀಸ್ ಪಡೆಗಳು ಜಂಟಿಯಾಗಿ ನಡೆಸಿದ ತನಿಖೆಯ ನಂತರ ಕಾಜಿಯನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಒಟ್ಟು 180ಕ್ಕೂ ಹೆಚ್ಚು ಬಾಲಕಿಯರು ಬಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೇಶ ತೊರೆದು ಪರಾರಿಯಾಗಿದ್ದ ಬಿಲಾಲ್ ಕಾಜಿ, 2023ರ ಜುಲೈನಲ್ಲಿ ಬ್ರಿಟನ್‌ಗೆ ಮರಳುತ್ತಿದ್ದಾಗ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟನು. ಪೆರೋಲ್‌ಗೆ ಅರ್ಹನಾಗುವ ಮುನ್ನ ಆತ ಕನಿಷ್ಠ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲೇಬೇಕಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ