ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಮುಗಿದು ಫಲಿತಾಂಶ ಹೊರಬಂದರೂ ಟ್ರಂಪ್ ತನ್ನ ಸೋಲನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ತಯಾರಾದಂತಿಲ್ಲ. ಮತ ಎಣಿಕೆ ಸಂದರ್ಭದಿಂದಲೂ ಒಂದಿಲ್ಲೊಂದು ತಗಾದೆ ತೆಗೆಯುತ್ತಲೇ ಇರುವ ಟ್ರಂಪ್ ಇದೀಗ ಅಧಿಕಾರದ ನಂತರ ವೈಟ್ ಹೌಸ್ ಬಿಟ್ಟು ತೆರಳುವುದಕ್ಕೂ ಒಲ್ಲೆ ಎನ್ನುತ್ತಿದ್ದಾರಂತೆ. ಟ್ರಂಪ್ನ ಈ ವರ್ತನೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್ ಒಬಾಮ ಅವರಿಗೆ ಬೇಸರ ತರಿಸಿದ್ದು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಮಿಚೆಲ್ ಒಬಾಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಸಲಿಗೆ ಟ್ರಂಪ್ ನಮ್ಮ ವಿರುದ್ಧ ಬಿತ್ತಿದ ಸುಳ್ಳು, ದ್ವೇಷದ ನುಡಿಗಳನ್ನು ಎದೆಯಲ್ಲಿಟ್ಟುಕೊಂಡು ಅವರನ್ನು ಎದುರಾಗುವುದು ಅಷ್ಟು ಸುಲಭವಿರಲಿಲ್ಲ. ಆದರೆ, ನನಗೆ ಅಂದು ಎರಡು ಪಕ್ಷಗಳ ನಡುವಿನ ಜಟಾಪಟಿಗಿಂತಲೂ ಅಮೆರಿಕಾದ ವ್ಯವಸ್ಥೆ, ಸಂಪ್ರದಾಯ ಮುಖ್ಯವಾಗಿ ಕಂಡಿತು. ದೇಶದ ಜನರ ಹಿತಕ್ಕಾಗಿ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಲೇ ಬೇಕು ಎಂಬ ಅರಿವಿತ್ತು. ಆದ್ದರಿಂದ ಒಬಾಮಾ ಹಾಗೂ ನಾನು ಟ್ರಂಪ್ ದಂಪತಿಗಳನ್ನು ಗೌರವಯುತವಾಗಿ ಸ್ವಾಗತಿಸಿದ್ದೆವು. ಮೆಲನಿಯಾ ಟ್ರಂಪ್ ಜೊತೆ ಮುಕ್ತವಾಗಿ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ಭದ್ರತೆಯ ವಿಷಯದಿಂದ ವೈಟ್ಹೌಸ್ನಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ತನಕ ಆಕೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮಚಿತ್ತದಿಂದಲೇ ಉತ್ತರಿಸಿದ್ದೆ.
ನಮ್ಮ ಅಹಂಕಾರಕ್ಕಿಂತಲೂ ದೇಶ ಹಾಗೂ ದೇಶದ ಜನ ದೊಡ್ಡವರು ಎಂಬುದನ್ನು ಮರೆಯಬಾರದು. ನಾವು ಅಂದು ಟ್ರಂಪ್ ಅವರನ್ನು ಸ್ವಾಗತಿಸಿದ್ದು ನಮ್ಮ ಹೆಗ್ಗಳಿಕೆಯಲ್ಲ. ಬದಲಾಗಿ ಅದು ನಮ್ಮ ಕರ್ತವ್ಯವಾಗಿತ್ತು. ಸೋಲು, ಗೆಲುವು ಚುನಾವಣೆಗೆ ಮಾತ್ರ ಸೀಮಿತವಾಗಬೇಕು. ಫಲಿತಾಂಶದ ನಂತರ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡರೆ ದೇಶಕ್ಕೆ ನಷ್ಟ ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ ಅಧ್ಯಕ್ಷೀಯ ಅವಧಿ ಮುಗಿಯುತ್ತಿದ್ದಂತೆಯೇ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಅಮೆರಿಕಾದ ಸಂಪ್ರದಾಯವನ್ನು ಗೌರವಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.