ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಆಯಿಲ್ ಟ್ಯಾಂಕರ್‌ಗೆ ಇರಾನ್ ನೌಕಾಪಡೆ ಎಚ್ಚರಿಕೆ: ಹಿಂದಿರುಗಿದ ಹಾನಾ ಹಡಗು

ಇರಾನ್ ನೌಕಾಪಡೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ತೈಲ ಟ್ಯಾಂಕರ್ 'ಹಾನಾ'ಗೆ ತಡೆ ಒಡ್ಡಿ ಎಚ್ಚರಿಕೆ ನೀಡಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ ಈ ಘಟನೆ ಜಾಗತಿಕ ತೈಲ ಪೂರೈಕೆ, ವಿಶೇಷವಾಗಿ ಭಾರತದ ಇಂಧನ ಆಮದಿಗೆ ಸಂಕಷ್ಟ ತಂದೊಡ್ಡಿದೆ. ಇರಾನ್‌ನ ಕಠಿಣ ಷರತ್ತುಗಳು ಮತ್ತು ಯುಎಸ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಲಸಂಧಿಯ ಮುಕ್ತ ಸಂಚಾರ ಅನಿಶ್ಚಿತವಾಗಿದೆ, ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಆಯಿಲ್ ಟ್ಯಾಂಕರ್‌ಗೆ ಇರಾನ್ ನೌಕಾಪಡೆ ಎಚ್ಚರಿಕೆ: ಹಿಂದಿರುಗಿದ ಹಾನಾ ಹಡಗು
ಹಾರ್ಮುಜ್

Updated on: Aug 27, 2026 | 9:56 AM

ಟೆಹ್ರಾನ್, ಆಗಸ್ಟ್​ 27: ಜಾಗತಿಕ ಇಂಧನ ಸಾಗಣೆಯ ಪ್ರಮುಖ ನರನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ( ದಕ್ಷಿಣ ಮಾರ್ಗದಲ್ಲಿ ಹಾದುಹೋಗಲು ಯತ್ನಿಸುತ್ತಿದ್ದ ‘ಹಾನಾ’ (HAANA) ಹೆಸರಿನ ಭಾರತೀಯ ತೈಲ ಟ್ಯಾಂಕರ್‌ಗೆ ಇರಾನ್‌(Iran)ನ ನೌಕಾಪಡೆಯು ತಡೆ ಒಡ್ಡಿ ಎಚ್ಚರಿಕೆ ನೀಡಿದೆ. ಇರಾನ್‌ನ ಎಚ್ಚರಿಕೆಯ ಬೆನ್ನಲ್ಲೇ ಭಾರತೀಯ ಹಡಗು ಮಾರ್ಗ ಬದಲಿಸಿ ಹಿಂದೆ ಸರಿದಿದೆ ಎಂದು ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ಫಾರ್ಸ್’ ವರದಿ ಮಾಡಿದೆ.

ಪಶ್ಚಿಮ ಏಷ್ಯಾದ ಯುದ್ಧದ ನಡುವೆ ಹಾರ್ಮುಜ್ ಜಲಮಾರ್ಗದಲ್ಲಿ ವಾಣಿಜ್ಯ ನೌಕೆಗಳ ಸಂಚಾರವನ್ನು ಪುನರಾರಂಭಿಸಲು ಇರಾನ್ ಮತ್ತು ಒಮಾನ್ ನಡುವೆ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗಲೇ ಈ ಬಿಕ್ಕಟ್ಟು ಎದುರಾಗಿದೆ.

ದಕ್ಷಿಣ ಕಾರಿಡಾರ್‌ನಲ್ಲಿ ಅಡಚಣೆ: ಓಮನ್ ಕಾರಿಡಾರ್ ಎಂದು ಕರೆಯಲ್ಪಡುವ ದಕ್ಷಿಣ ಮಾರ್ಗದ ಮೂಲಕ ಸಾಗಲು ಯತ್ನಿಸಿದ ಭಾರತೀಯ ಹಡಗನ್ನು ತಡೆದ ಇರಾನ್ ಪಡೆಗಳು, ಕಳೆದ ೨೪ ಗಂಟೆಗಳಲ್ಲಿ ಈ ಮಾರ್ಗದಲ್ಲಿ ಯಾವುದೇ ಸಂಚಾರಕ್ಕೆ ಅವಕಾಶ ನೀಡಿಲ್ಲ.

ತೀರಾ ಕುಸಿದ ಹಡಗು ಸಂಚಾರ: ಕೆಪ್ಲರ್ (Kpler) ಸಂಸ್ಥೆಯ ಸಾಗಣೆ ದತ್ತಾಂಶದ ಪ್ರಕಾರ, ಸಾಮಾನ್ಯ ದಿನಗಳಲ್ಲಿ ಸರಾಸರಿ 15 ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ ಮಂಗಳವಾರ ಕೇವಲ 5 ಹಡಗುಗಳು ಮಾತ್ರ ಅತಿ ಹೆಚ್ಚಿನ ಅಪಾಯದ ನಡುವೆ ಸಾಗಿವೆ.

ತಾತ್ಕಾಲಿಕ ಕಾರಿಡಾರ್ ಪ್ರಸ್ತಾವನೆ: ಸುರಕ್ಷಿತ ಕಡಲ ಸಂಚಾರಕ್ಕಾಗಿ ತಾತ್ಕಾಲಿಕ ಜಂಟಿ ಹಡಗು ಕಾರಿಡಾರ್ ರಚನೆ ಹಾಗೂ ಸಮುದ್ರದಲ್ಲಿ ಹೂತಿರುವ ಮೈನ್‌ಗಳನ್ನು (Mines) ತೆರವುಗೊಳಿಸಲು ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್ಬುಸೈದಿ ಇರಾನ್ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ:ನಮ್ಮ ಹಾಗೂ ಇರಾನ್ ವ್ಯಾಪಾರದಲ್ಲಿ ಅಮೆರಿಕ ಮೂಗು ತೂರಿಸಬೇಡಿ: ಟ್ರಂಪ್ ಆರ್ಥಿಕ ನಿರ್ಬಂಧಗಳಿಗೆ ಚೀನಾ ಖಡಕ್ ಎಚ್ಚರಿಕೆ

ಟೆಹ್ರಾನ್ ಕಠಿಣ ಷರತ್ತು: ಕೇವಲ ಒಮಾನ್ ಜೊತೆಗಿನ ಒಪ್ಪಂದದಿಂದ ಜಲಸಂಧಿ ತೆರೆಯುವುದಿಲ್ಲ; ಇರಾನಿಯನ್ ಬಂದರುಗಳ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ತೆರವು ಹಾಗೂ ಹಾನಿ ಪರಿಹಾರ ನೀಡಿದರೆ ಮಾತ್ರ ಸಂಪೂರ್ಣ ಮುಕ್ತ ಸಂಚಾರ ಸಾಧ್ಯ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸ್ಪಷ್ಟಪಡಿಸಿದೆ.

45 ಹಡಗುಗಳ ಕಪ್ಪುಪಟ್ಟಿ: ಇರಾನ್ ನಿರ್ಬಂಧ ಕಣ್ತಪ್ಪಿಸಿ ತೈಲ ವರ್ಗಾವಣೆ ಮಾಡುತ್ತಿದ್ದ 45 ಸರಕು ಹಡಗುಗಳನ್ನು ಇರಾನ್ ಕಪ್ಪುಪಟ್ಟಿಗೆ ಸೇರಿಸಿದೆ.

ಭಾರತದ ಮೇಲಿನ ನೇರ ಪರಿಣಾಮ: ಭಾರತವು ತನ್ನ ಕಚ್ಚಾ ತೈಲ ಆಮದಿನ ಶೇಕಡಾ 60 ಕ್ಕೂ ಹೆಚ್ಚು ಪಾಲನ್ನು ಮತ್ತು ಎಲ್‌ಎನ್‌ಜಿ (LNG) ಅನಿಲವನ್ನು ಪರ್ಷಿಯನ್ ಕೊಲ್ಲಿಯಿಂದ ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ತರಿಸಿಕೊಳ್ಳುತ್ತದೆ. ಈ ಮಾರ್ಗದಲ್ಲಿನ ಸಣ್ಣ ಅಡಚಣೆಯೂ ಭಾರತದಲ್ಲಿ ಇಂಧನ ಪೂರೈಕೆ ಮತ್ತು ತೈಲ ಬೆಲೆಗಳ ಮೇಲೆ ಒತ್ತಡ ತರಬಹುದು.

ಜಾಗತಿಕ ತೈಲ ಮಾರುಕಟ್ಟೆ: ವಿಶ್ವದ ಒಟ್ಟು ತೈಲ ಮತ್ತು ಅನಿಲ ವ್ಯಾಪಾರದ 20 ಪ್ರತಿಶತ (ಐದನೇ ಒಂದು ಭಾಗ) ಈ ಜಲಸಂಧಿಯ ಮೂಲಕವೇ ಸಾಗುವುದರಿಂದ, ಬಿಕ್ಕಟ್ಟು ಶಮನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us