ಸಿಡ್ನಿ: ಪ್ರಧಾನಿ ಸ್ಕಾಟ್ ಮಾರಿಸ್ಸನ್ರ ಆಶಯದಂತೆ ಆಸ್ಟ್ರೇಲಿಯಾ ತನ್ನ ರಾಷ್ಟ್ರಗೀತೆಯಲ್ಲಿ ಚಿಕ್ಕ ಬದಲಾವಣೆ ಮಾಡಿದೆ. ದೇಶದ ಏಕತೆಯನ್ನು ಬಿಂಬಿಸುವ ದೃಷ್ಟಿಯಿಂದ ‘For we are young and free’ ಎನ್ನುವ ಸಾಲನ್ನು ‘For we are one and free’ ಎಂದು ಬದಲಾಯಿಸಲು ಗವರ್ನರ್ ಜನರಲ್ ಡೇವಿಡ್ ಹರ್ಲೇ ಸಮ್ಮತಿ ನೀಡಿದ್ದಾರೆ.
ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್, ದೇಶದ ಏಕತೆಯನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರಗೀತೆಯಲ್ಲಿ ಚಿಕ್ಕ ಬದಲಾವಣೆ ಮಾಡುವ ಕುರಿತು ಪ್ರಸ್ತಾಪಿಸಿದ್ದರು. ಅಖಂಡ ಆಸ್ಟ್ರೇಲಿಯಾದ ಕುರಿತು ನಾಗರಿಕರಲ್ಲಿ ಭಾವನೆಯನ್ನು ಬಲಗೊಳಿಸಲು ಏಕತೆಯ ಅಂಶವನ್ನು ಸೇರಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. 1984ರ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ರಾಷ್ಟ್ರಗೀತೆಯಲ್ಲಿ ಬದಲಾವಣೆ ಮಾಡಲಾಗಿದೆ.
ಆಧುನಿಕೀಕರಣಗೊಂಡಿರುವ ಆಸ್ಟ್ರೇಲಿಯಾಕ್ಕೆ ಪ್ರಾಚೀನ ಇತಿಹಾಸವಿದೆ. ನಮ್ಮ ಪೂರ್ವಜರ ಕುರಿತು ನಮಗೆ ಹೆಮ್ಮೆ ಮತ್ತು ಗೌರವವಿದೆ. ಆಧುನಿಕತೆ ಮತ್ತು ಪ್ರಾಚೀನ ಇತಿಹಾಸವನ್ನು ಸೇರಿಸಿ ದೇಶದ ಜನರಲ್ಲಿ ಒಗ್ಗಟ್ಟಿನ ಭಾವ ಮೂಡುವಂತೆ ‘ಏಕತೆ’ಯ ಅಂಶವನ್ನು ಸೇರಿಸಲಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್ ತಿಳಿಸಿದ್ದಾರೆ.
1978ರಲ್ಲಿ ಸಂಗೀತ ಸಂಯೋಜಕ ಪೀಟರ್ ಡೋಡ್ಸ್ ಮ್ಯಾಕ್ಕೋರ್ಮಿಕ್ ಸಂಯೋಜಿಸಿದ ಗೀತೆಯನ್ನು ಆಸ್ಟ್ರೇಲಿಯಾ ರಾಷ್ಟ್ರಗೀತೆಯನ್ನಾಗಿ ಘೋಷಿಸಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ರಾಷ್ಟ್ರಗೀತೆಯೆಂದು ಘೋಷಿಸಿದ್ದ God save the queen ಗೀತೆಯ ಬದಲಿಗೆ ‘Advance Australia Fair’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಪರಿಗಣಿಸಲಾಗಿತ್ತು.
Published On - 7:01 pm, Fri, 1 January 21