Covid-19 Vaccine: ಕೊರೊನಾ ಲಸಿಕೆ ತೆಗೆದುಕೊಂಡವರು ಸಲಿಂಗಕಾಮಿಗಳಾಗ್ತಾರೆ: ಇರಾನ್ ಧರ್ಮಗುರು

|

Updated on: Feb 10, 2021 | 3:41 PM

Corona Vaccine: 2 ಲಕ್ಷಕ್ಕೂ ಅಧಿಕ ಹಿಂಬಾಲಕರಿರುವ ಟೆಲಿಗ್ರಾಂ ಗುಂಪಿನಲ್ಲಿ, ಕೊರೊನಾ ಲಸಿಕೆ ಪಡೆದವರ ಹತ್ತಿರಕ್ಕೆ ಯಾರೂ ಹೋಗಬೇಡಿ. ಅವರು ಸಲಿಂಗಿಗಳಾಗಿ ಪರಿವರ್ತನೆ ಹೊಂದಿರುತ್ತಾರೆ ಎಂದು ಧರ್ಮಗುರು ಹೇಳಿಕೆ ನೀಡಿದ್ದಾರೆ.

Covid-19 Vaccine: ಕೊರೊನಾ ಲಸಿಕೆ ತೆಗೆದುಕೊಂಡವರು ಸಲಿಂಗಕಾಮಿಗಳಾಗ್ತಾರೆ: ಇರಾನ್ ಧರ್ಮಗುರು
ಇರಾನಿನ ಧರ್ಮಗುರು ಅಯಾತೊಲ್ಲಾ ಅಬ್ಬಾಸ್ ತಬ್ರೀಜಿಯನ್
Follow us on

ಕೊರೊನಾ ಲಸಿಕೆಯ (Corona Vaccine) ಬಗ್ಗೆ ಒಂದೊಂದು ದೇಶಗಳಲ್ಲಿ ಒಂದೊಂದು ತೆರನಾದ ಊಹಾಪೋಹಗಳಿವೆ. ಲಸಿಕೆಯನ್ನು ವೈಜ್ಞಾನಿಕವಾಗಿ ತಯಾರಿಸಿದ್ದರೂ ಅದಕ್ಕೆ ಹತ್ತಾರು ರೀತಿಯ ಧಾರ್ಮಿಕ ಕಾರಣಗಳು ಅಂಟಿಕೊಂಡು ಅವಾಂತರ ಸೃಷ್ಟಿಸಿವೆ. ಇದೇ ಕಾರಣಕ್ಕಾಗಿ ಎಷ್ಟೋ ಕಡೆಗಳಲ್ಲಿ ಜನರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ ಉದಾಹರಣೆಗಳೂ ಇವೆ. ಇದೀಗ ಇರಾನಿನ ಧರ್ಮಗುರು ಅಯಾತೊಲ್ಲಾ ಅಬ್ಬಾಸ್ ತಬ್ರೀಜಿಯನ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಕೊರೊನಾ ಲಸಿಕೆ ಪಡೆದವರು ಸಲಿಂಗಿಗಳಾಗುತ್ತಾರೆ (Homosexual) ಎನ್ನುವ ಮೂಲಕ ಲಸಿಕೆ ಬಗ್ಗೆ ಅಪಪ್ರಚಾರ ಎಬ್ಬಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮೂಲಕ ಇಂತಹ ತಪ್ಪು ಸಂದೇಶವನ್ನು ಹರಿಬಿಟ್ಟಿರುವ ಧರ್ಮಗುರುವಿನ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. 2 ಲಕ್ಷಕ್ಕೂ ಅಧಿಕ ಹಿಂಬಾಲಕರಿರುವ ಗುಂಪಿನಲ್ಲಿ, ಕೊರೊನಾ ಲಸಿಕೆ ಪಡೆದವರ ಹತ್ತಿರಕ್ಕೆ ಯಾರೂ ಹೋಗಬೇಡಿ. ಅವರು ಸಲಿಂಗಿಗಳಾಗಿ ಪರಿವರ್ತನೆ ಹೊಂದಿರುತ್ತಾರೆ ಎಂದು ಬರೆದಿರುವ ಅಯಾತೊಲ್ಲಾ ಅಬ್ಬಾಸ್ ತಬ್ರೀಜಿಯನ್ ಈ ಹಿಂದೆಯೂ ಅನೇಕ ಸುಳ್ಳುಸುದ್ದಿ ಮತ್ತು ವಿವಾದಾತ್ಮಕ ವಿಚಾರಗಳನ್ನು ಹರಿಬಿಟ್ಟು ಜನರ ದಾರಿ ತಪ್ಪಿಸಿದ ಅಪಕೀರ್ತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ವಿವಾದಿತ ಗಾಯಕಿ ರಿಹಾನ್ನಾ ಮಾತೃದೇಶಕ್ಕೆ ಭಾರತದ ಕೊರೊನಾ ಲಸಿಕೆ ಸರಬರಾಜಾಯ್ತು!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಪ್ರಮುಖ ರಾಜಕೀಯ ಮುಖಂಡರು ಹೀಗೆ ಸುಳ್ಳುಸುದ್ದಿ ಹರಿಬಿಡುವ ಧರ್ಮಗುರುವಿನ ವಿರುದ್ಧ ಕಿಡಿಕಾರಿದ್ದಾರೆ. ಇರಾನಿನ ಕೆಲ ಧರ್ಮಗುರುಗಳಿಗೆ ಸಾಮಾನ್ಯ ಜ್ಞಾನದ ಕೊರತೆ ಇದೆ. ಅವರು ತಮ್ಮ ಮೂಗಿನ ನೇರಕ್ಕೆ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿತಪ್ಪಿಸಿ ಭಯಗೊಳಿಸುತ್ತಿದ್ದಾರೆ. ಅಲ್ಲದೇ, ಕೊರೊನಾ ಲಸಿಕೆ ಪಡೆಯಬೇಡಿ ಎನ್ನುವ ಮೂಲಕ ಜನಸಾಮಾನ್ಯರ ಜೀವವನ್ನು ಅಪಾಯಕ್ಕೆ ನೂಕುತ್ತಿದ್ದಾರೆ. ಜನರು ಇಂಥವರ ಮಾತುಗಳನ್ನು ಕೇಳಬಾರದು ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ವಿವಿಧ ಧರ್ಮದ ಮುಖಂಡರು ಕೊರೊನಾ ಲಸಿಕೆಗೆ ಹಂದಿ ಕೊಬ್ಬು ಸೇರಿಸಲಾಗಿದೆ, ದನದ ರಕ್ತ ಬೆರೆಸಲಾಗಿದೆ ಎಂದು ಹೇಳುವ ಮೂಲಕ ಜನರ ಧಾರ್ಮಿಕ ಭಾವನೆ ಕದಡುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಈ ರೀತಿಯ ಮೌಢ್ಯ ಯಾವುದೇ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಮುಂದುವರಿದ ದೇಶಗಳಲ್ಲೂ ಇದೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ.

Published On - 8:18 pm, Tue, 9 February 21