ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ; ಇನ್ನು 6 ತಿಂಗಳಲ್ಲಿ ಚುನಾವಣೆ

ಸೋಷಿಯಲ್ ಮೀಡಿಯಾ ಮೇಲಿನ ನಿರ್ಬಂಧವನ್ನು ಖಂಡಿಸಿ ನೇಪಾಳದಲ್ಲಿ ಶುರುವಾದ ಪ್ರತಿಭಟನೆ ತೀವ್ರ ಹಿಂಸಾಚಾರದ ರೂಪ ತಾಳಿದೆ. ಝೆನ್-ಜಿ ಯುವ ಪ್ರತಿನಿಧಿಗಳು ಮಧ್ಯಂತರ ಸರ್ಕಾರದ ನಾಯಕತ್ವಕ್ಕಾಗಿ ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಮಾಜಿ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಘೋಷಣೆ ಮಾಡಿದ್ದಾರೆ.

ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ; ಇನ್ನು 6 ತಿಂಗಳಲ್ಲಿ ಚುನಾವಣೆ
Nepal Violence

Updated on: Sep 11, 2025 | 3:49 PM

ಕಠ್ಮಂಡು, ಸೆಪ್ಟೆಂಬರ್ 11: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಝೆನ್ ಝಡ್ ಪ್ರತಿಭಟನಾ ಗುಂಪು ಇಂದು ಅಧಿಕೃತವಾಗಿ ಘೋಷಿಸಿದೆ. ಮುಂದಿನ 6 ತಿಂಗಳೊಳಗೆ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಗುವುದು, ಇದರಿಂದಾಗಿ ಜನರು, ಅದರಲ್ಲೂ ವಿಶೇಷವಾಗಿ ನೇಪಾಳದ ಯುವಕರು ತಮ್ಮ ಇಷ್ಟದ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ನೇಪಾಳವು ಸರ್ಕಾರದಿಂದ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಒತ್ತಾಯಿಸಲು ಯುವಜನರು, ಮುಖ್ಯವಾಗಿ ವಿದ್ಯಾರ್ಥಿಗಳು ನೇತೃತ್ವದ ವ್ಯಾಪಕ ಚಳುವಳಿಯಾದ ಜನರಲ್ ಝಡ್ ಪ್ರತಿಭಟನೆಗೆ ಸಾಕ್ಷಿಯಾಗಿದೆ. ತೆರಿಗೆ ಆದಾಯ ಮತ್ತು ಸೈಬರ್ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಸರ್ಕಾರವು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಷೇಧ ಹೇರಿದ ನಂತರ ಸೆಪ್ಟೆಂಬರ್ 8ರಂದು ಕಠ್ಮಂಡು, ಪೋಖರಾ, ಬುತ್ವಾಲ್ ಮತ್ತು ಬಿರ್ಗುಂಜ್ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು.

ಇದನ್ನೂ ಓದಿ: ನೇಪಾಳದಲ್ಲಿ ಹಿಂಸಾಚಾರ; ಜೈಲಿನಲ್ಲಿ 5 ಬಾಲಾಪರಾಧಿಗಳ ಸಾವು, 7000ಕ್ಕೂ ಅಧಿಕ ಕೈದಿಗಳು ಪರಾರಿ

ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಇಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಸರ್ಕಾರ ಹಠಾತ್ ನಿಷೇಧ ಹೇರಿದ ನಂತರ ನೇಪಾಳದಲ್ಲಿ ಪ್ರತಿಭಟನೆ  ಪ್ರಾರಂಭವಾಯಿತು. ನೇಪಾಳದ ವಾಟ್‌ನಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರ ವಿಧಿಸಿದ್ದ ಗಡುವನ್ನು ಪಾಲಿಸಲು ವಿಫಲವಾದ ಕಾರಣ ಸೋಷಿಯಲ್ ಮೀಡಿಯಾ ವೇದಿಕೆಗಳನ್ನು ನಿರ್ಬಂಧಿಸಲಾಯಿತು. ಇದನ್ನು ವಿರೋಧಿಸಿ ಆರಂಭವಾದ ಯುವಕರ ಪ್ರತಿಭಟನೆ ಬಳಿಕ ವ್ಯಾಪಕ ಭ್ರಷ್ಟಾಚಾರ ಮತ್ತು ಮುಕ್ತ ಭಾಷಣದ ದಮನದ ಬಗ್ಗೆ ಯುವಜನರ ಕೋಪದಿಂದಾಗಿ ಬೀದಿ ಪ್ರತಿಭಟನೆಗಳ ರೂಪ ತಳೆಯಿತು. ಫೆಡರಲ್ ಪಾರ್ಲಿಮೆಂಟ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಸ್ಥಳಗಳಲ್ಲಿ ಘರ್ಷಣೆಗಳು ನಡೆದವು. ನೇಪಾಳದ ಸ್ಥಾಪಿತ ರಾಜಕೀಯ ವರ್ಗವನ್ನು ಸಾಂಕೇತಿಕವಾಗಿ ತಿರಸ್ಕರಿಸುವ ಮೂಲಕ ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳು ಮತ್ತು ರಾಜಕೀಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡದ ನಡುವೆ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ