ಕೊನೆ ಕ್ಷಣದಲ್ಲಿ ಅಮೆರಿಕ ಜತೆಗಿನ ಒಪ್ಪಂದದಿಂದ ಹಿಂದೆ ಸರಿದ ಇರಾನ್
ಅಮೆರಿಕದೊಂದಿಗಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕಿದ್ದ ಕೊನೆ ಕ್ಷಣದಲ್ಲಿ ಇರಾನ್ ಹಿಂದೆ ಸರಿದಿದೆ. ಖಮೇನಿ ಸಾವಿನ ನಂತರ ತೀವ್ರಗಾಮಿಗಳ ಒತ್ತಡ ಮತ್ತು ಸಾರ್ವಜನಿಕ ಆಕ್ರೋಶದ ಭೀತಿಯೇ ಇದಕ್ಕೆ ಮುಖ್ಯ ಕಾರಣ. ಸಾರ್ವಜನಿಕ ಸಮಾರಂಭ ರದ್ದಾದರೂ, ಅಮೆರಿಕ, ಇರಾನ್ ಹಾಗೂ ಇತರ ದೇಶಗಳ ತಾಂತ್ರಿಕ ತಂಡಗಳು ಮುಂದಿನ 60 ದಿನಗಳ ಕಾಲ ರಹಸ್ಯ ಮಾತುಕತೆಗಳನ್ನು ಮುಂದುವರಿಸಲು ಜ್ಯೂರಿಚ್‌ನಲ್ಲಿ ಉಳಿದಿವೆ. ಈ ನಿರ್ಧಾರ ಮಧ್ಯಪ್ರಾಚ್ಯದಲ್ಲಿ ಹೊಸ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.

ಟೆಹ್ರಾನ್, ಜೂನ್ 19: ಇನ್ನೇನು ಅಮೆರಿಕ-ಇರಾನ್(Iran) ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಅನ್ನುವಷ್ಟರಲ್ಲಿ ಸಂಧಾನವೇ ಮುರಿದು ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು (ಜೂನ್ 19, 2026) ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆಕ್ಷಣದಲ್ಲಿ ಹಿಂದೆ ಸರಿದಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ ತೀವ್ರ ಜನಾಕ್ರೋಶ ವ್ಯಕ್ತವಾಗಬಹುದು ಎಂದು ತೀವ್ರಗಾಮಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಇರಾನ್ ಈ ನಿರ್ಧಾರ ಕೈಗೊಂಡಿದೆ. ಇತ್ತ ಶ್ವೇತಭವನ ಕೂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದೆ.
ಇರಾನ್ ಹಿಂದೆ ಸರಿಯಲು ಅಸಲಿ ಕಾರಣಗಳೇನು? ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಅಮೆರಿಕದ ಅಧಿಕಾರಿಗಳೊಂದಿಗೆ ಹಸ್ತಲಾಘವ ಮಾಡುವ ಅಥವಾ ಟಿವಿ ಕ್ಯಾಮೆರಾಗಳ ಮುಂದೆ ನಗುತ್ತಾ ನಿಲ್ಲುವ ಚಿತ್ರಗಳು ಹೊರಬಂದರೆ, ಅದು ಸಂಘರ್ಷದಲ್ಲಿ ಮಡಿದವರಿಗೆ ಮಾಡುವ ದ್ರೋಹ ಎಂದು ಇರಾನ್‌ನ ಜನ ಭಾವಿಸುತ್ತಾರೆ ಎಂದು ತೀವ್ರಗಾಮಿ ಬಣಗಳು ಎಚ್ಚರಿಸಿದ್ದವು. ಇರಾನಿಯನ್ನರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು ಸಾರ್ವಜನಿಕ ಸ್ನೇಹದ ಪ್ರದರ್ಶನವನ್ನಲ್ಲ ಎಂದು ಮೂಲಗಳು ತಿಳಿಸಿವೆ.
ಇರಾನ್ ಒಪ್ಪಂದದಿಂದ ಹಿಂದೆ ಸರಿಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿ ರಾತ್ರಿಯಿಡೀ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಹೆಜ್ಬೊಲ್ಲಾ ವರದಿ ಮಾಡಿದೆ.
ಮತ್ತಷ್ಟು ಓದಿ: ವಾಸ್ತವವನ್ನು ಅರ್ಥಮಾಡಿಕೊಳ್ಳಿ: ಇರಾನ್ ಒಪ್ಪಂದ ಟೀಕಿಸಿದ ಇಸ್ರೇಲ್ಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಎಚ್ಚರಿಕೆ
ಸಾರ್ವಜನಿಕ ಸಮಾರಂಭ ರದ್ದಾಗಿದ್ದರೂ ಒಪ್ಪಂದ ಸಂಪೂರ್ಣ ಮುರಿದುಬಿದ್ದಿಲ್ಲ. ಇನ್ನು ಯಾವುದೇ ಉನ್ನತ ನಾಯಕರು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣಿಸುವುದಿಲ್ಲ. ಬದಲಿಗೆ ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ತಾಂತ್ರಿಕ ತಂಡಗಳು ಜ್ಯೂರಿಚ್‌ನಲ್ಲಿ ಬೀಡುಬಿಟ್ಟಿದ್ದು, ಮುಂದಿನ 60 ದಿನಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದದ ವಿವರಗಳನ್ನು ಸಿದ್ಧಪಡಿಸಲಿವೆ.
ಇರಾನ್‌ನ ಬಳಿ ಇನ್ನೂ ನೂರಾರು ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಇರುವುದರಿಂದ ಈ ಒಪ್ಪಂದ ಎಷ್ಟು ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಅಮೆರಿಕವು ಇರಾನ್ ಮೇಲಿನ ಕರಾವಳಿ ನೌಕಾ ದಿಗ್ಬಂಧನವನ್ನು ತೆಗೆದುಹಾಕುವ ಮೂಲಕ ಒಪ್ಪಂದದ ಮೊದಲ ಹೆಜ್ಜೆಯನ್ನು ಇಟ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




