ದೆಹಲಿ, ಮೇ.19: ಸಿಂಗಾಪುರದಲ್ಲಿ ಕೊರೊನಾ ಸೋಂಕಿನ (Coronavirus) ಹೊಸ ಅಲೆ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಸಿಂಗಾಪುರದಲ್ಲಿ (Singapore) ಮತ್ತೊಮ್ಮೆ ಆತಂಕ ಶುರುವಾಗಿದೆ. ಮೇ 5ರಿಂದ ಮೇ 11ರವರೆಗೆ ಅಂದರೆ ಕೇವಲ ಒಂದು ವಾರದಲ್ಲಿ 25,900 ಜನರಿಗೆ ಕೊರೊನಾ ಸೋಂಕು ತಗುಲಿದೆ. ವಾರದಿಂದ ವಾರಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ಜನರಿಗೆ ಮಾಸ್ಕ್ ಧರಿಸುವಂತೆ ಸಿಂಗಾಪುರ ಸರ್ಕಾರ ಆದೇಶ ನೀಡಿದೆ. ಒಂದೇ ವಾರದಲ್ಲಿ ಶೇಕಡಾ 90ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.
‘ನಾವು ಮತ್ತೊಂದು ಕೋವಿಡ್ ಅಲೆಯ ಆರಂಭದಲ್ಲಿದ್ದೇವೆ. ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಮುಂದಿನ ಒಂದೆರಡು ವಾರಗಳಲ್ಲಿ ಕೋವಿಡ್ ಸೋಂಕು ಉತ್ತುಂಗಕ್ಕೆ ತಲುಪಬಹುದು. ಮುಂದಿನ 2ರಿಂದ 4 ವಾರಗಳಲ್ಲಿ, ಅಂದರೆ ಜೂನ್ ಅಂತ್ಯದ ವೇಳೆಗೆ ಅಲೆ ಗರಿಷ್ಟ ಮಟ್ಟ ತಲುಪಲಿದೆ’ ಎಂದು ಆರೋಗ್ಯ ಇಲಾಖೆ ಸಚಿವ ಓಂಗ್ ಯೆ ಕುಂಗ್ ತಿಳಿಸಿದ್ದಾರೆ.
ಮೇ 5ರಿಂದ 11ರವರೆಗೆ 25,900 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅದಕ್ಕಿಂತ ಹಿಂದಿನ ವಾರದಲ್ಲಿ ಕೊರೊನಾ ಸೋಂಕು 13,700ರಷ್ಟಿತ್ತು. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಸರಾಸರಿ 250ನ್ನು ದಾಟಿದ್ದು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ದಾಖಲಾಗುವ ದೈನಂದಿನ ಸರಾಸರಿ ಪ್ರಕರಣ 3 ಆಗಿದೆ.
ಕೊರೊನಾ ಹೆಚ್ಚಳ ಹಿನ್ನೆಲೆ ಸಿಂಗಾಪುರದ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗುತ್ತಿದೆ. ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಹಾಗೂ ಸೂಕ್ತ ರೋಗಿಗಳನ್ನು ಮನೆಗೆ ವಾಪಾಸು ಕಳುಹಿಸಿ ಸಂಚಾರಿ ಚಿಕಿತ್ಸಾಲಯದ ಸೇವೆ ಮುಂದುವರಿಸುವಂತೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: ಕೊರೊನಾ ಕೆಪಿ2 ಉಪ ತಳಿಯಿಂದ ಕರ್ನಾಟಕಕ್ಕೂ ಇದೆಯೇ ಆತಂಕ; ಇಲ್ಲಿದೆ ತಜ್ಞರ ಅಭಿಪ್ರಾಯ
ಸೋಂಕಿನ ಪ್ರಮಾಣ ಒಂದು ಬಾರಿ ದ್ವಿಗುಣಗೊಂಡರೆ ಆರೋಗ್ಯ ಕೇಂದ್ರಗಳಲ್ಲಿ 500 ರೋಗಿಗಳು ದಾಖಲಾಗಲಿದ್ದು ಇದನ್ನು ನಿರ್ವಹಿಸಬಹುದು. ಆದರೆ ಎರಡನೇ ಬಾರಿ ದ್ವಿಗುಣಗೊಂಡರೆ ಆರೋಗ್ಯ ಕೇಂದ್ರಗಳಲ್ಲಿ 1000 ರೋಗಿಗಳು ದಾಖಲಾಗಲಿದ್ದು ಇದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಹೊರೆಯಾಗಲಿದೆ. ಒಂದು ಸಾವಿರ ಹಾಸಿಗೆಗಳು ಒಂದು ಪ್ರಾದೇಶಿಕ ಆಸ್ಪತ್ರೆಗೆ ಸಮವಾಗಿದೆ. ಆದ್ದರಿಂದ ಸಂಭಾವ್ಯ ಸಮಸ್ಯೆಯನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
60 ವರ್ಷ ಮೇಲ್ಪಟ್ಟವರು, ವೈದ್ಯಕೀಯವಾಗಿ ದುರ್ಬಲ ವ್ಯಕ್ತಿಗಳು ಮತ್ತು ವೃದ್ಧಾಶ್ರಮದ ನಿವಾಸಿಗಳು ಸೇರಿದಂತೆ ತೀವ್ರತರವಾದ ಅನಾರೋಗ್ಯದ ಅಪಾಯದಲ್ಲಿರುವವರು ಕಳೆದ 12 ತಿಂಗಳಲ್ಲಿ ಬೂಸ್ಟರ್ ಲಸಿಕೆ ಪಡೆಯದಿದ್ದರೆ ತಕ್ಷಣ ಬೂಸ್ಟರ್ ಲಸಿಕೆ ಪಡೆಯುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ