ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್ವರ್ಕ್ ಕಟ್ ಆಗ್ತಿದೆ. ಈ ಡೈಲಾಗ್ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್ವರ್ಕ್ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್ ನೆಟ್ವರ್ಕ್ ಸ್ಥಾಪಿಸೋಕೆ ಸಜ್ಜಾಗಿದೆ.
ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ ಕಂಪನಿಯಾದ ನೋಕಿಯಾಗೆ ಚಂದ್ರನ ಮೇಲೆ 4G ಮೊಬೈಲ್ ನೆಟ್ವರ್ಕ್ ಸಜ್ಜುಗೊಳಿಸಲು ಆಯ್ಕೆ ಮಾಡಿದೆ. ಅದರಂತೆಯೇ, ನೋಕಿಯಾ 2022ರಷ್ಟೊತ್ತಿಗೆ ಚಂದ್ರನ ಮೇಲೆ ಸದೃಢ ಹಾಗೂ ವೈಪರೀತ್ಯಗಳನ್ನು ಎದುರಿಸುವಂಥ ಬಲಿಷ್ಠ 4G ನೆಟ್ವರ್ಕ್ ಸ್ಥಾಪಿಸಲಿದೆ.
ಅಂದ ಹಾಗೆ, ಚಂದ್ರನ ಮೇಲೆ ಮಾನವರು ತಿಂಗಳುಗಟ್ಟಲೇ ನೆಲೆಸಲು ನಾಸಾ ಸಂಸ್ಥೆಯು ವಸಾಹತುಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲಿ ನೆಲೆಸುವವರಿಗೆ ಸ್ಥಳೀಯವಾಗಿ ಮತ್ತು ಭೂಮಿಯೊಂದಿಗೆ ಸಂಪರ್ಕ ಕಲ್ಪಿಸಲು ಈ ನಾಸಾ ಈ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನೋಕಿಯಾ ಕಂಪನಿ ಅಮೆರಿಕದ ಇನ್ಟ್ಯೂಟಿವ್ ಮೆಷೀನ್ಸ್ ಎಂಬ ಗಗನನೌಕೆ ತಯಾರಿಕಾ ಕಂಪನಿಯ ಜೊತೆ ಕೈಜೋಡಿಸಿ ಚಂದ್ರನ ಮೇಲೆ ಮೊಬೈಲ್ ನೆಟ್ವರ್ಕ್ ಸ್ಥಾಪಿಸಲು ಬೇಕಾದ ದೂರಸಂಪರ್ಕ ಸಾಧನಗಳನ್ನು ರವಾನಿಸಲಿದೆ.