ವಾಷಿಂಗ್ಟನ್: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತಮ್ಮ ಕಾರ್ಯಾಂಗ ವ್ಯಾಪ್ತಿಯಲ್ಲಿ ಭಾರತೀಯ ಮೂಲದ ಅಮೆರಿಕನ್ನರಿಗೆ ಹೆಚ್ಚಿನ ಸ್ಥಾನ-ಮಾನ ನೀಡುತ್ತಿದ್ದಾರೆ. ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತೀಯ ಮೂಲದವರು ಎಂಬುದೇ ಒಂದು ವಿಶೇಷ ಆಗಿರುವಾಗ, ಇತ್ತೀಚೆಗೆ ಜೋ ಬೈಡನ್ ಹೊಸದಾಗಿ ರಚಿಸಿದ್ದ ಏಜೆನ್ಸಿ ಪರಿಶೀಲನಾ ತಂಡದಲ್ಲೂ 20 ಮಂದಿ ಭಾರತೀಯ ಮೂಲದವರಿಗೆ ಸ್ಥಾನ ನೀಡಿದ್ದರು.
ಇದೀಗ ಇನ್ನೋರ್ವ ಭಾರತೀಯನಿಗೆ ಜೋ ಬೈಡನ್ ಮನ್ನಣೆ ನೀಡಿದ್ದಾರೆ. ವೈಟ್ ಹೌಸ್ನ ಸಂವಹನ ಮತ್ತು ಮಾಧ್ಯಮ ವಿಭಾಗಕ್ಕೆ ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಿದ ಬೈಡೆನ್, ಭಾರತೀಯ ಮೂಲದ ವೇದಾಂತ್ ಪಟೇಲ್ರನ್ನು ಸಹಾಯಕ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಪಟೇಲ್ ಇಷ್ಟು ದಿನ ಬೈಡನ್ ಉದ್ಘಾಟನಾ ಸಮಿತಿಯ ವಕ್ತಾರ ಆಗಿದ್ದರು. ಹಾಗೇ ಬೈಡನ್ ಚುನಾವಣಾ ಪ್ರಚಾರದ ವೇಳೆ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಅಮೆರಿಕ ಸಂಸದೆ, ಭಾರತೀಯ ಮೂಲದ ಪ್ರಮೀಳಾ ಜಯಪಾಲ್ರ ಸಂವಹನ ನಿರ್ದೇಶಕರಾಗಿ, ಸಂಸದ ಮೈಕ್ ಹೊಂಡಾರ ಸಂವಹನ ನಿರ್ದೇಶಕರಾಗಿ ಮತ್ತು ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಯ ಪಾಶ್ಚಿಮಾತ್ಯ ಪ್ರಾದೇಶಿಕ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ವೇದಾಂತ್ ಹುಟ್ಟಿದ್ದು ಭಾರತದಲ್ಲಿ..ಬೆಳೆದಿದ್ದೆಲ್ಲ ಕ್ಯಾಲಿಫೋರ್ನಿಯಾದಲ್ಲಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಫ್ಲೋರಿಡಾ ಯೂನಿವರ್ಸಿಟಿಯಲ್ಲಿ ಪದವೀಧರರಾಗಿದ್ದಾರೆ. ಜೋ ಬೈಡನ್ ಶುಕ್ರವಾರ ಒಟ್ಟು 16 ಜನರನ್ನು ಶ್ವೇತಭವನದ ಸಂವಹನ ಮತ್ತು ಪತ್ರಿಕಾ ಸಿಬ್ಬಂದಿಯನ್ನಾಗಿ ನೇಮಕ ಮಾಡಿದ್ದು, ಅದರಲ್ಲಿ ವೇದಾಂತ್ಗೆ ಒಂದು ಆಯಕಟ್ಟಿನ ಸ್ಥಾನ ನೀಡಲಾಗಿದೆ.
ಅಮೆರಿಕ ರಕ್ಷಣಾ ಕಾಯ್ದೆಗೇ ಕೊಕ್ಕೆ ಹಾಕಿ ಕುಳಿತ ಟ್ರಂಪ್: ಭಾರತದ ಮೇಲೇನು ಪರಿಣಾಮ?
Published On - 11:18 am, Sat, 19 December 20