AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀನ್ಯಾದಲ್ಲಿ ಪ್ರವಾಸಿ ಹೆಲಿಕಾಪ್ಟರ್ ಪತನ: ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ, ಪತ್ನಿ ಹಾಗೂ 5 ಅಮೆರಿಕನ್ನರ ದುರ್ಮರಣ

ಕೀನ್ಯಾದಲ್ಲಿ ಪ್ರವಾಸಿ ಹೆಲಿಕಾಪ್ಟರ್ ಪತನಗೊಂಡು ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ, ಅವರ ಪತ್ನಿ ಹಾಗೂ ಐವರು ಅಮೆರಿಕನ್ನರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ನೈರೋಬಿ ಬಳಿಯ ವನ್ಯಜೀವಿ ಅಭಯಾರಣ್ಯದಿಂದ ಹೊರಟಿದ್ದ ಹೆಲಿಕಾಪ್ಟರ್ ಓಲೋಲೋಕ್ವೆ ಪರ್ವತದ ಬುಡದಲ್ಲಿ ಅಪ್ಪಳಿಸಿದೆ. ಅಪಘಾತಕ್ಕೆ ತಾಂತ್ರಿಕ ದೋಷ ಅಥವಾ ಪ್ರತಿಕೂಲ ಹವಾಮಾನ ಕಾರಣವೇ ಎಂದು ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಕೀನ್ಯಾದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿವೆ.

ಕೀನ್ಯಾದಲ್ಲಿ ಪ್ರವಾಸಿ ಹೆಲಿಕಾಪ್ಟರ್ ಪತನ: ಈಕ್ವೆಡಾರ್ ಗುಪ್ತಚರ ಮುಖ್ಯಸ್ಥ, ಪತ್ನಿ ಹಾಗೂ 5 ಅಮೆರಿಕನ್ನರ ದುರ್ಮರಣ
ಹೆಲಿಕಾಪ್ಟರ್ ಪತನ
ನಯನಾ ರಾಜೀವ್
|

Updated on:Aug 20, 2026 | 7:54 AM

Share

ನೈರೋಬಿ,ಆಗಸ್ಟ್ 20: ಮಧ್ಯ ಕೀನ್ಯಾದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ(Helicopter Crash)ಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ, ಈಕ್ವೆಡಾರ್ ದೇಶದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥ, ಅವರ ಪತ್ನಿ ಮತ್ತು ಐವರು ಅಮೆರಿಕದ ಪ್ರಜೆಗಳು ಸೇರಿದಂತೆ ಎಲ್ಲಾ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೀನ್ಯಾ ರಾಜಧಾನಿ ನೈರೋಬಿಯ ಉತ್ತರ ಭಾಗದಲ್ಲಿರುವ ಸಾಂಬುರು ಕೌಂಟಿಯ ಲೊಯಿಸಾಬಾ ವನ್ಯಜೀವಿ ಅಭಯಾರಣ್ಯದಿಂದ ಹೆಲಿಕಾಪ್ಟರ್ ಹೊರಟ ಕೆಲವೇ ಕ್ಷಣಗಳಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ.

ಗುಪ್ತಚರ ಮುಖ್ಯಸ್ಥ ಮತ್ತು ಪತ್ನಿ ಸಾವು: ಈಕ್ವೆಡಾರ್ ದೇಶದ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥರಾಗಿದ್ದ 42 ವರ್ಷದ ಮೈಕೆಲ್ ಸೆನ್ಸಿ-ಕಾಂಟುಗಿ ಮತ್ತು ಅವರ ಪತ್ನಿ ಸ್ಟೆಫನಿ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೈಕೆಲ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರ ಅತ್ಯಂತ ಆಪ್ತರಾಗಿದ್ದರು.

ಮೃತಪಟ್ಟ ಐವರು ಅಮೆರಿಕನ್ ಪ್ರಜೆಗಳಲ್ಲಿ ಸ್ಪ್ಯಾನಿಷ್ ಪ್ರಸಾರ ಸಂಸ್ಥೆ ‘ಟೆಲಿಮುಂಡೋ’ ಮತ್ತು ‘ಎನ್‌ಬಿಸಿ ಯುನಿವರ್ಸಲ್’ನ ಹಿರಿಯ ವ್ಯವಸ್ಥಾಪಕ ಜೋಸ್ ಆಲ್ಬರ್ಟೊ ಸುವಾರೆಜ್ ಸೇರಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಓರ್ವ ಪೈಲಟ್ ಹಾಗೂ ಆರು ಮಂದಿ ಪ್ರವಾಸಿಗರಿದ್ದರು. ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮತ್ತಷ್ಟು ಓದಿ: Plane Crash: ಪೆರುವಿನ ನಾಜ್ಕಾ ಲೈನ್ಸ್ ಬಳಿ ಪ್ರವಾಸಿ ವಿಮಾನ ಪತನ: 11 ವಿದೇಶಿಯರು ಸೇರಿ ಎಲ್ಲಾ 13 ಮಂದಿ ದಾರುಣ ಸಾವು

ಓಲೋಲೋಕ್ವೆ ಪರ್ವತದ ಬುಡದಲ್ಲಿ ಪತನ: ಸಮುದ್ರ ಮಟ್ಟದಿಂದ ಸುಮಾರು 2 ಸಾವಿರ ಮೀಟರ್ ಎತ್ತರವಿರುವ ಪ್ರಸಿದ್ಧ ಪಾದಯಾತ್ರೆ ತಾಣವಾದ ‘ಮೌಂಟ್ ಓಲೋಲೋಕ್ವೆ’ ಬುಡದಲ್ಲಿ ಹೆಲಿಕಾಪ್ಟರ್ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಮತ್ತು ಬೆಂಕಿ ಆವರಿಸಿತ್ತು.

ರಕ್ಷಣಾ ಕಾರ್ಯಾಚರಣೆ ಸ್ಥಗಿತ: ಕಡಿದಾದ ಬೆಟ್ಟಗಳು, ಬಂಡೆಗಳು ಮತ್ತು ಕತ್ತಲೆಯ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮೃತದೇಹಗಳನ್ನು ಹೊರತೆಗೆಯುವ ಕೆಲಸ ಇಂದು ಮುಂದುವರೆಯಲಿದೆ.

ಹೆಲಿಕಾಪ್ಟರ್ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (KCAA) ಮತ್ತು ವಿಮಾನ ಅಪಘಾತ ತನಿಖಾ ವಿಭಾಗ (AAID) ಉನ್ನತ ಮಟ್ಟದ ತನಿಖೆ ಆರಂಭಿಸಿವೆ.

ಕೀನ್ಯಾದಲ್ಲಿ ಹೆಚ್ಚುತ್ತಿರುವ ವಾಯು ಅಪಘಾತಗಳು: ಕೀನ್ಯಾದ ವನ್ಯಜೀವಿ ಸಫಾರಿ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಪ್ರವಾಸಗಳು ಜನಪ್ರಿಯವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಕಳೆದ ಮಾರ್ಚ್ ತಿಂಗಳಿನಲ್ಲೂ ಸಂಸದರೊಬ್ಬರು ಸೇರಿದಂತೆ ಆರು ಜನರು ಇದೇ ರೀತಿಯ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:54 am, Thu, 20 August 26

Follow Us