AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keir Starmer Resigns: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ

UK PM Keir Starmer Resigns: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬ್ರಿಟಿಷ್ ರಾಜಕೀಯದಲ್ಲಿ ನಾಟಕೀಯ ತಿರುವು ನೀಡಿದೆ. ತೀವ್ರ ರಾಜಕೀಯ ಆರ್ಥಿಕ ಬಿಕ್ಕಟ್ಟು, ಜೀವನ ವೆಚ್ಚ ಏರಿಕೆ ಹಾಗೂ ಪಕ್ಷದೊಳಗಿನ ಒತ್ತಡ ಇದಕ್ಕೆ ಪ್ರಮುಖ ಕಾರಣ. ಆಂಡಿ ಬರ್ನ್‌ಹ್ಯಾಮ್ ಸವಾಲು ಮತ್ತು ಇತರ ಪಕ್ಷಗಳ ಪೈಪೋಟಿಯೂ ಇತ್ತು. ಲೇಬರ್ ಪಕ್ಷವನ್ನು ಅಧಿಕಾರಕ್ಕೆ ತಂದ ಬಗ್ಗೆ ಸ್ಟಾರ್ಮರ್ ತಮ್ಮ ಸಾಧನೆ ಸಮರ್ಥಿಸಿಕೊಂಡರು. ಮುಂದಿನ ಪ್ರಧಾನಿ ಯಾರೆಂಬ ಕುತೂಹಲ ಮೂಡಿಸಿದೆ.

Keir Starmer Resigns: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ, 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ
ಕೀರ್ ಸ್ಟಾರ್ಮರ್ Image Credit source: The Guardian
ನಯನಾ ರಾಜೀವ್
|

Updated on:Jun 22, 2026 | 2:33 PM

Share

ಲಂಡನ್, ಜೂನ್ 22: ತೀವ್ರ ರಾಜಕೀಯ ಆರ್ಥಿಕ ಬಿಕ್ಕಟ್ಟು ಹಾಗೂ ಸ್ವಪಕ್ಷದೊಳಗಿನ ಭಾರಿ ಒತ್ತಡಕ್ಕೆ ಮಣಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸೋಮವಾರ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಜುಲೈ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದ ಸ್ಟಾರ್ಮರ್, ಕೇವಲ ಎರಡು ವರ್ಷಗಳಲ್ಲೇ ಅಧಿಕಾರದಿಂದ ಕೆಳಗಿಳಿಯುವಂತಾಗಿರುವುದು ಬ್ರಿಟನ್ ರಾಜಕೀಯದಲ್ಲಿ ನಾಟಕೀಯ ತಿರುವು ನೀಡಿದೆ. ಕಳೆದ 10 ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಪ್ರಧಾನಿ ಇವರಾಗಿದ್ದಾರೆ.

ಲಂಡನ್‌ನ ಪ್ರಧಾನಿ ಅಧಿಕೃತ ನಿವಾಸ ’10 ಡೌನಿಂಗ್ ಸ್ಟ್ರೀಟ್’ನ ಹೊರಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, “ಮುಂದಿನ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ನಾನು ಸರಿಯಾದ ವ್ಯಕ್ತಿಯೇ ಎಂದು ನನ್ನ ಪಕ್ಷ ಕೇಳುತ್ತಿದ್ದ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದರು.

ರಾಜೀನಾಮೆಗೆ ಪ್ರಮುಖ ಕಾರಣಗಳೇನು? ಆಂಡಿ ಬರ್ನ್‌ಹ್ಯಾಮ್ ಸವಾಲು: ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ ಇತ್ತೀಚೆಗೆ ಸಂಸತ್ ಚುನಾವಣೆಯಲ್ಲಿ ಗೆದ್ದು ಬಂದ ತಕ್ಷಣ, ಪ್ರಧಾನಿ ಸ್ಟಾರ್ಮರ್ ನಾಯಕತ್ವಕ್ಕೆ ಲೇಬರ್ ಪಕ್ಷದೊಳಗೇ ಬಹಿರಂಗ ಸವಾಲು ಎದುರಾಯಿತು. ಬಹುತೇಕ ಸಂಸದರು ಬರ್ನ್‌ಹ್ಯಾಮ್ ಬೆಂಬಲಕ್ಕೆ ನಿಂತಿದ್ದು ಸ್ಟಾರ್ಮರ್ ಇಕ್ಕಟ್ಟಿಗೆ ಸಿಲುಕಿದರು.

ಆರ್ಥಿಕ ಬಿಕ್ಕಟ್ಟು ಮತ್ತು ಜೀವನ ವೆಚ್ಚ: ಬ್ರಿಟನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ (Cost of Living) ಗಗನಕ್ಕೇರಿದೆ. ಸಾರ್ವಜನಿಕ ಸೇವೆಗಳನ್ನು ಸುಧಾರಿಸುವಲ್ಲಿ ಮತ್ತು ಭರವಸೆ ನೀಡಿದ್ದ ಆರ್ಥಿಕ ಬೆಳವಣಿಗೆಯನ್ನು ತಲುಪಿಸುವಲ್ಲಿ ಸ್ಟಾರ್ಮರ್ ಸರ್ಕಾರ ಸಂಪೂರ್ಣ ಹೆಣಗಾಡುತ್ತಿತ್ತು.

ಮತ್ತಷ್ಟು ಓದಿ: ವಲಸೆ ನೀತಿಯಲ್ಲಿ ಫೇಲ್, ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್

ಇತರ ಪಕ್ಷಗಳ ಪೈಪೋಟಿ: ಬ್ರಿಟನ್‌ನಲ್ಲಿ ಗ್ರೀನ್ ಪಾರ್ಟಿ ಮತ್ತು ರಿಫಾರ್ಮ್ ಯುಕೆ ಪಕ್ಷಗಳು ಜನಪ್ರಿಯತೆ ಗಳಿಸುತ್ತಿದ್ದು, ಲೇಬರ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದವು. ಇದರಿಂದಾಗಿ ಪಕ್ಷದ ಉಳಿವಿಗೆ ನಾಯಕತ್ವ ಬದಲಾವಣೆ ಅನಿವಾರ್ಯವಾಯಿತು.

ತಮ್ಮ ಸಾಧನೆಗಳನ್ನು ಸಮರ್ಥಿಸಿಕೊಂಡ ಸ್ಟಾರ್ಮರ್ ಪಕ್ಷದ ಇಮೇಜ್ ಬದಲಾಯಿಸಿದ್ದೆ: “ಆರು ವರ್ಷಗಳ ಹಿಂದೆ ನಾನು ಲೇಬರ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಾಗ ಪಕ್ಷ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಠಿಣ ಪರಿಶ್ರಮದಿಂದ ನಾವು ಪಕ್ಷವನ್ನು ಅಧಿಕಾರಕ್ಕೆ ತಂದೆವು. ನಮ್ಮ ಆಡಳಿತದಲ್ಲಿ ವೇತನಗಳು ವೇಗವಾಗಿ ಬೆಳೆದವು, ಅತಿ ದೊಡ್ಡ ಕಾರ್ಮಿಕ ಸುಧಾರಣೆ ತಂದೆವು ಹಾಗೂ ದೇಶದ ಅರ್ಧ ಮಿಲಿಯನ್ (5 ಲಕ್ಷ) ಜನರನ್ನು ಬಡತನದಿಂದ ಮುಕ್ತಗೊಳಿಸಿದೆವು ಎಂದು ಸ್ಟಾರ್ಮರ್ ತಮ್ಮ ಸಾಧನೆಗಳನ್ನು ನೆನೆದರು.

ಬ್ರಿಟನ್‌ನ ಮುಂದಿನ ಪ್ರಧಾನಿ ಯಾರು? ಕೀರ್ ಸ್ಟಾರ್ಮರ್ ಅವರು ರಾಜೀನಾಮೆ ನೀಡಿದ್ದರೂ, ಲೇಬರ್ ಪಕ್ಷವು ತನ್ನ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ಅವರು ಮಧ್ಯಂತರ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸದ್ಯಕ್ಕೆ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು:

ಆಂಡಿ ಬರ್ನ್‌ಹ್ಯಾಮ್: ಪಕ್ಷದ ಸಂಸದರ ಪ್ರಬಲ ಬೆಂಬಲ ಹೊಂದಿರುವ ನಾಯಕ.

ವೆಸ್ ಸ್ಟ್ರೀಟಿಂಗ್: ಮಾಜಿ ಆರೋಗ್ಯ ಕಾರ್ಯದರ್ಶಿಯಾಗಿರುವ ಇವರು ಕೂಡ ನಾಯಕತ್ವ ಸ್ಪರ್ಧೆಗೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಇರಾನ್-ಅಮೆರಿಕ ಬಿಕ್ಕಟ್ಟಿನ ನಡುವೆ ಬ್ರಿಟನ್ ಪ್ರಧಾನಿ ರಾಜೀನಾಮೆ ನೀಡಿರುವುದು ಜಾಗತಿಕ ವಲಯದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:30 pm, Mon, 22 June 26

Follow Us