ಒಂದಿಲ್ಲೊಂದು ಕಾರಣಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಸುದ್ದಿಯಲ್ಲಿರುತ್ತಾರೆ. ತಮ್ಮ ದೇಶದಲ್ಲಿ ಸದಾ ಶಿಸ್ತು ಪಾಲನೆಯಾಗಬೇಕು ಎನ್ನುವ ಕಿಮ್ ಜಾಂಗ್ ಉನ್ ಕಣ್ಣು ಇದೀಗ ಪಾಪ್ ಸಂಗೀತದ ಮೇಲೆಯೂ ಬಿದ್ದಿದೆ. ದಕ್ಷಿಣ ಕೊರಿಯಾದ ಖ್ಯಾತ ಕೆ-ಪಾಪ್ ಅಥವಾ ಕೊರಿಯನ್ ಪಾಪ್ ಸಂಗೀತವನ್ನು ತಮ್ಮ ದೇಶದಲ್ಲಿ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. K-Pop ಸಂಗೀತವನ್ನು ಅತ್ಯಂತ ವಿಷಕಾರಿ ಕ್ಯಾನ್ಸರ್ ಎಂದು ಕರೆದಿರುವ ಉನ್, ಈ ಸಂಗೀತ ದೇಶದ ಯುವಕರನ್ನು ಅಡ್ಡದಾರಿಗೆ ಇಳಿಸುತ್ತಿದೆ. ಇಲ್ಲಿನ ಸಂಸ್ಕೃತಿಗೆ ಮಾರಕವಾಗಿದೆ. ಯುವಜನರು ಪಾಶ್ಚಿಮಾತ್ಯ, ಬಂಡವಾಳಶಾಹಿ ಜೀವನ ಶೈಲಿಗೆ ಮಾರುಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊರಿಯಾದ ಕೆ-ಪಾಪ್ ಸಂಗೀತ, ಸಿನಿಮಾಗಳಿಂದ ಪ್ರಭಾವಿತರಾದ ಉತ್ತರ ಕೊರಿಯಾದ ಯುವಜನರು ತಮ್ಮ ಉಡುಪು, ಹೇರ್ಸ್ಟೈಲ್, ಮಾತಿನ ಶೈಲಿ, ನಡವಳಿಕೆಗಳಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಯುವಜನತೆ, ಒದ್ದೆಯಾದ ಗೋಡೆ ಕುಸಿಯುವಂತೆ ಸಂಸ್ಕೃತಿ, ಜೀವನಶೈಲಿಯಲ್ಲಿ ಕುಸಿಯುತ್ತಿದ್ದಾರೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಈಗೆರಡು ವರ್ಷದ ಹಿಂದೆ ಕಿಮ್ ಜಾಂಗ್ ಉನ್, ದಕ್ಷಿಣ ಕೊರಿಯಾದ ಗಾಯಕನೊಬ್ಬನ ಕೆ-ಪಾಪ್ ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 2018ರಲ್ಲಿ ದಕ್ಷಿಣ ಕೊರಿಯಾದಿಂದ ಉತ್ತರ ಕೊರಿಯಾಕ್ಕೆ ಬಂದಿದ್ದ ಪಾಪ್ ಸಂಗೀತ ತಂಡ ಪ್ಯಾಂಗ್ಯಾಂಗ್ನಲ್ಲಿ ಪ್ರದರ್ಶನ ನೀಡಿತ್ತು. ಅದರಲ್ಲಿ ರೆಡ್ ವೆಲ್ವೆಟ್ ಗುಂಪು, ಚೋ ಯಾಂಗ್ ಪಿಲ್ ಬ್ಯಾಂಡ್ ಸದಸ್ಯರು ಇದ್ದರು. ಇವರೆಲ್ಲ ಸೇರಿ ನೀಡಿದ್ದ ಸಂಗೀತ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಕೂಡ ಹಾಜರಾಗಿದ್ದರು. ಹಾಗೇ, ದಕ್ಷಿಣ ಕೊರಿಯಾ ಕಲಾವಿದರ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉತ್ತರ ಕೊರಿಯಾದ ಮೊದಲ ಅಧ್ಯಕ್ಷರಾಗಿದ್ದರು. ಆದರೆ ಈಗ ಆ ಪಾಪ್ ಸಂಗೀತವನ್ನು ಉತ್ತರ ಕೊರಿಯಾದಲ್ಲಿ ನಿಷೇಧಿಸುವ ನಿರ್ಧಾರ ಕೈಗೊಂಡಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಸಂಗೀತವನ್ನು ನಿಷೇಧ ಮಾಡಿದ ಮೇಲೆ, ಯಾರಾದರೂ ಇದನ್ನು ಕೇಳಿದರೆ, ಪ್ರದರ್ಶನ ಮಾಡಿದರೆ ಅಂಥವರನ್ನು ಜೈಲಿಗೆ ಹಾಕುವ.. ಪದೇಪದೆ ಮಾಡಿದರೆ ಅವರನ್ನು ಗಲ್ಲಿಗೇರಿಸುವ ಕಾನೂನನ್ನೂ ತರುವ ಸಾಧ್ಯತೆ ದಟ್ಟವಾಗಿದೆ ಎಂದು ಕೆಲವು ಮಾಧ್ಯಮಗಳೂ ವರದಿ ಮಾಡಿದೆ.
ಅದೇನೋ ಗೊತ್ತಿಲ್ಲ, ಇತ್ತೀಚಿನ ತಿಂಗಳುಗಳಲ್ಲಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾದ ಪಾಪ್ ಸಂಸ್ಕೃತಿಯ ಬಗ್ಗೆ ಕಿಡಿಕಾರುತ್ತಿದ್ದಾರೆ. ಪಾಪ್ ನಾಟಕಗಳು, ವಿಡಿಯೋಗಳೆಂದರೆ ಮೂಗು ಮುರಿಯುತ್ತಿದ್ದಾರೆ. ಅಂತೆಯೇ, ಸಾಮಾಜಿಕ ಜೀವನಕ್ಕೆ ಸಭ್ಯವೆನಿಸದ ಬಣ್ಣಬಣ್ಣದ, ವಿಚಿತ್ರ ರೂಪದ ಕೇಶವಿನ್ಯಾಸ ಮಾಡಿಕೊಳ್ಳುವದನ್ನು ಉತ್ತರ ಕೊರಿಯಾ ಆಡಳಿತ ಇತ್ತೀಚೆಗೆ ನಿಷೇಧಿಸಿದೆ. ಇತ್ತೀಚೆಗೆ ಜಾರಿತಂದ ಹೊಸ ಕಾನೂನಿನ ಅನ್ವಯ ಯುವಕರು ಅಥವಾ ಯುವತಿಯರು, ಮಾನ್ಯ ಮಾಡಿದ 215 ಕೇಶ ವಿನ್ಯಾಸಗಳಲ್ಲಿ ಯಾವುದಾದರೂ ಒಂದನ್ನು ಮಾಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Coronavirus cases in India: ಭಾರತದಲ್ಲಿ ಕೊವಿಡ್ ಪ್ರಕರಣ ಇಳಿಮುಖ, 70421 ಹೊಸ ಕೊರೊನಾವೈರಸ್ ಸೋಂಕು ಪ್ರಕರಣ ದಾಖಲು
(Kim Jong Un Wants to Ban K Pop Music in North Korea)