ಜಪಾನ್‌ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ: ಭಾರತದ ಪ್ಯಾರಾ ಈಜುಗಾರನಿಗೆ ಜೀವಮಾನ ನಿಷೇಧ ಸಾಧ್ಯತೆ!
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್ ವಿರುದ್ಧ ದೈಹಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಜಪಾನ್‌ನಲ್ಲಿ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅವರನ್ನು ಬಂಧಿಸಿ, ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI) ಶೇಖ್ ವಿರುದ್ಧ ಜೀವಮಾನ ನಿಷೇಧ ಹೇರಲು ಚಿಂತಿಸುತ್ತಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹಲವು ಭಾರತೀಯ ಕ್ರೀಡಾಪಟುಗಳು ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಭಾರತದ ಪ್ಯಾರಾ ಈಜುಗಾರ ಮೊಹಮ್ಮದ್ ಶಮ್ಸ್ ಆಲಂ ಶೇಖ್ ವಿರುದ್ಧ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಒಂದು ಕಾಲದಲ್ಲಿ ತಮ್ಮ ಸ್ಪರ್ಧೆಯಲ್ಲಿ ವಿಶ್ವದ ನಂಬರ್ 1 ಸ್ಥಾನದಲ್ಲಿದ್ದ 40 ವರ್ಷದ ಶಮ್ಸ್ ಆಲಂ ಅವರನ್ನು ಘಟನೆ ನಡೆದ ಮರುದಿನ ಜಪಾನ್‌ನಿಂದ ಭಾರತಕ್ಕೆ ವಾಪಸ್ ಕಳುಹಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI) ಶಮ್ಸ್ ಆಲಂ ಅವರ ಮೇಲೆ ಜೀವಮಾನ ನಿಷೇಧ ಹೇರಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಸಲಿಗೆ ನಡೆದಿದ್ದೇನು?
ಇಂಡಿಯಾ ಟುಡೇ ವರದಿಯ ಪ್ರಕಾರ, ಅಕ್ಟೋಬರ್ 19ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಭಾರತೀಯ ಪ್ಯಾರಾ ಈಜು ತಂಡ ಉಳಿದುಕೊಂಡಿದ್ದ ನಗೋಯಾದ ಹೋಟೆಲ್‌ನಲ್ಲಿ ಶೇಖ್ ಅವರ ಕೊಠಡಿಯನ್ನು ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದಾಗ, ಅವರ ಮೇಲೆ ಅನುಚಿತವಾಗಿ ವರ್ತಿಸಿದ ಆರೋಪ ಶೇಖ್ ವಿರುದ್ಧ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ಈ ಬಗ್ಗೆ ಸ್ಥಳೀಯ ಸಂಘಟನಾ ಸಮಿತಿಗೆ ದೂರು ನೀಡಿದ್ದಾರೆ. ಆ ದೂರನ್ನು ಭಾರತೀಯ ತಂಡದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಬಂಧನ, ಗಡೀಪಾರು, ನಿಷೇಧ ಸಾಧ್ಯತೆ
ಮಹಿಳೆ ದೂರು ನೀಡಿದ ಬಳಿಕ ಜಪಾನ್ ಪೊಲೀಸರು ಶೇಖ್ ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ನಂತರ ಅಕ್ಟೋಬರ್ 20ರಂದು ಅವರನ್ನು ಜಪಾನ್‌ನಿಂದ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಈ ಘಟನೆಯನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI) ಕೂಡ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಶೇಖ್ ವಿರುದ್ಧ ಜೀವಮಾನ ನಿಷೇಧ ಸೇರಿದಂತೆ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸಮಿತಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕ್ರೀಡಾಕೂಟ ಮುಗಿದ ಬಳಿಕ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್ ಆರ್ಚರಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಕೈಗಳಿಲ್ಲದ ಶೀತಲ್ ದೇವಿ..!
ಯಾರು ಈ ಮೊಹಮ್ಮದ್ ಶಮ್ಸ್ ಆಲಂ ಶೇಖ್?
ಮೊಹಮ್ಮದ್ ಶಮ್ಸ್ ಆಲಂ ಶೇಖ್ ಬಿಹಾರ ಮೂಲದ 40 ವರ್ಷದ ಪ್ಯಾರಾ ಈಜುಗಾರ. ಇವರು ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 200 ಮೀಟರ್ ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇನ್ನು ಕಳೆದ ವರ್ಷ ರೇಕ್ಯಾವಿಕ್ ಇಂಟರ್‌ನ್ಯಾಷನಲ್ ಗೇಮ್ಸ್‌ನಲ್ಲಿ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, ಭಾರತೀಯ ಮತ್ತು ಏಷ್ಯನ್ ದಾಖಲೆಗಳನ್ನು ನಿರ್ಮಿಸಿದ್ದರು.
ಈ ಬಾರಿ ಅವರು ಮೂರನೇ ಬಾರಿಗೆ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಲು ಜಪಾನ್‌ಗೆ ತೆರಳಿದ್ದರು. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲೇ ಈ ವಿವಾದ ಎದುರಾಗಿದ್ದು, ಅವರನ್ನು ಕ್ರೀಡಾಕೂಟದಿಂದ ವಾಪಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
